ಎ.ವಿ. ಕಮಲಮ್ಮ ಮಹಿಳಾ ಕಾಲೇಜಿನ ಪ್ರಾಚಾರ್ಯ ಡಾ. ಬಿ.ಪಿ. ಕುಮಾರ್
ದಾವಣಗೆರೆ, ಮಾ. 29- ದಾವಣಗೆರೆ ಸ್ಮಾರ್ಟ್ ಸಿಟಿಯಾಗಿ ಪರಿವರ್ತನೆಯಾಗುತ್ತಿ ದ್ದರೂ ಸಹ ಇನ್ನೂ ಜನರ ನಿರೀಕ್ಷೆಗಳನ್ನು ಈಡೇರಿಸುವುದು ಸಾಧ್ಯವಾಗು ತ್ತಿಲ್ಲ ಎಂದು ಎ.ವಿ. ಕಮಲಮ್ಮ ಮಹಿಳಾ ಕಾಲೇಜಿನ ಪ್ರಾಚಾರ್ಯ ಡಾ. ಬಿ.ಪಿ. ಕುಮಾರ್ ಹೇಳಿದರು.
ಎಲೆಬೇತೂರು ಗ್ರಾಮದಲ್ಲಿ ಮೊನ್ನೆ ನಡೆದ 11 ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ `ದಾವಣಗೆರೆ ಜಿಲ್ಲೆಯ ಚಾರಿತ್ರಿಕ ಸಂಗತಿಗಳು’ ಶೀರ್ಷಿಕೆಯಡಿಯ ಪ್ರಥಮ ಗೋಷ್ಠಿಯಲ್ಲಿ `ಸ್ವಾತಂತ್ರ್ಯೋತ್ತರ ದಾವಣಗೆರೆ ಜಿಲ್ಲೆ’ ವಿಷಯದ ಬಗ್ಗೆ ಅವರು ಮಾತನಾಡಿದರು.
ಹಿಂದೆ ದಾವಣಗೆರೆ ಕರ್ನಾಟಕದ ಮ್ಯಾಂಚೆಸ್ಟರ್ ಎಂಬ ಖ್ಯಾತಿ ಹೊಂದಿತ್ತು. ಇದೀಗ ಶೈಕ್ಷಣಿಕ ನಗರಿಯಾಗಿ ಪ್ರಗತಿ ಹೊಂದುತ್ತಿದೆ. ಮಹಿಳಾ ಶಿಕ್ಷಣದಲ್ಲಿ ಸಾಕಷ್ಟು ಬದಲಾವಣೆಯನ್ನು ಕಾಣುತ್ತಿದ್ದೇವೆ. ಹತ್ತಿ ಗಿರಣಿ ಸೈರನ್ ಕೇಳುತ್ತಿದ್ದ ಜನತೆ ಇದೀಗ ಶೈಕ್ಷಣಿಕ ಸಂಸ್ಥೆಗಳ ಸೈರನ್ ಕೇಳುವಂತಾಗಿದೆ. ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಸೋಲುತ್ತಿ ದ್ದೇವೆ ಎಂಬ ಕೊರಗು ಕಾಡುತ್ತಿದೆ ಎಂದರು.
ಆರಂಭದಲ್ಲಿ ಹತ್ತಿ ಗಿರಣಿಗೆಳು ದಾವಣಗೆರೆಯಲ್ಲಿ ತಲೆ ಎತ್ತಿದ್ದವು. ತದನಂತರ ಹ್ಯಾಂಡ್ ಲೂಮ್‌ಗಳು ಬಂದವು. ಕ್ರಮೇಣ ವಾಗಿ ಜವಳಿ ಉದ್ಯಮ ನಶಿಸುತ್ತಾ ಬಂದು, ಇದೀಗ ಗಾರ್ಮೆಂಟ್‌ಗಳು, ಕೋಳಿ ಫಾರ್ಮ್ ಗಳು ತಲೆ ಎತ್ತಿವೆ ಎಂದು ಹೇಳಿದರು.
ಮೈಸೂರಿನ ಶಾಸನ ತಜ್ಞರೂ, ಸಹಾಯಕ ಅಧೀಕ್ಷಕರೂ ಆದ ಡಾ. ಎಸ್. ನಾಗರಾಜಪ್ಪ ಅವರು `ಎಲೆಬೇತೂರಿನ ಚರಿತ್ರೆ’ ಕುರಿತು ಹಿರಿಯೂರು ಪ್ರಾಂಶುಪಾಲರಾದ ಎಂ.ಜಿ. ರಂಗಸ್ವಾಮಿ ಅವರು ` ಫ್ರಾನ್ಸಿಸ್ ಬುಕೆನನ್ ಮತ್ತು ದಾವಣಗೆರೆ ಜಿಲ್ಲೆ’ ಕುರಿತು ಮಾತನಾಡಿದರು.
ಚಿತ್ರದುರ್ಗ ಸಂಶೋಧನಾ ತಜ್ಞರಾದ ಡಾ. ಬಿ. ರಾಜಶೇಖರಪ್ಪ ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದರು. ಕಸಾಪ ಜಿಲ್ಲಾಧ್ಯಕ್ಷ ಬಿ. ವಾಮದೇವಪ್ಪ ಮತ್ತಿತರರು ಉಪಸ್ಥಿತರಿದ್ದರು.
ಎಂ. ಷಡಾಕ್ಷರಪ್ಪ ಸ್ವಾಗತಿಸಿದರು. ದಾಗಿನಕಟ್ಟೆ ಪರಮೇಶ್ವರಪ್ಪ ನಿರೂಪಿಸಿದರು.