ಶ್ರೀ ಯೋಗಿ ನಾರೇಯಣ ಯತೀಂದ್ರರ ಗುಣ ಅಳವಡಿಸಿಕೊಳ್ಳಬೇಕು

ಶ್ರೀ ಯೋಗಿ ನಾರೇಯಣ ಯತೀಂದ್ರ ಜಯಂತ್ಯೋತ್ಸವದಲ್ಲಿ ಎಸ್ಪಿ ರಿಷ್ಯಂತ್ ಕರೆ

ದಾವಣಗೆರೆ, ಮಾ. 28- ವಿಶ್ವಕ್ಕೆ ಉತ್ತಮ ಸಂದೇಶ ಸಾರಿದ ಶ್ರೀ ಯೋಗಿ ನಾರೇಯಣ ಯತೀಂದ್ರರವರ ಆದರ್ಶ ಗುಣಗಳನ್ನು ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಂಡು, ಸನ್ಮಾರ್ಗದಲ್ಲಿ ಸಾಗಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಿಷ್ಯಂತ್ ಕರೆ ನೀಡಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ   ಆಯೋಜಿಸಲಾಗಿದ್ದ ಶ್ರೀ ಯೋಗಿ ನಾರೇಯಣ ಯತೀಂದ್ರ ಅವರ ಜಯಂತಿ ಕಾರ್ಯಕ್ರಮದಲ್ಲಿ  ಪಾಲ್ಗೊಂಡು ಅವರು ಮಾತನಾಡಿದರು. 

ಜಾತಿ-ಮತಗಳ ಕುಲಗೋತ್ರಗಳ ವರ್ಣಭೇದ ವನ್ನು ಖಂಡಿಸುತ್ತಾ ದೀನ ದಲಿತರ, ಶೋಷಿತರ ಉದ್ಧಾರಕ್ಕಾಗಿ ವಿಶ್ವಮಾನವ ಸಂದೇಶ ಸಾರಿದ ಶ್ರೀ ಯೋಗಿ ನಾರೇಯಣ ಯತೀಂದ್ರ ರವರ ಜಯಂತಿ ಆಚರಿಸುತ್ತಿರುವುದು ಅರ್ಥ ಪೂರ್ಣವಾಗಿದೆ. ಮಹಾನ್ ನಾಯಕರುಗಳ ಆದರ್ಶ ಗುಣಗಳನ್ನು ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿ ಕೊಂಡು ಸನ್ಮಾರ್ಗದಲ್ಲಿ ನಡೆಯುವಂತೆ ತಿಳಿಸಿದರು.

ಬಲಿಜ ಸಂಘದ ಅಧ್ಯಕ್ಷ ಟಿ.ಹೆಚ್. ಸುರೇಂದ್ರ ಮಾತನಾಡಿ, ಜಿಲ್ಲಾಡಳಿತದಿಂದ ಆಚರಿಸುತ್ತಿರುವ ಈ ದಿನಾಚರಣೆಯನ್ನು ಮುಂದೊಂದು ದಿನ ಎಲ್ಲಾ  ಶಾಲಾ-ಕಾಲೇಜು ಸರ್ಕಾರಿ ಕಚೇರಿಗಳಲ್ಲಿ ಆಚರಿಸುವಂತೆ ಆಗಲಿ ಎಂದು ಶುಭ ಹಾರೈಸಿದರು.

ಸಮಾಜದ ಕೊಟ್ರೇಶ್ ಉಪನ್ಯಾಸ ನೀಡಿ, ಕೈವಾರ ತಾತಯ್ಯ ಎಂದೇ ಪ್ರಸಿದ್ಧಿಯಾಗಿರುವ ಶ್ರೀ ಯೋಗಿ ನಾರೇಯಣ ಯತೀಂದ್ರ ರವರು ಪದ್ಯ ಕೀರ್ತನೆ ಹಾಗೂ ಸ್ತೋತ್ರಗಳ ಮುಖಾಂತರ ಸಾಹಿತ್ಯ ರೂಪದಲ್ಲಿ ಜನತೆಗೆ ತಿಳಿಸಿಕೊಟ್ಟ ಮಹಾನ್ ಯೋಗಿ ಗಳಾಗಿದ್ದಾರೆ.

ಪ್ರಪಂಚದಲ್ಲಿಯೇ ಮುಂದೊಂದು ದಿನ ನಡೆಯಬಹುದಾದ ಪಾಪ ಕೃತ್ಯಗಳ ಪ್ರಾಬಲ್ಯ, ಪ್ರಳಯ ಸಂಪತ್ತಿನ ವಿನಾಶ, ಘೋರ ವೈಪರೀತ್ಯಗಳು, ಭ್ರಷ್ಟಾಚಾರ, ದೌರ್ಜನ್ಯ, ಆರ್ಥಿಕವಾಗಿ, ಸಾಮಾಜಿಕವಾಗಿ, ರಾಜಕೀಯವಾಗಿ, ಧಾರ್ಮಿಕವಾಗಿ ನಡೆಯುವ ಅನ್ಯಾಯದ  ಘಟನೆಗಳನ್ನು ಶ್ರೀ ಯೋಗಿ ನಾರೇಯಣ ಯತೀಂದ್ರ ಅವರು ಕಾಲಜ್ಞಾನದಲ್ಲಿ ತಿಳಿಸಿದ್ದಾರೆ. ಅನೇಕ ಪವಾಡಗಳನ್ನು ಮಾಡಿದ್ದಾರೆ ಅವರ ಚಿಂತನೆಗಳನ್ನು ಎಲ್ಲರೂ ಪರಿಪಾಲಿಸಬೇಕು ಎಂದರು. 

ಪ್ರಭಾರ ಅಪರ ಜಿಲ್ಲಾಧಿಕಾರಿ ನಜ್ಮಾ, ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ನಾಗರಾಜ್, ನಿರ್ಮಿತಿ ಕೇಂದ್ರದ ಯೋಜನಾ ವ್ಯವಸ್ಥಾಪಕ ರವಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿಚಂದ್ರ, ಪರಿಶಿಷ್ಟ ವರ್ಗಗಳ ಇಲಾಖೆಯ ಮಂಜುನಾಥ್, ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆಯ ಅಮಿತ್ ಬಿದರಿ, ಬಲಿಜ ಸಂಘದ ಉಪಾಧ್ಯಕ್ಷ ಭೀಮಣ್ಣ ತಹಶೀಲ್ದಾರ್, ಶ್ರೀನಿವಾಸನ್, ಕಾರ್ಯದರ್ಶಿ ನರಸಿಂಹಮೂರ್ತಿ ಆರ್, ಜಂಟಿ ಕಾರ್ಯದರ್ಶಿ ಎಂ.ಎನ್. ರಾಧಾಕೃಷ್ಣ, ಖಜಾಂಚಿ  ನಿಬಗೂರು ನಾಗೇಂದ್ರಪ್ಪ ಮತ್ತು ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

error: Content is protected !!