ಮಾಸಾಶನ ಹೆಚ್ಚಳ, ಪುನರ್ವಸತಿ ಬಲಪಡಿಸಲು ಆಗ್ರಹ

ದೇವದಾಸಿ ಮಹಿಳೆಯರ ಪ್ರತಿಭಟನೆ

ದಾವಣಗೆರೆ, ಮಾ.29- 2022ರ ರಾಜ್ಯ ಆಯ-ವ್ಯಯದಲ್ಲಿ ದೇವದಾಸಿ ಮಹಿಳೆಯರ ಮಾಸಾಶನದ ಹೆಚ್ಚಳ, ಪುನರ್ವಸತಿ ಯೋಜನೆ ಬಲಪಡಿಸುವುದು ಸೇರಿದಂತೆ ಮತ್ತಿತರೆ ನಮ್ಮ ಹಕ್ಕೊತ್ತಾಯಗಳನ್ನು ಪರಿಗಣಿಸಲು ಆಗ್ರಹಿಸಿ, ಕರ್ನಾಟಕ ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಂಘ ಹಾಗೂ ಕರ್ನಾಟಕ ರಾಜ್ಯ ದೇವದಾಸಿ ಮಹಿಳೆಯರ, ಮಕ್ಕಳ ಹೋರಾಟ ಸಮಿತಿ ಜಂಟಿಯಾಗಿ ನಗರದ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿತು.

ಜಿಲ್ಲಾಧಿಕಾರಿ ಕಚೇರಿ ಮೂಲಕ ರಾಜ್ಯ ಸಮಾಜ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವರಿಗೆ ಮನವಿ ರವಾನಿಸುವಂತೆ ಮನವಿ ಮಾಡಲಾಯಿತು. 

ಈ ವೇಳೆ ಮಾತನಾಡಿದ ಪ್ರತಿಭಟನಾಕಾರರು, ದೇವದಾಸಿ ಮಹಿಳೆಯರ ಅನೇಕ ಬೇಡಿಕೆಗಳನ್ನು ಈಡೇರಿಸುವಂತೆ ಈಗಾಗಲೇ ಹಲವು ಬಾರಿ ಕೇಂದ್ರ, ರಾಜ್ಯ ಸರ್ಕಾರಗಳಿಗೆ ಮನವಿ ಸಲ್ಲಿಸಿದ್ದರೂ, ಮನವಿಗೆ ಸ್ಪಂದಿಸಿಲ್ಲ ಎಂದು ಆಕ್ರೋಶ ವ್ಯಕ್ತ ಪಡಿಸಿದರು. ಸರ್ಕಾರ ಎಲ್ಲಾ ದೇವದಾಸಿ ಮಹಿಳೆಯರಿಗೆ ಕನಿಷ್ಠ 3 ಸಾವಿರ ಮಾಸಿಕ ಸಹಾಯಧನ ನೀಡಬೇಕು. ಬಾಕಿ ಹಣ ತಕ್ಷಣವೇ ಬಿಡುಗಡೆ ಮಾಡಬೇಕು. ಗಣತಿಯಲ್ಲಿ ಬಿಟ್ಟು ಹೋದ ಮಹಿಳೆಯರನ್ನು ಸೇರ್ಪಡೆ ಮಾಡಿ ಎಲ್ಲಾ ನೆರವು ಒದಗಿಸಿ, ಪುನರ್ವಸತಿ ಕಲ್ಪಿಸಬೇಕು. ಮದುವೆ ಆದಲ್ಲಿ 5 ಲಕ್ಷ ಪ್ರೋತ್ಸಾಹ ಧನ ನೀಡಬೇಕು. ಯಾವುದೇ ಷರತ್ತುಗಳು ಇರಬಾರದು ಎಂಬುದೂ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಲಾಯಿತು. 

ಪ್ರತಿಭಟನೆಯಲ್ಲಿ ರಾಜ್ಯಾಧ್ಯಕ್ಷೆ ಟಿ.ವಿ.ರೇಣುಕಮ್ಮ, ಜಿಲ್ಲಾಧ್ಯಕ್ಷೆ ಚೆನ್ಮಮ್ಮ, ಕಾರ್ಯದರ್ಶಿ ಹಿರಿಯಮ್ಮ, ದೇವೀರಮ್ಮ, ಮೈಲಮ್ಮ, ಕರಿಬಸಮ್ಮ, ಶಾಂತಮ್ಮ, ಭಾಗ್ಯ, ಜ್ಯೋತಿ ಸೇರಿದಂತೆ ಇತರರು ಇದ್ದರು.

error: Content is protected !!