ಉದ್ಯೋಗ ಖಾತ್ರಿ ಕೂಲಿ ಕಾರ್ಮಿಕರ ಪ್ರತಿಭಟನೆ: ಸಿಇಓ ಭೇಟಿ, ಮನವಿ ಸ್ವೀಕಾರ

ಏಪ್ರಿಲ್ ಒಳಗಾಗಿ ನರೇಗಾ ಕೆಲಸ ಆರಂಭಿಸಿದರೆ ರಸಗೊಬ್ಬರ, ಇತರೆ ಕೃಷಿ ಚಟುವಟಿಕೆಗಳಿಗೆ ವೆಚ್ಚ  ಭರಿಸಲು ಕೂಲಿ ಕಾರ್ಮಿಕರಿಗೆ ಆರ್ಥಿಕ ಸಹಾಯಸ್ತ ಚಾಚಿದಂತಾಗುವುದು.

– ಮಲ್ಲೇಶ್, ಸಂಘಟನೆ  ಮುಖಂಡ

ಜಗಳೂರು,ಮಾ.28- ಪಟ್ಟಣದ ತಾಲ್ಲೂಕು ಪಂಚಾಯಿತಿ ಆವರಣದಲ್ಲಿ ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆ (ಗ್ರಾಕ್ರೋಸ್) ವತಿಯಿಂದ ನರೇಗಾ ಕೂಲಿ ಕಾರ್ಮಿಕರ ಬೇಡಿಕೆಗಳ ಈಡೇರಿಕಾಗಿ ಒತ್ತಾಯಿಸಿ  ನಿನ್ನೆ ಪ್ರತಿಭಟನೆ ನಡೆಸಲಾಯಿತು.

ಸಂಘಟನೆಯ ತಾಲ್ಲೂಕು ಅಧ್ಯಕ್ಷರಾದ ಪಲ್ಲಾಗಟ್ಟೆ ಸುಧಾ ಮಾತನಾಡಿ, ತಾಲ್ಲೂಕಿನ 8 ಕ್ಕೂ ಅಧಿಕ ಗ್ರಾಮ ಪಂಚಾಯಿತಿಗಳಲ್ಲಿ ಉದ್ಯೋಗಖಾತ್ರಿ ಯೋಜನೆಯಡಿ ಫಾರಂ ಸಂಖ್ಯೆ 6 ರಲ್ಲಿ ಕೆಲಸಕ್ಕೆ ಅರ್ಜಿ ಸಲ್ಲಿಸಿದ್ದರೂ ಕೆಲಸ ನೀಡಿಲ್ಲ, ಉಳಿದಂತೆ ಕೆಲ ಗ್ರಾಮ ಪಂಚಾಯಿತಿಗಳಲ್ಲಿ ಫಾರಂ ಸಂಖ್ಯೆ 1 ರಲ್ಲಿ ಅರ್ಜಿ ಸಲ್ಲಿಸಿದ್ದರೂ  ಜಾಬ್‌ ಕಾರ್ಡ್ ವಿತರಿಸಿಲ್ಲ, ಅಲ್ಲದೇ  ನರೇಗಾ ಕಾಮಗಾರಿ ಕೆಲಸ ನಿರ್ವಹಿಸಿದ್ದರೂ, ಕೇವಲ ಪರಿಶಿಷ್ಟ ಸಮುದಾಯದವರಿಗೆ ಹೊರತುಪಡಿಸಿ, ಉಳಿದ ಕೂಲಿಕಾರರಿಗೆ ಕೂಲಿ ಪಾವತಿಯಾಗದೆ 3 ತಿಂಗಳುಗಳ ವಿಳಂಬವಾಗಿದೆ. ದುಡಿಯುವ ಕೈಗಳಿಗೆ ಕೆಲಸ ಕೊಡಿ ಎಂದು ಒತ್ತಾಯಿಸಿದರು. 

ಸ್ಥಳಕ್ಕೆ ಸಿಇಓ ಡಾ.ಚನ್ನಪ್ಪ ಭೇಟಿ ನೀಡಿ, ಪ್ರತಿಭಟನಾನಿರತ ಕೂಲಿ ಕಾರ್ಮಿಕ ಸಂಘಟನೆ ಮುಖಂಡರುಗಳ ಮನವಿ ಸ್ವೀಕರಿಸಿ, ನಂತರ ಪ್ರತಿಕ್ರಿಯಿಸಿದ ಅವರು, ಯಾವುದೇ ಗ್ರಾಮ ಪಂಚಾಯಿತಿಗಳಲ್ಲಿ ಕೂಲಿಕಾರರು ಫಾರಂ ಸಂಖ್ಯೆ 6 ನೀಡಿದರೆ ವಾರದೊಳಗಾಗಿ ಜಾಬ್‌ಕಾರ್ಡ್ ವಿತರಿಸಿ‌, ಅಲ್ಲದೇ ಸಂಘಟನೆಯ ಬೇಡಿಕೆಗಳಾದ ಕೂಲಿ ಪಾವತಿ ವಿಳಂಬ, ರಾಜ್ಯಮಟ್ಟದ ಸಮಸ್ಯೆಯಿದ್ದು, ಇದುವರೆಗೂ  ಹಣ ಪಾವತಿಯಾಗಿಲ್ಲ, ಆದ್ದರಿಂದ ಕೆಲಸ ನೀಡಲು ಮುಂದಾಗಿಲ್ಲ.ಇ ಶೀಘ್ರ ಬಗೆಹರಿಸಲಾಗುವುದು‌. ಸರ್ಕಾರದ ಆದೇಶದಂತೆ ಪ್ರತಿನಿತ್ಯ 10 ಗಂಟೆಗಳ ಕಾಮಗಾರಿ ಕೆಲಸಕ್ಕೆ ತಕ್ಕಂತೆ ಅಳತೆ ಅನುಸಾರ ಕೂಲಿ ಜಮಾ ಮಾಡಲಾಗಿದೆ ಎಂದರು. 

ಗ್ರಾಮ ಪಂಚಾಯಿತಿಗಳಲ್ಲಿ 15 ದಿನಗಳ ಕಾಲ ಎನ್‌ಎಂಆರ್ ನೊಂದಿಗೆ ಎಸ್ಟಿಮೇಷನ್ ಹಾಕಿಸಿದರೆ, ಕೂಲಿಕಾರರು ಕೇವಲ ಒಂದೆರಡು ದಿನಗಳ ಕಾಲ ಕೆಲಸ ಮಾಡಿ ಮರುದಿನ ಕೆಲಸ ಮಾಡದಿದ್ದರೆ ಅದು ಎಸ್ಟಿಮೇಷನ್‌ ಸಂಪೂರ್ಣವಾಗದೇ ವ್ಯರ್ಥ ವಾಗುವುದು, ತಾವೂ ಪಿಡಿಓ ಮತ್ತು ಅಧಿಕಾರಿ ಗಳಿಗೆ ಸ್ಪಂದಿಸಬೇಕು ಎಂದು ತಿಳಿಸಿದರು‌.

ತಾ.ಪಂ.ಇಓ ಲಕ್ಷ್ಮೀಪತಿ ಮಾತನಾಡಿ, ತಾಲ್ಲೂಕಿನ ನರೇಗಾ ಯೋಜನೆಯಡಿ 11 ಲಕ್ಷಕ್ಕೂ ಅಧಿಕ ಮಾನವ ದಿನಗಳ ಕೆಲಸ ಪೂರೈಸಲಾಗಿದೆ. ಕೆಲ ಗ್ರಾ.ಪಂ.ಗಳಲ್ಲಿ ನಿರುದ್ಯೋಗ ಭತ್ಯೆ ಭರಿಸಲಾಗಿದೆ, ಸಮಸ್ಯೆಗಳನ್ನು ಪರಿಹರಿಸಲು ಪಿಡಿಓಗಳಿಗೆ ಸೂಚಿಸಲಾಗುವುದು ಎಂದು ಮಾಹಿತಿ ನೀಡಿದರು. 

ಸಂಘಟನೆ ಮುಖಂಡರಾದ ನಾಗಮ್ಮ, ಶೃತಿ, ಭಾಗ್ಯಮ್ಮ, ಶಬ್ಬೀರ್ ಭಾಷಾ, ಸಂಜೀವಮ್ಮ, ವಸಂತ, ರುದ್ರೇಶ್ ಹಾಗೂ ಇನ್ನೂ ಮುಂತಾದವರು ಉಪಸ್ಥಿತರಿದ್ದರು.

error: Content is protected !!