ನೀರನ್ನು ಸಂರಕ್ಷಿಸದಿದ್ದರೆ ಮುಂದಿನ ಪೀಳಿಗೆಗೆ ಸಂಪನ್ಮೂಲ ಕೊರತೆ

ಅತ್ತಿಗೆರೆ : ವಿಶ್ವ ಜಲ ದಿನಾಚರಣೆ ಕಾರ್ಯಕ್ರಮದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶರಾದ ಪ್ರವೀಣ್‍ನಾಯ್ಕ

ದಾವಣಗೆರೆ,ಮಾ.27- ಭೂಮಿ ಮೇಲೆ ಸಕಲ ಜೀವರಾಶಿ ಬದುಕುತ್ತಿರುವುದು ನೀರು, ಗಾಳಿ, ಆಹಾರದಿಂದ, ಕೋವಿಡ್ ಸಂದರ್ಭದಲ್ಲಿ ನಮಗೆ ನೀರು ಮತ್ತು ಸ್ವಚ್ಛತೆ ಬಗ್ಗೆ ಅರಿವಾಗಿದೆ. ನೀರಿಗಾಗಿ ಸುಸ್ಥಿರ ಅಭಿವೃದ್ಧಿಯತ್ತ ಕ್ರಮ ಕೈಗೊಳ್ಳಲು, ಜನರನ್ನು ಉತ್ತೇಜಿಸಲು ವಿಶ್ವ ಜಲ ದಿನಾಚರಣೆಯನ್ನು ಹಮ್ಮಿಕೊಂಡಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರಾದ ಪ್ರವೀಣ್‍ನಾಯ್ಕ ಹೇಳಿದರು.

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು, ಜಿಲ್ಲಾ ವಕೀಲರ ಸಂಘ, ಶ್ರೀ ಕೇಸರಿ ವಿದ್ಯಾಸಂಸ್ಥೆ ಇವರ ಆಶ್ರಯದಲ್ಲಿ ಅತ್ತಿಗೆರೆ ಗ್ರಾಮದ ಶ್ರೀ ಮಹಾದೇವ ಕೇಸರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಿನ್ನೆ ಹಮ್ಮಿಕೊಂಡಿದ್ದ ವಿಶ್ವ ಜಲ ದಿನ-2022 ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ನೀರು ಜೀವ ಜಲ ಮತ್ತು ಅಮೂಲ್ಯವಾಗಿದೆ. ನೀರನ್ನು ಉಳಿಸಲು ಸರಿಯಾದ ಕ್ರಮ ಕೈಗೊಳ್ಳದಿದ್ದರೆ, ಮುಂದಿನ ಪೀಳಿಗೆಗೆ ಈ ಸಂಪನ್ಮೂಲ ಸಂರಕ್ಷಿಸಲು ಸಾಧ್ಯವಿಲ್ಲ. ನೀರಿನ ಪ್ರಾಮುಖ್ಯತೆ ಕುರಿತು ಜನರಲ್ಲಿ ಅರಿವು ಮೂಡಿಸಲು ವಿಶ್ವ ಸಂಸ್ಥೆಯು 1993ರಿಂದ ಪ್ರತಿ ವರ್ಷ ಮಾರ್ಚ್ 22ರಂದು ವಿಶ್ವ ಜಲ ದಿನವನ್ನು ನೀರಿನ ಕೊರತೆ ಬಗ್ಗೆ ಜಾಗೃತಿ ಮೂಡಿಸಲು ಆಚರಿಸಲಾಗುತ್ತಿದೆ ಎಂದು ಅವರು ತಿಳಿಸಿದರು. 

ಹಿರಿಯ ವಕೀಲರಾದ ಎಲ್.ಹೆಚ್.ಅರುಣ್‍ಕುಮಾರ್ ವಿಶೇಷ ಉಪನ್ಯಾಸ ನೀಡಿ, ಭೂಮಿಯು ಮುಕ್ಕಾಲು ಭಾಗ ನೀರು ಆವರಿಸಿದ್ದರೂ ಕೂಡ ಇಂದಿಗೂ ನೀರಿನ ಸಮಸ್ಯೆ ಆವರಿಸಿದೆ. 2050ರ ವೇಳೆಗೆ ವಿಶ್ವದ ಜನಸಂಖ್ಯೆ 1ಸಾವಿರ ಕೋಟಿ ತಲುಪುವ ಸಾಧ್ಯತೆ ಇದೆ. ಆ ವೇಳೆಗೆ ಜಗತ್ತಿನಲ್ಲಿ ನೀರಿನ ಬೇಡಿಕೆ ಶೇ 50ರಷ್ಟು ಹೆಚ್ಚಾಗಲಿದೆ. ಆಗ ಸಮಸ್ಯೆಯ ತೀವ್ರತೆ ನಿರ್ವಹಿಸುವುದು ಕಷ್ಟ. ಜಗತ್ತಿನಲ್ಲಿ ಕುಡಿಯುವ ನೀರಿ ಅರ್ಧದಷ್ಟು ಅಂತರ್ಜಲವಾಗಿದೆ. ಇದರ ಸಂರಕ್ಷಣೆ, ಸುಸ್ಥಿರ ಬಳಕೆ ಹಾಗೂ ಅದರ ಪ್ರಮಾಣ ಹೆಚ್ಚಿಸಲು ಕೈಗೊಳ್ಳಬೇಕಾದ ಕ್ರಮ ಕುರಿತು ಜಾಗೃತಿ ಮೂಡಿಸುವುದು ಅಗತ್ಯವಾಗಿದೆ. ಜಗತ್ತಿನಾದ್ಯಂತ ಪ್ರತಿಯೊಬ್ಬರಿಗೂ ಸ್ವಚ್ಛ ಕುಡಿಯುವ ನೀರು ಒದಗಿಸುವುದು. ನೈರ್ಮಲ್ಯ ಕಾಪಾಡುವುದು ಜಲ ದಿನಾಚರಣೆ ಮುಖ್ಯ ಗುರಿಯಾಗಿದೆ ಎಂದರು.

ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಕಾರ್ಯದರ್ಶಿ ಎಂ.ಗುರುಸಿದ್ದಸ್ವಾಮಿ ಮಾತನಾಡಿ, ವರ್ಷದಿಂದ ವರ್ಷಕ್ಕೆ ನೀರಿನ ಬಳಕೆ ಹೆಚ್ಚಾಗುತ್ತಿದ್ದು, ಶುದ್ಧ ಕುಡಿಯುವ ನೀರಿಗಾಗಿ ಜನ ಪರಿತಪಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ನೀರಿಗಾಗಿ ಯುದ್ದ ನಡೆದರೂ ಆಶ್ಚರ್ಯಪಡಬೇಕಾಗಿಲ್ಲ. ಈ ಹಿನ್ನೆಲೆಯಲ್ಲಿ ನೀರಿನ ಮಹತ್ವ, ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸುವುದರ ಜೊತೆಗೆ ಜಲ ಮೂಲಗಳ ಸಂರಕ್ಷಣೆ ಮಾಡುವುದು ಅವಶ್ಯಕವಾಗಿದೆ ಎಂದು ಕಳಕಳಿ ವ್ಯಕ್ತಪಡಿಸಿದರು.

ಸಂಸ್ಥೆಯ ಕಾರ್ಯದರ್ಶಿ ಎಂ.ಜಿ.ನಾಗಪ್ಪ ಮಾತನಾಡಿ, ಪ್ರಕೃತಿಯನ್ನು ಪ್ರೀತಿಸಬೇಕು, ಗೌರವಿಸಬೇಕು. ಆ ಮೂಲಕ ಜಲ ಸಂರಕ್ಷಣೆಗೆ  ಮುಂದಾಗಬೇಕು ಎಂದು ಕರೆ ನೀಡಿದರು.

ಅತ್ತಿಗೆರೆ ಗ್ರಾಪಂ ಅಧ್ಯಕ್ಷರಾದ ಯಶೋಧಮ್ಮ ಚಂದ್ರಪ್ಪ ಅಧ್ಯಕ್ಷತೆ ವಹಿಸಿ ದ್ದರು. ಅತಿಥಿಯಾಗಿ ಕೇಸರಿ ವಿದ್ಯಾಸಂಸ್ಥೆಯ ಅಧ್ಯಕ್ಷ ಓಂಕಾರಪ್ಪ, ಮುಖ್ಯೋಪಾಧ್ಯಾಯ ಜಿ.ಡಿ.ಲೋಹಿತ್‍ಕುಮಾರ್ ಮತ್ತು ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

error: Content is protected !!