ಅಕಾಲಿಕ ಮಳೆಗೆ ಕೊಚ್ಚಿ ಹೋದ ಇಟ್ಟಿಗೆ ಭಟ್ಟಿ

ಕೋಟ್ಯಾಂತರ ರೂ. ನಷ್ಟ: ಭೇಟಿ ನೀಡದ ಜನಪ್ರತಿನಿಧಿಗಳು

ಹರಿಹರ, ಜ.9- ಕಳೆದ ಮೂರು, ನಾಲ್ಕು ದಿನಗಳಿಂದ ಸತತವಾಗಿ ಬೀಳುತ್ತಿರುವ ಅಕಾಲಿಕ ಮಳೆಗೆ ಹೊರವಲಯದ ಗುತ್ತೂರು, ಹರಿಹರ, ಕರಲಹಳ್ಳಿ, ಕೋಡಿಯಾಲ ಹೊಸಪೇಟೆ, ಕವಲೆತ್ತು, ಒಡೆರಾಯನಹಳ್ಳಿ, ಕುರುಬರಹಳ್ಳಿ, ಮುಂತಾದ ಗ್ರಾಮದಲ್ಲಿ ಇಟ್ಟಿಗೆ ಭಟ್ಟಿಯಲ್ಲಿ ತಯಾರಿಕೆ ಹಂತದಲ್ಲಿ ಇದ್ದ ಲಕ್ಷಾಂತರ ಇಟ್ಟಿಗೆಗಳು ನೀರಿನ ರಭಸಕ್ಕೆ ಹಾಳಾಗಿ ಕೋಟ್ಯಾಂತರ ರೂಪಾಯಿ ನಷ್ಟವಾಗಿದೆ.

ಪ್ರಮುಖ ಉದ್ಯೋಗವಾಗಿರುವ ಇಟ್ಟಿಗೆ ತಯಾರಿಕೆ ಉದ್ಯಮವು, ಅಕಾಲಿಕ ಮಳೆಯಿಂದಾಗಿ ತತ್ತರಿಸಿ ಹೋಗಿದೆ. ನಗರ ಸೇರಿದಂತೆ ಗುತ್ತೂರು, ಕರಲಹಳ್ಳಿ, ಕುರಬರಹಳ್ಳಿ, ಕೊಂಡಜ್ಜಿ ಮತ್ತು ರಾಣೇಬೆನ್ನೂರು ತಾಲ್ಲೂಕಿನ ಕೋಡಿಯಾಲ ಹೊಸಪೇಟೆ, ಕವಲೆತ್ತು, ಒಡೆರಾಯನಹಳ್ಳಿ ಮುಂತಾದ ಗ್ರಾಮಗಳಲ್ಲಿ ಇಟ್ಟಿಗೆ ಭಟ್ಟಿಗಳಲ್ಲಿ ಪ್ರತಿವರ್ಷ ಕೋಟ್ಯಾಂತರ ಇಟ್ಟಿಗೆಗಳು ತಯಾರಿಗೊಂಡು ಕಟ್ಟಡ ಕಟ್ಟುವ ನಿರ್ಮಾಣ ಕಾರ್ಯಕ್ಕೆ ರಾಜ್ಯದ ನಾನಾ ಭಾಗಗಳಿಗೆ  ಪೂರೈಕೆಯಾಗುತ್ತದೆ. 

ಇಟ್ಟಿಗೆ ತಯಾರಿಕಾ ಕಾರ್ಯ ದೀಪಾವಳಿ ಹಬ್ಬದ ನಂತರ ಪ್ರಾರಂಭವಾಗಲಿದ್ದು ಬಿಜಾಪುರ, ಗದಗ, ಹಾವೇರಿ ಸೇರಿದಂತೆ ಮುಂತಾದ ಜಿಲ್ಲೆಗಳಿಂದ ಸಾವಿರಾರು ಸಂಖ್ಯೆಯಲ್ಲಿ ಕಾರ್ಮಿಕರು ಕುಟುಂಬ ಸಮೇತ ಬಂದು ಬೀಡು ಬಿಡುತ್ತಾರೆ. ಈಗಾಗಲೇ ಕೋಟ್ಯಾಂತರ ಇಟ್ಟಿಗೆಗಳು  ಸಿದ್ಧಗೊಂಡು ಸುಡುವ ಹಂತದವರೆಗೆ ಬಂದಾಗ ದಿಢೀರ್ ಸುರಿದ ಅಕಾಲಿಕ ಮಳೆಯಿಂದಾಗಿ ಎಲ್ಲವೂ ನೀರು ಪಾಲಾಗಿ ಕೋಟ್ಯಾಂತರ ರೂಪಾಯಿ ಮೌಲ್ಯದ ಇಟ್ಟಿಗೆಗಳು ಹಾಳಾಗಿ ಇಟ್ಟಿಗೆ ಉದ್ಯಮಕ್ಕೆ ದೊಡ್ಡ ಕೊಡಲಿ ಪೆಟ್ಟನ್ನು ಪ್ರಕೃತಿ ನೀಡಿದೆ. 

ಸಿ.ಎಚ್.ಪಿ ಇಟ್ಟಿಗೆ ಭಟ್ಟಿಯ ಮಾಲೀಕ ಷಣ್ಮುಖ ಪೂಜಾರ್ ಮಾತನಾಡಿ, ನಾವು ಕಳೆದ ಮೂರು ತಿಂಗಳಿಂದ ಬೆಳಗಿನ ಜಾವ ನಾಲ್ಕು ಗಂಟೆಗೆ ಎದ್ದು ಕಷ್ಟ ಪಡುತ್ತಿದ್ದೇವೆ. ಸಾಲಸೋಲ ಮಾಡಿ ಬಡ್ಡಿ ಕಟ್ಟಿ ಹಣ ತಂದು ಇಟ್ಟಿಗೆ  ತಯಾರಿಕಾ ಕಾರ್ಯ ಆರಂಭಿಸಿರುತ್ತೇವೆ. ಒಂದು ಇಟ್ಟಿಗೆಗೆ ಕನಿಷ್ಟ ಅಂದರೂ  4 ರಿಂದ 5 ರೂಪಾಯಿ ವೆಚ್ಚವಾಗುತ್ತದೆ. ಕಾರ್ಮಿಕ ಕುಟುಂಬಕ್ಕೆ ಎಲ್ಲಾ ರೀತಿಯ ಆರ್ಥಿಕ ನೆರವು ಸಹ ನೀಡಬೇಕಾಗಿರುತ್ತದೆ. ಆದರೆ ಪ್ರಕೃತಿಯ ವಿಧಿ ಆಟದಿಂದ ನಾವು ಜೀವನ ನಡೆಸುವುದು ಬಹಳ ಕಷ್ಟವಾಗುತ್ತದೆ.  ಸಾಲವನ್ನು ಮರುಪಾವತಿ ಮಾಡುವುದು ಕಷ್ಟವಾಗುತ್ತದೆ. ಅಕಾಲಿಕ ಮಳೆಯಿಂದಾಗಿ ಈ ಭಾಗದ ಸುತ್ತಮುತ್ತಲಿನ ಸುಮಾರು 350 ಕ್ಕೂ ಹೆಚ್ಚು ಇಟ್ಟಿಗೆ ಭಟ್ಟಿಗಳಿಂದ ಅಂದಾಜು 30 ಕೋಟಿಗೂ ಹೆಚ್ಚು ರೂ.ನಷ್ಟು ನಷ್ಟವಾಗಿರಬಹುದು. ಇಷ್ಟು ದಿನದ ಶ್ರಮ ಹಾಗೂ ಬಂಡವಾಳ ನೀರಿನಲ್ಲಿ ಕೊಚ್ಚಿ ಹೋಗಿದೆ. ನಮ್ಮ ನೋವು ಕೇಳಲು ಇಲ್ಲಿಯವರೆಗೆ ಯಾವುದೇ ಅಧಿಕಾರಿಗಳು ಮತ್ತು ಜನ ಪ್ರತಿನಿಧಿಗಳು ಬಾರದೆ ಇರುವುದು ಸಹ ನಮ್ಮ ಮನಸ್ಸಿಗೆ ನೋವು ತರಿಸಿದೆ ಎಂದು ಹೇಳಿದರು. ಮುಂದಿನ ದಿನಗಳಲ್ಲಿ ಇಟ್ಟಿಗೆ ದರಗಳು ಸಹ ದುಪ್ಪಟ್ಟು ಆಗುವ ಸೂಚನೆ ಇದ್ದು, ಇದರ ಹೊರೆಯನ್ನು ಮನೆಗಳನ್ನು ನಿರ್ಮಾಣ ಮಾಡುವ ಗ್ರಾಹಕರು ಹೊರಬೇಕಾಗಿದೆ. 

ಸತತ ಮೂರು ನಾಲ್ಕು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಅನೇಕ ಮನೆಗಳಿಗೆ ನೀರು ನುಗ್ಗಿ ಮನೆಯಲ್ಲಿ ಇದ್ದ ಪಾತ್ರೆಗಳು ಚರಂಡಿಯಲ್ಲಿ ತೇಲಿಕೊಂಡು ಹೋಗಿವೆ. ಮತ್ತು ಜಮೀನುಗಳಿಗೆ ನೀರು ನುಗ್ಗಿರುವುದರಿಂದ ಬೆಳ್ಳೂಡಿ, ಬನ್ನಿಕೋಡು, ಭಾನುವಳ್ಳಿ ಮುಂತಾದ ಗ್ರಾಮಗಳಲ್ಲಿ ಮೆಕ್ಕೆಜೋಳ ಬೆಳೆ  ನೀರಿನಲ್ಲಿ ಕೊಚ್ಚಿಕೊಂಡು ಹೋಗಿವೆ. 

ಈ ಸಂದರ್ಭದಲ್ಲಿ ಪೂಜಾರ್ ಈರಣ್ಣ, ಎಂ.ಎಂ.ಪಿ. ನಾಗರಾಜ್, ಎಂ.ಹೆಚ್.ಪಿ. ಬಸವರಾಜ್, ಎಂ.ಹೆಚ್.ಎಸ್. ಭೀಮಣ್ಣ, ಶಂಕ್ರಪ್ಪ ಅಮರಾವತಿ, ನಾಗರಾಜ್ ಗುತ್ತೂರು, ಗುರುಬಸಪ್ಪ ಪೂಜಾರ್, ಅಣ್ಣಪ್ಪ ಪೂಜಾರ, ಬಸವರಾಜ್ ಪೂಜಾರ್, ಹಾಲೇಶಪ್ಪ, ಬಿ.ಆರ್.ಎಸ್. ನಾಗರಾಜ್, ಆನಂದ್, ಈರಣ್ಣ ಬಿಜೆಪಿ , ಚಂದ್ರಪ್ಪ, ಇನ್ನಿತರರಿದ್ದರು.

error: Content is protected !!