ದಾವಣಗೆರೆ, ಮಾ. 27- ಸಭ್ಯ ಸಮಾಜ ನಿರ್ಮಾಣಕ್ಕಾಗಿ ಯುವಕರು ಲೇಖನಿ ಎತ್ತಬೇಕಾಗಿರುವುದು ಇಂದಿನ ಅಗತ್ಯವಾಗಿದೆ ಎಂದು ಇಳಕಲ್ಲು ವಿಶ್ರಾಂತ ಪ್ರಾಚಾರ್ಯ ಡಾ.ಶಂಭು ಬಳಿಗಾರ ಹೇಳಿದರು.
ಸಮೀಪದ ಎಲೆಬೇತೂರಿನ ಮಾಗಾನಹಳ್ಳಿ ಅಂಬಾಸಪ್ಪನವರ ಮೈದಾನದಲ್ಲಿ ಆಯೋಜಿಸ ಲಾಗಿದ್ದ 11ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅವರು ಸಮಾರೋಪ ನುಡಿಗಳನ್ನಾಡಿದರು.
ಯುವಕರಿಗೆ ಕನ್ನಡ ಸಾಹಿತ್ಯ ಪರಂಪರೆಯ ಅರಿವಿರಬೇಕು. ಜೀವನದ ಮೌಲ್ಯ, ನೆಲದ ಸಂಸ್ಕೃತಿಯ ಬಗ್ಗೆ ಅರಿವಿಲ್ಲದ ಬರವಣಿಗೆ ಅನಾಹುತಕ್ಕೆ ಕಾರಣವಾಗುತ್ತದೆ ಎಂದೂ ಸಹ ಅವರು ಇದೇ ವೇಳೆ ಎಚ್ಚರಿಸಿದರು.
ನಮ್ಮ ಸಂಸ್ಕೃತಿ, ಮಣ್ಣಿನ ಗುಣಗಳು ಲೇಖನಿ ಮೂಲಕ ಮುಂದಿನ ಪೀಳಿಗೆಗೆ ತಲುಪಬೇಕು. ಆ ಮೂಲಕ ಅವರು ಸಮಾಜದಲ್ಲಿ ಸಭ್ಯರಾಗಿ ಬಾಳುವಂತಾಗಲಿ ಎಂದು ಆಶಿಸಿದರು.
ಸಮ್ಮೇಳನದ ನವ ನಿರ್ಣಯಗಳು
ಸಮೀಪದ ಎಲೆಬೇತೂರಿನ ಮಾಗಾನಹಳ್ಳಿ ಅಂಬಾಸಪ್ಪನವರ ಮೈದಾನದಲ್ಲಿ ಆಯೋಜಿಸಲಾಗಿದ್ದ 11ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ 9 ನಿರ್ಣಯಗಳನ್ನು ಕೈಗೊಳ್ಳಲಾಗಿದೆ.
1. ಮುಂದಿನ ವಿಶ್ವ ಕನ್ನಡ ಸಮ್ಮೇಳನವನ್ನು ದಾವಣಗೆರೆಯಲ್ಲೇ ನಡೆಸಬೇಕು. 2. ದಾವಣಗೆರೆಯಲ್ಲಿ ಎಫ್ ಎಂ ರೇಡಿಯೋ ಕೇಂದ್ರ ಆರಂಭಿಸಬೇಕು. 3. ಕನ್ನಡವನ್ನು ಅನ್ನದ ಭಾಷೆಯನ್ನಾಗಿ ಮಾಡುವ ದೃಷ್ಟಿಯಿಂದ ಯುವಕರಿಗೆ ಹೆಚ್ಚು ಉದ್ಯೋಗಗಳನ್ನು ಸೃಷ್ಟಿಸಬೇಕು. ಈ ನಿಟ್ಟಿನಲ್ಲಿ ದಾವಣಗೆರೆ ಜಿಲ್ಲೆಯಲ್ಲಿ ಕೈಗಾರಿಕೆಗಳ ಸ್ಥಾಪನೆ ಹಾಗೂ ಸಿದ್ಧ ಉಡುಪುಗಳ ತಯಾರಿಕೆಗೆ ವಿಶೇಷ ಆರ್ಥಿಕ ವಲಯ, ತಂತ್ರಜ್ಞಾನ ಪಾರ್ಕುಗಳ ಸ್ಥಾಪನೆಗೆ ಅವಕಾಶ ಕಲ್ಪಿಸಬೇಕು.
4. ನಾಡಿನ ಮಧ್ಯ ಭಾಗದಲ್ಲಿರುವ ದಾವಣಗೆರೆಯಲ್ಲಿ ಪೂರ್ಣ ಪ್ರಮಾಣದ ವಿಮಾನ ನಿಲ್ದಾಣ ನಿರ್ಮಿಸುವ ಮೂಲಕ ಶಿಕ್ಷಣ ಮತ್ತು ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವುದು. 5. ಕೃಷಿ ಪ್ರಧಾನವಾಗಿರುವ ದಾವಣಗೆರೆ ಜಿಲ್ಲೆಯಲ್ಲಿ ಭತ್ತ, ರಾಗಿ, ಜೋಳ, ಅಡಕೆ, ಬಾಳೆ ಮುಂತಾದ ಬೆಳೆಗಳಿಗೆ ಪೂರಕವಾಗಿ ಸಂಶೋಧನೆಗೆ ಗುಣವಾಗುವಂತೆ ಕೃಷಿ ಮತ್ತು ತೋಟಗಾರಿಕೆ ಕಾಲೇಜು ಸ್ಥಾಪನೆಗೆ ಕ್ರಮ ವಹಿಸಬೇಕು. 6. ನಾಡಿನ ಯಾವುದೇ ಕನ್ನಡ ಶಾಲೆಗಳನ್ನು ಮುಚ್ಚಬಾರದು ಹಾಗೂ ಕನ್ನಡ ಶಾಲೆಗಳ ಅಭಿವೃದ್ಧಿಗೆ ಮತ್ತು ಮೂಲ ಸೌಕರ್ಯಗಳಿಗೆ ಹೆಚ್ಚಿನ ಅನುದಾನ ನೀಡಬೇಕು. 7. ಕನ್ನಡ ನಾಡಿನ ಪ್ರತಿ ಜಿಲ್ಲೆ ಮತ್ತು ತಾಲೂಕು ಕೇಂದ್ರಗಳಲ್ಲಿ ಕನ್ನಡ ಭವನ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಮಾಡಬೇಕು. 8. ಐತಿಹಾಸಿಕ ಹಿನ್ನೆಲೆ ಹೊಂದಿರುವ ಎಲೇಬೇತೂರಿನ ಶ್ರೀ ಕಲ್ಲೇಶ್ವರ ದೇವಸ್ಥಾನವನ್ನು ಜೀರ್ಣೋದ್ಧಾರಗೊಳಿಸಿ ಪ್ರವಾಸೋದ್ಯಮ ಕೇಂದ್ರವನ್ನಾಗಿ ಅಭಿವೃದ್ಧಿಪಡಿಸಬೇಕು. ಹಾಗೂ ಗ್ರಾಮದಲ್ಲಿರುವ ಶೀಲಾ ಶಾಸನಗಳ ಸಂಗ್ರಹ ಮತ್ತು ಸಂರಕ್ಷಣೆ ಆಗಬೇಕು. 9. ಕನ್ನಡ ಸಾಹಿತ್ಯ ಪರಿಷತ್ತಿನ ಚಟುವಟಿಕೆಗಳನ್ನು ನಗರ ಪ್ರದೇಶಗಳಿಗೆ ಸೀಮಿತಗೊಳಿಸದೆ ಗ್ರಾಮೀಣ ಪ್ರದೇಶಗಳಿಗೂ ವಿಸ್ತರಿಸುವುದು. ಸಂಜೆ ನಡೆದ ಬಹಿರಂಗ ಅಧಿವೇಶನದಲ್ಲಿ ಜಿಲ್ಲಾ ಕಸಾಪ ಕೋಶಾಧ್ಯಕ್ಷ ಕೆ.ರಾಘವೇಂದ್ರ ನಾಯರಿ ನಿರ್ಣಯ ಮಂಡಿಸಿದರು.
ದಾವಣಗೆರೆ, ಮಾ. 27- ಮಹಿಳೆಯರ ಸಾಹಿತ್ಯಕ್ಕೆ ಅಡುಗೆ ಮನೆಯ ಸಾಹಿತ್ಯ, ಎರಡನೇ ದರ್ಜೆ ಸಾಹಿತ್ಯ ಎಂದು ಅವಹೇಳನ ಮಾಡಬೇಡಿ ಎಂದು 11ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದ ಜಿ.ಎಸ್. ಸುಶೀಲಾದೇವಿ ಆರ್.ರಾವ್ ಹೇಳಿದರು.
ಸಮಾರೋಪ ಸಮಾರಂಭದಲ್ಲಿ ಅವರು ಸಮ್ಮೇಳನಾಧ್ಯಕ್ಷರ ನುಡಿಗಳನ್ನಾಡುತ್ತಾ, ಇಂದಿಗೂ ಮಹಿಳೆ ಅನೇಕ ಕಷ್ಟ, ನೋವು ಅನುಭವಿಸುತ್ತಿದ್ದಾಳೆ. ಅನೇಕ ಕಟ್ಟುಪಾಡುಗಳಿವೆ. ಅವೆಲ್ಲವನ್ನೂ ಮೀರಿ ಸಾಹಿತ್ಯ ರಚಿಸುವುದು ಸುಲಭದ ಮಾತಲ್ಲ ಎಂದರು.
ಪುರುಷರು ತಮಗನಿಸಿದ್ದನ್ನು ನಿರ್ಬಿಢೆಯಿಂದ ಹೇಳಬಹುದು. ಆದರೆ ಮಹಿಳೆ ಮಾತನಾಡಿದರೆ ಅವಳ ಚಾರಿತ್ರ್ಯವಧೆ ಮಾಡಲಾಗುತ್ತದೆ ಎಂದ ಅವರು, ಇಂದಿನ ಮಹಿಳಾ ಸಾಹಿತ್ಯದ ಬಗ್ಗೆ ಅಪಾರ ಹೆಮ್ಮೆ ಇದೆ ಎಂದರು. ಸಮ್ಮೇಳನಾಧ್ಯಕ್ಷರನ್ನಾಗಿಸಿ ನೀವು ನೀಡಿದ ಗೌರವ ಕೇವಲ ನನಗಲ್ಲ. ಮಹಿಳಾ ಸಾಹಿತ್ಯ ಹಾಗೂ ಮಹಿಳಾ ಸಾಹಿತಿಗಳಿಗೆ ನೀಡಿದ ಗೌರವ ಎಂದು ಬಣ್ಣಿಸಿದ ಅವರು, ಊಟದ ವ್ಯವಸ್ಥೆಯೂ ಸೇರಿ ಸಮ್ಮೇಳನವನ್ನು ಅಚ್ಚುಕಟ್ಟಾಗಿ, ಯಶಸ್ವಿಯಾಗಿ ನಡೆಸಿಕೊಟ್ಟಿದ್ದಕ್ಕೆ ಎಲೆಬೇತೂರು ಗ್ರಾಮಸ್ಥರಿಗೆ ಧನ್ಯವಾದ ಅರ್ಪಿಸಿದರು.
ಸುಖ, ಸಮೃದ್ಧಿಯ ಜೀವನ ನಡೆಸುತ್ತಿದ್ದ ನಾವು ಇಂದು ಯಾವ ಸ್ಥಿತಿಗೆ ತಲುಪಿದ್ದೇವೆ ಎಂಬುದನ್ನು ಪ್ರಶ್ನಿಸಿಕೊಳ್ಳಬೇಕಿದೆ. ಹಳ್ಳಿಗಳ ಮನೆಗಳಲ್ಲಿ ಅರ್ಧ ಜನರಿದ್ದರೆ, ಅರ್ಧ ದನಗಳಿ ರುತ್ತಿದ್ದವು. ಪಡಸಾಲೆಯಲ್ಲಿ ಕಾಳು-ಕಡಿ ತುಂಬಿರುತ್ತಿದ್ದವು. ಉತ್ಕೃಷ್ಟ ಆಹಾರ ಸೇವಿಸುತ್ತಾ ಸುಖವಾಗಿದ್ದ ರೈತರ ಮನೆಗಳಲ್ಲೀಗ ಆಕಳು-ಎಮ್ಮೆ ಮರೆಯಾಗಿವೆ. ಎತ್ತುಗಳ ಜಾಗವನ್ನು ಟ್ರ್ಯಾಕ್ಟರ್ಗಳು ಆಕ್ರಮಿಸಿವೆ. ದನಗಳಿಲ್ಲದೆ, ಗೊಬ್ಬರ ಇಲ್ಲ. ರಾಸಾಯನಿಕ ಗೊಬ್ಬರಗಳಿಂದಾಗಿ ಭೂಮಿ ಬರಡಾಗುವ ಹಂತಕ್ಕೆ ತಲುಪಿದೆ. ಸ್ವಾವಲಂಬಿಗಳಾಗಿದ್ದವರು ನಮ್ಮ ಅಸ್ಮಿತೆ, ನಮ್ಮತನವನ್ನೇ ಕಳೆದುಕೊಳ್ಳುವಷ್ಟರ ಮಟ್ಟಿಗೆ ಪರಾವಲಂಬಿಗಳಾಗುತ್ತಿದ್ದೇವೆ ಎಂದು ಆತಂಕ ವ್ಯಕ್ತಪಡಿಸಿದರು.
ಫೈವ್ ಸ್ಟಾರ್ ಸಂಸ್ಕೃತಿಯ ಸುಖವಿರದಿದ್ದರೂ ಬದುಕಿನಲ್ಲಿ ಸ್ವಾಲವಂಬನೆ, ನೆಮ್ಮದಿ ಇತ್ತು. ಆದರೆ ಆಧುನಿಕ ಸಂಸ್ಕೃತಿಯಿಂದಾಗಿ ಸ್ವಾರ್ಥ ಮನೆ ಮಾಡಿದೆ. ಪರಸ್ಪರ ಉಪಕಾರ ಮಾಡುವ ಮನೋಭಾವ ಇಲ್ಲವಾಗಿದೆ. ಇಂತಹ ಸಂದರ್ಭದಲ್ಲಿ ಯುವಕರು ಸಭ್ಯ ಸಮಾಜ ನಿರ್ಮಾಣಕ್ಕಾಗಿ ಬರವಣಿಗೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಹೇಳಿದರು.
ಪಂಪ ಭಾರತದಲ್ಲಿ ಕರ್ಣನಿಗೆ ತನ್ನ ಜನ್ಮ ರಹಸ್ಯ ತಿಳಿಸಿದ ಶ್ರೀ ಕೃಷ್ಣ, ಕೌರವರನ್ನು ಬಿಟ್ಟು ಪಾಂಡವರ ಕಡೆ ಬರುವಂತೆ ಹೇಳಿದಾಗ, ಕರ್ಣ ಅಧಿಕಾರದ ಆಸೆಗಾಗಿ ತನ್ನ ಸ್ನೇಹ, ನಂಬಿಕೆಗೆ ದ್ರೋಹ ಬಗೆಯುವುದಿಲ್ಲ ಎಂಬ ದೃಷ್ಟಾಂತ ಸೇರಿದಂತೆ ರಾಘವಾಂಕನ ಸಾಹಿತ್ಯ, ಶರಣರ ವಚನಗಳಲ್ಲಿನ ಜೀವನ ಮೌಲ್ಯಗಳನ್ನು ಉದಾಹರಿಸಿದ ಬಳಿಗಾರ ಅವರು, ಇಂತಹ ಸಾಹಿತ್ಯದ ಮೌಲ್ಯಗಳನ್ನು ಯುವಕರು ಅರಿತಿರಬೇಕು ಎಂದರು.
ಜಿಲ್ಲಾ ಕಸಾಪ ಅಧ್ಯಕ್ಷ ಬಿ.ವಾಮದೇವಪ್ಪ ಅಧ್ಯಕ್ಷತೆ ವಹಿಸಿದ್ದರು. ಸಾಹಿತಿ ಡಾ.ಎಂ.ಜಿ. ಈಶ್ವರಪ್ಪ, ಶಾಸಕ ಎಂ.ಪಿ. ರೇಣುಕಾಚಾರ್ಯ, ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಎ.ಆರ್. ಉಜ್ಜಿನಪ್ಪ ಉಪಸ್ಥಿತರಿದ್ದರು. ಇದೇ ವೇಳೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಲಾಯಿತು.