ಕೊಟ್ಟೂರು: ಆಡಳಿತ ಕಚೇರಿ ಕಟ್ಟಡ ತೆರವಿಗೆ ಪ್ರಸ್ತಾವನೆ

ವಿಜಯನಗರ, ಮಾ.29- ವಿಜಯನಗರ ಜಿಲ್ಲೆಯ ಸುಪ್ರಸಿದ್ದ ಶ್ರೀ ಕೊಟ್ಟೂರು ಗುರುಬಸವೇಶ್ವರ ಸ್ವಾಮಿ ದೇವಸ್ಥಾನದ ಗೋಡೆಗೆ ಹೊಂದಿಕೊಂಡು ನಿರ್ಮಿಸಲಾಗಿರುವ ಕಾರ್ಯನಿರ್ವಹಣಾಧಿಕಾರಿಗಳ ಕಛೇರಿಯ ಕಟ್ಟಡವನ್ನು  ನೆಲಸಮಗೊಳಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ವಂಶಪಾರಂಪರ್ಯ ಧರ್ಮಕರ್ತ ಟಿ.ಎಚ್.ಎಂ. ಗಂಗಾಧರ ತಿಳಿಸಿ ದ್ದಾರೆ.

ಕೊಟ್ಟೂರಿನಲ್ಲಿ ಮಾತನಾಡುತ್ತಿದ್ದ ಅವರು ಶ್ರೀ ಸ್ವಾಮಿಯ ದೇವಸ್ಥಾನದ ಗೋಡೆಗೆ ಹೊಂದಿಕೊಂಡಿರುವಂತೆ ಆಡಳಿತ ಕಚೇರಿಯನ್ನು ಕಳೆದ ಇಪ್ಪತ್ತು ವರ್ಷಗಳ ಹಿಂದೆ ನಿರ್ಮಿಸಲಾಗಿದೆ. ಇದರಿಂದಾಗಿ ದೇವಸ್ಥಾನ ಸಂಪೂರ್ಣವಾಗಿ ಭಕ್ತರಿಗೆ ಕಾಣಿಸುವುದಿಲ್ಲ. ಈ ಬಗ್ಗೆ ಭಕ್ತಾದಿಗಳಲ್ಲಿ ಅಸಮಾಧಾನ ಇದ್ದು, ಅದನ್ನು ಪರಿಗಣಿಸಿ, ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಸದರಿ ಕಟ್ಟಡವನ್ನು ತೆರವುಗೊಳಿಸಲು ಅಥವಾ ನೆಲಸಮಗೊಳಿಸಲು ಷರತ್ತುಬದ್ಧ ಅನುಮತಿ ಕೋರಲಾಗಿದೆ. ಅಲ್ಲದೆ ಕಾರ್ಯನಿರ್ವಹಣಾಧಿಕಾರಿಗಳ ನೂತನ ಕಚೇರಿ ಕಟ್ಟಡವನ್ನು ನಿರ್ಮಿಸಲು ದೇವಸ್ಥಾನದ ಆವರಣದಲ್ಲೇ ಸ್ಥಳಾವಕಾಶವಿದೆ ಎಂದು ಗಂಗಾಧರ ಹೇಳಿದರು.

ಪರಭಾರೆಯಾಗದ ಅತಿಥಿ ಗೃಹ : ಭೂ ಸೇನಾ ನಿಗಮದ ವತಿಯಿಂದ ಮೂರ್ಕಲ್ ಮಠದ ಹಿಂಬದಿಯಲ್ಲಿ ನಿರ್ಮಿಸಲಾಗಿರುವ ಸುಮಾರು 45 ಲಕ್ಷ ರೂ.ಗಳ ವೆಚ್ಚದ ಅತಿಥಿ ಗೃಹದ ಕಾಮಗಾರಿಯನ್ನು ಮುಗಿಸಿ, ದೇವಸ್ಥಾನದ ಆಡಳಿತ ಮಂಡಳಿಗೆ ಪರಭಾರೆ ಮಾಡುವಂತೆ, ಭೂ ಸೇನಾ ನಿಗಮದ ಎಂಜಿನಿಯರ್ ಶಂಕರ್ ನಾಯ್ಕ ಎಂಬುವವರಿಗೆ ತಿಳಿಸಿದ್ದರೂ, ಇದುವರೆಗೂ ಯಾವುದೇ ಕ್ರಮವನ್ನು ಕೈಗೊಂಡಿಲ್ಲ ಎಂದು ಸಹಾಯಕ ಆಯುಕ್ತರಾದ ಎಂ.ಎಚ್.ಪ್ರಕಾಶರಾವ್ ಅಸಮಾಧಾನ ವ್ಯಕ್ತಪಡಿಸಿದರು.

ಈಗಾಗಲೇ ನಲವತ್ತೈದು ಲಕ್ಷ ರೂಪಾಯಿಗಳನ್ನು ಭೂ ಸೇನಾ ನಿಗಮಕ್ಕೆ ವರ್ಗಾಯಿಸಲಾಗಿದೆ. ಆದರೂ ಕಾಮಗಾರಿ ಸಂಪೂರ್ಣವಾಗಿ ಮುಗಿಸಿ ತಮಗೆ ಪರಭಾರೆ ಮಾಡಿಲ್ಲ ಎಂದು ಹೇಳುತ್ತಾ, ದೂರದ ಊರುಗಳಿಂದ ಬರುವ ಭಕ್ತರಿಗೆ  ಅತಿಥಿ ಗೃಹದ ಸಮಸ್ಯೆ ಇರುವುದರಿಂದ ಆದಷ್ಟು ಬೇಗನೆ ಪೂರ್ಣಗೊಳಿಸುವಂತೆ ಪತ್ರ ಬರೆಯಲಾಗಿದ್ದರೂ ಇದಕ್ಕೆ ಸ್ಪಂದಿಸುತ್ತಿಲ್ಲ. 2 ವರ್ಷಗಳ ಪ್ರಯತ್ನ ವಿಫಲವಾಗಿದೆ. ಅಲ್ಲದೆ ಸಂಬಂಧಿಸಿದ ಭೂ ಸೇನಾ ನಿಗಮದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಬಾಕಿ ಇರುವ ಕಾಮಗಾರಿಗಳನ್ನು ಪೂರ್ಣಗೊಳಿಸಿ       ಕ್ರಮ ಕೈಗೊಳ್ಳಬೇಕಾಗಿದೆ ಎಂದವರು ಅಭಿಪ್ರಾಯ ಪಟ್ಟರು.

error: Content is protected !!