ದಾವಣಗೆರೆ, ಮಾ.28- ನಗರದ ಎಸ್ಸೆಸ್ಸೆಲ್ಸಿ ಪರೀಕ್ಷಾ ಕೇಂದ್ರಗಳಾದ ಮೋತಿವೀರಪ್ಪ ಕಾಲೇಜು, ಸರ್ಕಾರಿ ಪ್ರೌಢಶಾಲೆ, ಸೀತಮ್ಮ ಕಾಲೇಜಿಗೆ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಅವರು ಭೇಟಿ ನೀಡಿ ಪರಿಶೀಲಿಸಿದರು.
ಈ ವೇಳೆ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಜಿಲ್ಲೆಯ 90 ಕೇಂದ್ರಗಳಲ್ಲಿ ಪರೀಕ್ಷೆಗಳು ಸುಗ ಮವಾಗಿ ನಡೆಯುತ್ತಿರುವುದಾಗಿ ಹೇಳಿದರು. ಹರಿಹರ ದಲ್ಲಿ ಎಸ್.ಪಿ, ಚನ್ನಗಿರಿ ಭಾಗದಲ್ಲಿ ಸಿ.ಇ.ಓ ಹಾಗೂ ದಾವಣಗೆರೆ ನಗರದಲ್ಲಿ ತಾವು ಪರೀಕ್ಷಾ ಕೇಂದ್ರಗಳ ಉಸ್ತುವಾರಿ ಗಮನಿಸುತ್ತಿರುವುದಾಗಿ ಹೇಳಿದರು.
ಧಾರ್ಮಿಕ ವಸ್ತ್ರಗಳ ಸಮಸ್ಯೆಗಳು ಎಲ್ಲಿಯೂ ಉದ್ಭವಿಸಿಲ್ಲ ಹಾಗೂ ಆ ವಿಚಾರವಾಗಿ ಪರೀಕ್ಷೆಯಿಂದ ಹೊರಹೋದ ವರದಿಗಳಿಲ್ಲ. ಹೊರ ಹೋಗಲೂ ಸಹ ಬಿಡುವುದಿಲ್ಲ ಎಂದ ಜಿಲ್ಲಾಧಿಕಾರಿ, ಎಲ್ಲರೂ ಪರೀಕ್ಷೆಯೇ ಮುಖ್ಯ ಎಂದು ಆತ್ಮ ವಿಶ್ವಾಸದಿಂದ ಪರೀಕ್ಷೆ ಬರೆಯುತ್ತಿದ್ದಾರೆ ಎಂದರು.
ಎಲ್ಲಾ ಕಡೆಯಲ್ಲೂ ಸೂಕ್ತ ಪೊಲೀಸ್ ಬಂದೋಬಸ್ತ್ ವ್ಯವಸ್ಥೆಯನ್ನು ಮಾಡಲಾಗಿದ್ದು, ಪ್ರತೀ ಕೇಂದ್ರಕ್ಕೂ ಒಬ್ಬ ಸ್ಕ್ವಾಡ್ಗಳನ್ನು ನೇಮಿಸಲಾಗಿದೆ. ವಿದ್ಯಾರ್ಥಿಗಳು ಯಾವುದೇ ಭಯವಿಲ್ಲದೆ ಪರೀಕ್ಷೆ ಬರೆಯುವಂತೆ ಆತ್ಮಸ್ಥೈರ್ಯ ತುಂಬಲಾಗಿದೆ ಎಂದು ಮಾಹಿತಿ ನೀಡಿದರು.
ಇದೇ ಸಂದರ್ಭದಲ್ಲಿ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಬಿ. ಬಸರಗಿ, ಡಿ.ಡಿ.ಪಿ.ಐ ಜಿ.ಆರ್ ತಿಪ್ಪೇಶಪ್ಪ, ಬಿಇಓ ನಿರಂಜನ ಮೂರ್ತಿ, ವಿಷಯ ಪರಿವೀಕ್ಷಕ ಕುಮಾರ ಹನುಮಂತಪ್ಪ ಸಾರಥಿ ಮತ್ತು ಇತರರು ಹಾಜರಿದ್ದರು.