ವಿಶೇಷ ಅಂಚೆ ಚೀಟಿ, ಪತ್ರಗಳ ಪ್ರದರ್ಶನ

ಅಂಚೆ ಪದ್ಧತಿ ಬಗ್ಗೆ ಮಕ್ಕಳಲ್ಲಿ ಜಾಗೃತಿ

ದಾವಣಗೆರೆ, ಮಾ.29- ಪ್ರಸ್ತುತ ಆಧುನಿಕ ಯುಗದಲ್ಲಿ ಯುವಪೀಳಿಗೆ ಮೊಬೈಲ್ ಮತ್ತು ಸಾಮಾಜಿಕ ಜಾಲತಾಣಗಳ ಮುಖೇನ ವೇಗದಲ್ಲಿ ಸಂದೇಶಗಳನ್ನು ರವಾನಿಸುತ್ತಾ ತಂತ್ರಜ್ಞಾನಕ್ಕೆ ಹೆಚ್ಚಾಗಿ ಮಾರುಹೋಗಿದ್ದಾರೆ.

ಆದರೆ, ಅಂಚೆ ಪತ್ರ ಬರವಣಿಗೆ ಮೂಲಕ ಕಷ್ಟ-ಸುಖಗಳ ಅವಶ್ಯ ಸಂದೇಶಗಳನ್ನು ರವಾನಿಸುವಲ್ಲಿನ ಫೀಲಿಂಗ್ ಅನುಭವ ಮತ್ತು ಅಂಚೆ ಚೀಟಿಗಳ ಬಳಕೆ ಬಗ್ಗೆ ಅರಿವಿಲ್ಲದಂತಾಗಿದೆ.

ಅಂಚೆ ಪತ್ರ ಮತ್ತು ಅಂಚೆ ಚೀಟಿಗಳ ಬಳಕೆಯ ಗತಕಾಲದ ವಾತಾವರಣವನ್ನು ಸೃಷ್ಟಿಸಿ, ಯುವಪೀಳಿಗೆಯಲ್ಲಿ ಅದರ ಮಹತ್ವದ ಅರಿವು ಬಿತ್ತುವ ಕೆಲಸವನ್ನು ನಗರದ ಪ್ರಧಾನ ಅಂಚೆ ಕಚೇರಿಯಿಂದ ಮಾಡಲಾಯಿತು. ಆ ಮುಖೇನ ಯುವ ಪೀಳಿಗೆಯ ಗಮನ ಸೆಳೆದು ಅಂಚೆ ಪದ್ಧತಿ ಜೀವಂತಿಕೆಗೆ ಸಾಕ್ಷಿಯಾಯಿತು.

ಇತ್ತೀಚೆಗೆ ನಗರದ ಪ್ರಧಾನ ಅಂಚೆ ಕಚೇರಿಯಲ್ಲಿ ಇಲಾಖೆ ಅಧಿಕಾರಿಗಳು ಕೆಲಸದ ಒತ್ತಡದ ನಡುವೆಯೂ ಯುವ ಸಮೂಹಕ್ಕೆ ಅಂಚೆ ಪತ್ರಗಳ ಬಳಕೆಗೆ ಆಸಕ್ತಿಯುಂಟು ಮಾಡುವ ಮತ್ತು ಅಂಚೆ ಚೀಟಿಗಳನ್ನು ಪರಿಚಯಿಸುವ ಹಂಬಲ ಹೊತ್ತು 1947ರಿಂದ 2022ರವರೆಗಿನ ವಿಭಿನ್ನ ಅಂಚೆ ಚೀಟಿಗಳು ಮತ್ತು ಪತ್ರಗಳ ಪ್ರದರ್ಶನ ಏರ್ಪಡಿಸಲಾಗಿತ್ತು. ಅಲ್ಲದೇ ಅಂಚೆ ಚೀಟಿ ಬಳಕೆ, ಸಂಗ್ರಹ ಮತ್ತು ಅಂಚೆ ಪತ್ರಗಳ ಕುರಿತಾಗಿ ಕ್ಷಿಜ್ ಪರೀಕ್ಷೆ ನಡೆಸಿ, ಅವುಗಳ ಬಗ್ಗೆ ಮತ್ತಷ್ಟು ಜ್ಞಾನವನ್ನು ಹೆಚ್ಚಿಸಲಾಯಿತು.

ಇಂತಹ ಸೂಕ್ತ ಅವಕಾಶ ನಗರದ ಬಾಡಾ ಕ್ರಾಸ್‌ನಲ್ಲಿರುವ ಜೈನ್ ಸ್ಕೂಲ್ ಮಕ್ಕಳಿಗೆ ಸಿಕ್ಕಿತ್ತು. ತಾವು ಸಂಗ್ರಹಿಸಿದ್ದ ಹಳೇ ಅಂಚೆ ಚೀಟಿಗಳು, ಅಂಚೆ ಲಕೋಟೆಗಳ ಕುರಿತು ಅಧಿಕಾರಿಗಳು ಮಕ್ಕಳಿಗೆ ಮಾಹಿತಿ ನೀಡಿ ಮನವರಿಕೆ ಮಾಡಿದರು.

ಸುಮಾರು 144 ಅಂಚೆ ಲಕೋಟೆಗಳು ಮತ್ತು 500 ಅಂಚೆ ಚೀಟಿಗಳನ್ನು ಪ್ರದರ್ಶಿಸಲಾಯಿತು. ಭಾರತದ ಹಿರಿಮೆ-ಗರಿಮೆ ಎತ್ತಿಹಿಡಿಯುವ ಪ್ರಾಣಿ, ಪಕ್ಷಿಗಳು, ದೇಶ ಬೆಳಗಿದ ಮಹಾನ್ ಚೇತನಗಳು, ಸಾಧಕರ ಚಿತ್ರವುಳ್ಳ ಅಂಚೆ ಚೀಟಿಗಳು ಆಕರ್ಷಿಸಿದವು.

ದೇಶದ ಭವಿಷ್ಯತ್ತಿನ ಮಕ್ಕಳಲ್ಲಿ ಅಂಚೆ ಚೀಟಿ ಮತ್ತು ಪತ್ರಗಳ ಬಗ್ಗೆ ಜಾಗೃತಿ ಮೂಡಿಸಿ, ಒಲವು ಮೂಡಿಸುವ ಬಗ್ಗೆ ಖುಷಿಯನ್ನು ಅಂಚೆ ಅಧಿಕಾರಿಗಳು ಅಭಿವ್ಯಕ್ತಿಪಡಿಸಿದ್ದು, ಮುಂದಿನ ದಿನಗಳಲ್ಲೂ ಸೂಕ್ತ ಅವಕಾಶ ಸಿಕ್ಕಾಗ ಮಕ್ಕಳಲ್ಲಿ ಅರಿವು ಮೂಡಿಸುವ ಹಂಬಲವನ್ನು ತೋರಿದ್ದಾರೆ. ಇನ್ನು ಪ್ರತಿ ವರ್ಷವೂ ಅಂಚೆ ಸಪ್ತಾಹದ ಮುಖೇನ ಅಂಚೆ ಚೀಟಿಗಳು, ಪತ್ರಗಳ ಪ್ರದರ್ಶಿಸಿ, ಪರಿಚಯಿಸಿ ಸಾರ್ವಜನಿಕರಲ್ಲೂ ಜಾಗೃತಿ ಮೂಡಿಸುತ್ತಾ ಬರಲಾಗುತ್ತಿದ್ದು, ಕಳೆದ ವರ್ಷ ಅಕ್ಟೋಬರ್ ತಿಂಗಳಲ್ಲಿ ಅಂಚೆ ಸಪ್ತಾಹದಲ್ಲಿ ಸಾವಿರ ಅಂಚೆ ಚೀಟಿಗಳು ಮತ್ತು 300 ವಿಶೇಷ ಅಂಚೆ ಲಕೋಟೆಗಳ ಪ್ರದರ್ಶಿಸಿರುವುದಾಗಿ ಪ್ರಧಾನ ಅಂಚೆ ಕಚೇರಿ ಅಧಿಕಾರಿಗಳು ತಿಳಿಸಿದ್ದಾರೆ.

ಅಂಚೆ ಪಾಲಕ ಸಿ.ವಿ. ಶಿವರಾಮ್ ಶರ್ಮ ಅಧ್ಯಕ್ಷತೆ ವಹಿಸಿದ್ದರು. ಅಂಚೆ ಸಹಾಯಕ ಅಧೀಕ್ಷಕ ಜೆ.ಎಸ್. ಗುರುಪ್ರಸಾದ್, ಅಂಚೆ ಚೀಟಿ ಸಂಗ್ರಹಕಾರ ವಿ. ಸೋಮಶೇಖರ್ ಆಚಾರ್ ಸೇರಿದಂತೆ ಇತರರು ಇದ್ದರು. ಅಂಚೆ ಚೀಟಿ ಸಂಗ್ರಹಕಾರ ಪಿ. ಗುರುಬಸವರಾಜ್ ಪ್ರದರ್ಶನದ ನಿರ್ವಹಣೆಯ ಜವಾಬ್ದಾರಿ ವಹಿಸಿಕೊಂಡಿದ್ದರು.

error: Content is protected !!