ಬೇಡ ಜಂಗಮ ಜಾತಿ ಪ್ರಮಾಣ ಪತ್ರ ಸಂಬಂಧ ವಾಗ್ವಾದ
ದಾವಣಗೆರೆ, ಮಾ.28- ಬೇಡ ಜಂಗಮ ಜಾತಿ ಪ್ರಮಾಣ ಪತ್ರದ ವಿವಾದಕ್ಕೆ ಸಂಬಂಧಿಸಿ ದಂತೆ ಶಾಸಕ ಎಂ.ಪಿ. ರೇಣುಕಾಚಾರ್ಯ ಅವರ ಸಹೋದರ ಡಾ. ಎಂ.ಪಿ. ಧಾರಕೇಶ್ವರಯ್ಯಗೆ ಮುತ್ತಿಗೆ ಹಾಕಿದ ದಲಿತ ಸಂಘಟನೆಗಳ ಮುಖಂಡರು ವಾಗ್ವಾದ ಮಾಡಿದ ಘಟನೆ ನಗರದ ವರದಿಗಾರರ ಕೂಟದ ಮುಂಭಾಗದಲ್ಲಿ ಇಂದು ನಡೆಯಿತು.
ಪತ್ರಿಕಾಗೋಷ್ಟಿ ಮುಗಿಸಿದ ತಕ್ಷಣ ಹೊರಡುವಂತೆ ಧಾರಕೇಶ್ವರಯ್ಯ ಮತ್ತು ಇತರರಿಗೆ ಸ್ಥಳದಲ್ಲಿ ಬಂದೋಬಸ್ತ್ ಗೆ ಹಾಜರಿದ್ದ ಕರ್ತವ್ಯ ನಿರತ ಪೊಲೀಸರು ಸೂಚಿಸಿದ್ದರು. ಆದರೆ, ಪತ್ರಿಕಾಗೋಷ್ಟಿ ಮುಗಿಸಿ ಹೊರಬಂದ ಅಖಿಲ ಕರ್ನಾಟಕ ಡಾ. ಅಂಬೇಡ್ಕರ್ ಬೇಡ ಜಂಗಮ ಪರಿಶಿಷ್ಟ ಜಾತಿ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಧಾರುಕೇಶ್ವರಯ್ಯ ಅವರು ಜಂಗಮ ಸಮಾಜದ ಪದಾಧಿಕಾರಿಗಳೊಂದಿಗೆ ಚರ್ಚಿಸುತ್ತಿದ್ದರು. ಈ ವೇಳೆ ದಾರುಕೇಶಯ್ಯ ಅವರ ಬಳಿ ಧಾವಿಸಿದ ಡಿಎಸ್ಸೆಸ್, ಮಾದಿಗ ಸಮಾಜ, ಭೋವಿ ಸಮಾಜ ಸೇರಿದಂತೆ ವಿವಿಧ ದಲಿತ ಪರ ಸಂಘಟನೆಗಳ ಮುಖಂಡರು ಘೇರಾವ್ ಹಾಕಿ ವಾಗ್ವಾದಕ್ಕಿಳಿದರು.
ವೀರಶೈವ ಜಂಗಮ ಸಮುದಾಯದ ಮೇಲ್ವರ್ಗದವರಾಗಿದ್ದರೂ ಸುಳ್ಳು ಬೇಡ ಜಂಗಮ ಪ್ರಮಾಣ ಪತ್ರ ಪಡೆದಿದ್ದು ಅಕ್ಷಮ್ಯ. ಆ ಮೂಲಕ ದಲಿತರು, ಶೋಷಿತರ ಅನ್ನ, ಅವಕಾಶ ಕಸಿಯುವ ಮತ್ತು ಪರಿಶಿಷ್ಟ ಜಾತಿ ಜನರಿಗೆ ಅನ್ಯಾಯ ಮಾಡಲು ಹೊರಟಿದ್ದೀರಾ ಎಂದು ಕಿಡಿಕಾರಿದರು.
ತಕ್ಷಣವೇ ಎಚ್ಚೆತ್ತ ಪೊಲೀಸರು, 112 ವಿಶೇಷ ಪೊಲೀಸ್ ವಾಹನದಲ್ಲಿ ಧಾರಕೇಶ್ವರಯ್ಯ ಕೂರಿಸಿ, ಭದ್ರತೆ ಒದಗಿಸಿದರು. ಧಾರುಕೇಶ್ವರಯ್ಯನವರ ಜೊತೆಗೆ ಚರ್ಚೆಗೆ ಬಿಡುವಂತೆ ದಲಿತ ಮುಖಂಡರು ಪಟ್ಟು ಹಿಡಿದು, ಎಳೆದಾಡಲಾರಂಭಿಸಿದರು. ಅಷ್ಟರಲ್ಲಿ ಸ್ಥಳಕ್ಕೆ ಧಾವಿಸಿದ ಕೆಟಿಜೆ ನಗರ ವೃತ್ತ ನಿರೀಕ್ಷಕ ಗುರುಬಸವರಾಜ, ಸಬ್ ಇನ್‌ಸ್ಪೆಕ್ಟರ್ ಪ್ರಭು ಡಿ. ಕೆಳಗಿನ ಮನೆ ಪ್ರತಿಭಟನೆಗೆ ಮುಂದಾಗಿದ್ದ ದಲಿತ ಮುಖಂಡರನ್ನು ಸಮಾಧಾನಿಸಲು ಪ್ರಯತ್ನಿಸಿದರು.
ಕೆಲ ದಲಿತ ಮುಖಂಡರು ಪೊಲೀಸ್ ವಾಹನದ ಮುಂದೆ ಧರಣಿ ಕುಳಿತರೆ, ಮತ್ತೆ ಕೆಲವರು ಪೊಲೀಸ್ ಅಧಿಕಾರಿಗಳ ಜೊತೆ ವಾಗ್ವಾದ ನಡೆಸಿದರು. ಧಾರುಕೇಶ್ವರಯ್ಯ ಅವರನ್ನು ಹತ್ತಿಸಿಕೊಂಡ ಪೊಲೀಸ್ ಜೀಪು ಕೆಟಿಜೆ ನಗರ ಠಾಣೆಯತ್ತ ಸಾಗಿತು. ಅದನ್ನು ಗಮನಿಸಿದ ದಲಿತ ಮುಖಂಡರು ಜೀಪ್ ಅನ್ನು ಬೆನ್ನು ಹತ್ತಿದರು. ಆಗ ಸಿಪಿಐ ಗುರುಬಸವರಾಜ, ಎಸ್‌ಐ ಪ್ರಭು ಕೆಳಗಿನಮನೆ ದಲಿತ ಮುಖಂಡರಿಗೆ ಸಮಾಧಾನಪಡಿಸಿ, ಮನವೊಲಿಸುವ ಮೂಲಕ ಪರಿಸ್ಥಿತಿ ತಿಳಿಗೊಂಡಿತು.
ನಂತರ ಕೆಟಿಜೆ ನಗರ ಪೊಲೀಸ್ ಠಾಣೆಗೆ ಡಿವೈಎಸ್ಪಿ ನರಸಿಂಹ ತಾಮ್ರಧ್ವಜ ಸಹ ಭೇಟಿ ನೀಡಿದ ನಂತರವಷ್ಟೇ ಧಾರಕೇಶ್ವರಯ್ಯ ಅವರನ್ನು ಪೊಲೀಸ್ ಭದ್ರತೆಯಲ್ಲಿ ನಗರದಿಂದ ಹೊರಗೆ ಕಳಿಸಲಾಯಿತು.
ದಲಿತ ಮುಖಂಡರಾದ ಹೂವಿನಮಡು ಅಂಜಿನಪ್ಪ, ಹೆಗ್ಗೆರೆ ರಂಗಪ್ಪ, ಕಬ್ಬಳ್ಳಿ ಮೈಲಪ್ಪ, ಗುಮ್ಮನೂರು ರಾಮಚಂದ್ರಪ್ಪ, ರಾಮ ನಗರ ಜಯಪ್ಪ, ಅಳಗವಾಡಿ ನಿಂಗರಾಜ್, ನಾಗನೂರು ರಾಜು, ಗಾಂಧಿನಗರ ರಾಜಪ್ಪ, ಆನಗೋಡು ಪ್ರಶಾಂತ, ಚಿಕ್ಕನಹಳ್ಳಿ ಹನುಮಂತಪ್ಪ, ಮೇಗಳಗೆರೆ ಮಂಜುನಾಥ, ಭೋವಿ ಸಮಾಜದ ಮುಖಂಡರಾದ ಹನುಮಂತ, ಆಟೋ ತಿಮ್ಮಣ್ಣ, ಡಿವೈಎಫ್‌ಐ ಶ್ರೀನಿವಾಸ ಸೇರಿದಂತೆ ಇತರರು ಇದ್ದರು.