ದಾವಣಗೆರೆ, ಮಾ.28- ಪೆಟ್ರೋಲ್, ಡೀಸೆಲ್, ಗ್ಯಾಸ್ ಮತ್ತು ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಸೋಷಲಿಸ್ಟ್ ಯೂನಿಟ್ ಸೆಂಟರ್ ಆಫ್ ಇಂಡಿಯಾ (ಕಮ್ಯುನಿಸ್ಟ್) ಎಸ್ಯುಸಿಐ (ಸಿ) ಸಂಘಟನೆಯು ನಗರದ ಉಪವಿಭಾಗಾಧಿಕಾರಿ ಕಚೇರಿ ಮುಂಭಾಗದ ಪಿಬಿ ರಸ್ತೆಯಲ್ಲಿ ಸೌದೆ ಒಲೆಯ ಮೇಲೆ ಅಣಕು ಅಡುಗೆ ಮಾಡುವ ಮೂಲಕ ವಿನೂತನವಾಗಿ ಪ್ರತಿಭಟನೆ ನಡೆಸಿತು. ನಂತರ ಉಪ ವಿಭಾಗಾಧಿಕಾರಿ ಮುಖಾಂತರ ರಾಷ್ಟ್ರಪತಿಗಳಿಗೆ ಸಂಘಟನೆ ಪದಾಧಿಕಾರಿಗಳು ಮನವಿ ಮಾಡಿದರು.
5 ರಾಜ್ಯಗಳ ಚುನಾವಣಾ ಫಲಿತಾಂಶ ಬಂದ ಕೆಲವೇ ದಿನಗಳಲ್ಲಿ ಮತ್ತೆ ತೈಲೋತ್ಪನ್ನಗಳ ಬೆಲೆಗ ಳನ್ನು ಏರಿಸಲಾಗಿದೆ. ಪೆಟ್ರೋಲ್ ಬೆಲೆ ಏರಿಕೆ ಬಗ್ಗೆ ಸರ್ಕಾರವನ್ನು ಟೀಕಿಸಿದಾಗ ಅದು ಜಾಗತಿಕ ನಗರಗಳ ಕಡೆಗೆ ಮತ್ತು ತೈಲ ಕಂಪೆನಿಗಳಿಗೆ ಕಡೆ ಕೈ ತೋರಿಸುತ್ತಾರೆ. ಆದರೆ ಚುನಾವಣೆ ಸಂದರ್ಭದಲ್ಲಿ ಬೆಲೆ ಏರಿಕೆ ಆಗದಿರುವುದನ್ನು ಈ ದೇಶ ಕಂಡಿದ್ದು ಕೇಂದ್ರದ ಬಿಜೆಪಿ ಸರ್ಕಾರ ಜನರಿಗೆ ವಂಚನೆ ಮಾಡುತ್ತಿದೆ ಎಂದು ಪ್ರತಿಭಟನಾಕಾರರು ಅಸಮಾಧಾನ ವ್ಯಕ್ತಪಡಿಸಿದರು.
ದೇಶದಲ್ಲಿ ಹಣದುಬ್ಬರ ಮತ್ತು ಬೆಲೆ ಏರಿಕೆಯು ಗರಿಷ್ಠ ಪ್ರಮಾಣದಲ್ಲಿದೆ. ಜೀವನಾವಶ್ಯಕ ವಸ್ತುಗಳ ಬೆಲೆ ಏರಿಕೆಯಿಂದ ಬಡ ಮಧ್ಯಮ ವರ್ಗದ ಜನರ ಬದುಕು ದುಸ್ತರವಾಗಿದೆ. ಜಾಗತಿಕ ಮಟ್ಟದಲ್ಲಿ ಕಚ್ಚಾ ತೈಲ ಬೆಲೆ ಬ್ಯಾರಲ್ ಗೆ 135 ಡಾಲರ್ನಿಂದ 100 ಡಾಲರ್ಗೆ ಇಳಿದಿದೆ. ಆದರೂ ಡೀಸೆಲ್ ಸಗಟು ದರವನ್ನು ಲೀಟರ್ ಗೆ 25 ರೂ. ಏರಿಕೆ ಮಾಡಿರುವುದರಿಂದ ಸಾರಿಗೆ ಸಾಗಾಟದ ವೆಚ್ಚ ಮತ್ತಷ್ಟು ಹೆಚ್ಚಾಗಲಿದೆ. ಪೆಟ್ರೋಲ್ ದರದ ಹೆಚ್ಚಳದಿಂದ ದಿನನಿತ್ಯ ಬಳಸುವ ದ್ವಿಚಕ್ರ ಸೇರಿದಂತೆ ಎಲ್ಲಾ ವಾಹನಗಳ ವೆಚ್ಚವೂ ಹೆಚ್ಚಾಗಿದೆ. ಈ ಬೆಲೆ ಏರಿಕೆಯಿಂದ ಜನ ತತ್ತರಿಸಿದ್ದು, ತಕ್ಷಣವೇ ಬೆಲೆ ಏರಿಕೆ ಹಿಂಪಡೆಯಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಮಂಜುನಾಥ್ ಕೈದಾಳೆ, ಸದಸ್ಯರು ಗಳಾದ ಪರಶುರಾಮ್, ಅನಿಲ್ ಕುಮಾರ್, ತಿಪ್ಪೇಸ್ವಾಮಿ, ಭಾರತಿ, ನಾಗಜ್ಯೋತಿ, ನಾಗಸ್ಮಿತಾ, ಪುಷ್ಪಾ, ಕಾವ್ಯ, ಪೂಜಾ ನಂದಿಹಳ್ಳಿ, ಶಿವಾಜಿ ರಾವ್, ಚಿರಂಜೀವಿ, ಬೀರಲಿಂಗಪ್ಪ, ಲೋಕಪ್ಪ, ಡಿ.ರವಿ, ಹಿರೇಮಠ, ವಿರುಪಾಕ್ಷಪ್ಪ ದೊಡ್ಡಮನಿ ಸೇರಿದಂತೆ ಇತರರು ಭಾಗವಹಿಸಿದ್ದರು.