ಹೊನ್ನಾಳಿ, ಮಾ.28- ರಾಜ್ಯದಲ್ಲಿ ಒಟ್ಟು 55 ಸಾವಿರಕ್ಕೂ ಹೆಚ್ಚು ನಕಲಿ ಜಾತಿ ಪ್ರಮಾಣ ಪತ್ರ ಪಡೆದಿದ್ದಾರೆ ಎಂಬ ಸಂಗತಿ ನಿಜಕ್ಕೂ ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ರಾಜ್ಯ ಪರಿವರ್ತನಾ ವೇದಿಕೆ ರಾಜ್ಯ ಸಂಚಾಲಕ ಎ.ಡಿ.ಈಶ್ವರಪ್ಪ ಹೇಳಿದರು.
ಹೊನ್ನಾಳಿ ಶಾಸಕ ಎಂ.ಪಿ.ರೇಣುಕಾಚಾರ್ಯ ಅವರ ಕುಟಂಬ ವರ್ಗದವರು ಸುಳ್ಳು ಜಾತಿ ಪ್ರಮಾಣ ಪತ್ರ ಪಡೆದಿದ್ದಾರೆ ಎಂದು ಆರೋಪಿಸಿ ಪ್ರತಿಭಟನೆ ಹಮ್ಮಿಕೊಳ್ಳುವ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
ಮೀಸಲಾತಿ ವಿರೋಧಿಸುತ್ತಿದ್ದವರೇ ಇಂದು ತಮ್ಮನ್ನು ಒಳಪಂಗಡದ ಮೀಸಲಾತಿಗೆ ಸೇರಿಸಿ ಎಂದು ಬೇಡಿಕೆಯೊಂದಿಗೆ ಹೋರಾಟ ನಡೆಸುತ್ತಿ ರುವುದು ದುರದೃಷ್ಟಕರ ಸಂಗತಿ ಯಾಗಿದೆ ಎಂದರು. 7600 ಜಾತಿಗಳಿದ್ದು ಅಂಕಿ, ಅಂಶಗಳ ಪ್ರಕಾರ ರಾಜ್ಯದಲ್ಲಿ 3600 ಬೇಡ ಜಂಗಮರಿದ್ದು ಮೀಸಲಾತಿ ಸರ್ಟಿಫಿಕೇಟ್ ಪಡೆಯುವ ಅರ್ಹತೆ ಪಡೆದಿರುವ ಬೇಡ ಜಂಗಮರು ಹೊನ್ನಾಳಿಯಲ್ಲಿ ಯಾರು ಕಂಡುಬರುವುದಿಲ್ಲ.
ಡಾ.ಈಶ್ವರ್ನಾಯ್ಕ್ ಮಾತನಾಡಿ, ಎಂ.ಪಿ.ರೇಣುಕಾಚಾರ್ಯ ಅವರ ಒತ್ತಾಯಕ್ಕೆ ಮಣಿದು ನಕಲಿ ಜಾತಿ ಪ್ರಮಾಣ ಪತ್ರ ನೀಡಿರುವ ಅಂದಿನ ಬೆಂಗಳೂರು ಉತ್ತರ ತಾಲ್ಲೂಕಿನ ತಹಸೀಲ್ದಾರ್, ರಾಜಸ್ವ ನಿರೀಕ್ಷಕ ಹಾಗೂ ಗ್ರಾಮ ಲೆಕ್ಕಾಧಿಕಾರಿಗಳ ವಿರುದ್ಧ ಪರಿಶಿಷ್ಟ ಜಾತಿ ಹಾಗೂ ಪಂಗಡಗಳ ದೌರ್ಜನ್ಯ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಬೇಕೆಂದರು.
ಜಿ.ಪಂ. ಮಾಜಿ ಅಧ್ಯಕ್ಷ ಆರ್.ನಾಗಪ್ಪ, ದಲಿತ ಮುಖಂಡ ಕೊಡತಾಳ್ ರುದ್ರೇಶ್ ಮಾತನಾಡಿ, ಇತರರಿಗೆ ಮಾದರಿಯಾಗಬೇಕಿದ್ದ ಎಂಪಿ.ರೇಣುಕಾಚಾರ್ಯ ಅವರು ನಕಲಿ ಜಾತಿ ಪ್ರಮಾಣಪತ್ರ ಪಡೆದು ಅವಳಿ ತಾಲ್ಲೂಕಿನ ಪರಿಶಿಷ್ಟ ಜಾತಿಯವರ ಅನ್ನಕ್ಕೆ ಕನ್ನ ಹಾಕಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜಿ.ಪಂ. ಮಾಜಿ ಸದಸ್ಯ ಶಿವರಾಂ ನಾಯ್ಕ್, ತಾ.ಪಂ. ಮಾಜಿ ಸದಸ್ಯ ಪೀರ್ಯಾನಾಯ್ಕ್, ಕ್ಯಾಸಿನಕೇರಿ ಶೇಖರಪ್ಪ, ಅರಕೆರೆ ಕೃಷ್ಣ, ಶಂಕರನಾಯ್ಕ್, ಬೆನಕನಹಳ್ಳಿ ಪರಮೇಶ್, ಸಿದ್ದೇಶ್ ಮಾದಾಪುರ, ಚಂದ್ರಪ್ಪ, ರವಿನಾಯ್ಕ, ರಾಜಶೇಖರ್ ಹಾಗೂ ಇತರರು ಇದ್ದರು.