286 ವಿದ್ಯಾರ್ಥಿಗಳು ಗೈರು
ದಾವಣಗೆರೆ, ಮಾ. 28- ಜಿಲ್ಲೆಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಸುಗಮವಾಗಿ ಆರಂಭ ಗೊಂಡಿತು. ಪ್ರಥಮ ಭಾಷೆ ಕನ್ನಡ ಪರೀಕ್ಷೆಗೆ ಹೆಸರು ನೋಂದಾಯಿಸಿಕೊಂಡಿದ್ದ 22,316 ವಿದ್ಯಾರ್ಥಿಗಳ ಪೈಕಿ 22,030 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 286 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ. ಜಿಲ್ಲೆಯಲ್ಲಿ ಪ್ರಥಮವಾಗಿ ಪರೀಕ್ಷೆಗೆ 22,272 ವಿದ್ಯಾರ್ಥಿಗಳು ನೋಂದಾ ಯಿಸಿ ಕೊಂಡಿದ್ದರು. ಈ ಪೈಕಿ 277 ವಿದ್ಯಾರ್ಥಿಗಳು ಹಾಗೂ 44 ಪುನರಾವರ್ತಿತ ಅಭ್ಯರ್ಥಿಗಳ ಪೈಕಿ 9 ವಿದ್ಯಾರ್ಥಿಗಳು ಗೈರಾಗಿದ್ದಾರೆ. ಈ ಪೈಕಿ ದಾವಣಗೆರೆ ದಕ್ಷಿಣ ವಲಯದಲ್ಲಿಯೇ ಅತಿ ಹೆಚ್ಚು ಅಂದರೆ 149 ವಿದ್ಯಾರ್ಥಿಗಳು ಪರೀಕ್ಷೆ ಬರೆದಿಲ್ಲ.
ಚನ್ನಗಿರಿ ತಾಲ್ಲೂಕಿನಲ್ಲಿ ಹೆಸರು ನೋಂದಾಯಿಸಿದ 3725 ವಿದ್ಯಾರ್ಥಿಗಳ ಪೈಕಿ 18 ಜನ ಗೈರಾಗಿದ್ದಾರೆ. ದಾವಣಗೆರೆ ಉತ್ತರ ವಲಯದಲ್ಲಿ 3417 ವಿದ್ಯಾರ್ಥಿಗಳ ಪೈಕಿ 26, ದಕ್ಷಿಣ ವಲಯದಲ್ಲಿ 6414 ವಿದ್ಯಾರ್ಥಿಗಳ ಪೈಕಿ 149, ಹರಿಹರ ತಾಲ್ಲೂಕಿನಲ್ಲಿ ನೋಂದಣಿ ಯಾಗಿದ್ದ 3213 ವಿದ್ಯಾರ್ಥಿಗಳ ಪೈಕಿ 33, ಹೊನ್ನಾಳಿಯ 3118 ವಿದ್ಯಾರ್ಥಿಗಳ ಪೈಕಿ 40 ಹಾಗೂ ಜಗಳೂರು ತಾಲ್ಲೂಕಿನಲ್ಲಿ ನೋಂದಾಯಿಸಿಕೊಂಡಿದ್ದ 2429 ವಿದ್ಯಾರ್ಥಿಗಳ ಪೈಕಿ 20 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ.
ಜಿಲ್ಲೆಯ 90 ಪರಿಕ್ಷಾ ಕೇಂದ್ರಗಳ 1256 ಕೊಠಡಿಗಳಲ್ಲಿ ಪರೀಕ್ಷೆ ನಡೆಯಿತು. 9 ಉಪ ಮುಖ್ಯ ಅಧೀಕ್ಷಕರು, ಪ್ರತಿ ಕೇಂದ್ರಕ್ಕೂ ಒಬ್ಬರಂತೆ 90 ಸ್ಥಾನಿಕ ಜಾಗೃತ ದಳ ನಿಯೋಜಿಸಲಾಗಿತ್ತು.
ದಾವಣಗೆರೆ ಉತ್ತರ ವಲಯದ ಎರಡು ಶಾಲೆಗಳಲ್ಲಿ ಹಿಜಾಬ್ ಧರಿಸಿ ಪರೀಕ್ಷೆಗೆ ಆಗಮಿಸಿದ್ದ ಕೆಲ ವಿದ್ಯಾರ್ಥಿಗಳ ಮನವೊಲಿಸಿ ಪರೀಕ್ಷೆ ಬರೆಯಲು ಅನುವು ಮಾಡಿಕೊಡಲಾಗಿದೆ ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಧಾರ್ಮಿಕ ಉಡುಗೆಗೆ ಸಂಬಂಧಿಸಿದಂತೆ ಯಾವುದೇ ಅಡೆ-ತಡೆ ಉಂಟಾಗದಂತೆ ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯ್ತಿ ಸಿಇಒ, ಎಸ್ಪಿ ಅವರುಗಳು ಯಾವುದೇ ರೀತಿಯ ಅಡೆ ತಡೆಗಳು ಉಂಟಾಗದಂತೆ ಮುತುವರ್ಜಿ ವಹಿಸಿದ್ದರು. ನಾವೂ ಸಹ ಎಚ್ಚರಿಕೆ ವಹಿಸಿದ್ದೆವು. ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಶಾಂತಯುತವಾಗಿ ಪರೀಕ್ಷೆ ಆರಂಭವಾಗಿದೆ ಎಂದು ಡಿಡಿಪಿಐ ಜಿ.ಆರ್. ತಿಪ್ಪೇಶಪ್ಪ ಪತ್ರಿಕೆಗೆ ಹೇಳಿದರು.