ಹರಪನಹಳ್ಳಿ : ವಾಲ್ಮೀಕಿ ಸಮಾಜದ ಸಭೆಯಲ್ಲಿ ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಧರ್ಮದರ್ಶಿ ಜಂಬಯ್ಯನಾಯಕ ಎಚ್ಚರಿಕೆ
ಹರಪನಹಳ್ಳಿ, ಮಾ.27- ಶ್ರೀ ಪ್ರಸನ್ನಾನಂದ ಸ್ವಾಮೀಜಿಯವರು ಮೀಸಲಾತಿ ಹೆಚ್ಚಳದ ಪ್ರತಿ ನಮ್ಮ ಕೈ ಸೇರಿದ ಮೇಲೆಯೇ ನಾನು ರಾಜಧಾನಿ ಬಿಟ್ಟು ರಾಜನಹಳ್ಳಿಗೆ ಹೋಗುತ್ತೇನೆ ಎಂದು ಪಟ್ಟು ಹಿಡಿದಿದ್ದಾರೆ ಎಂದು ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಧರ್ಮದರ್ಶಿ ಜಂಬಯ್ಯನಾಯಕ ಹೇಳಿದರು.
ಪಟ್ಟಣದ ವಾಲ್ಮೀಕಿ ನಗರದ ದೊಡ್ಡಗರಡಿ ಕೇರಿಯ ಸಮದಾಯ ಭವನದಲ್ಲಿ ಜರುಗಿದ ಮೀಸಲಾತಿ ಹೆಚ್ಚಳ ಕುರಿತು ನಡೆದ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಪರಿಶಿಷ್ಟ ಪಂಗಡಕ್ಕೆ ಕೂಡಲೇ ಮೀಸಲಾತಿ ಹೆಚ್ಚಿಸದಿದ್ದರೆ ಮುಂದಿನ ದಿನಗಳಲ್ಲಿ ರಾಜ್ಯಾ ದ್ಯಂತ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಅವರು ಎಚ್ಚರಿಸಿದರು.
ವಾಲ್ಮೀಕಿ ನಾಯಕ ಸಮಾಜದ ಅಧ್ಯಕ್ಷ ಕೆ.ಉಚ್ಚೆಂಗೆಪ್ಪ ಮಾತನಾಡಿ, ವಾಲ್ಮೀಕಿ ನಾಯಕ ಸಮುದಾಯಕ್ಕೆ ಮೀಸಲಾತಿ ನೀಡಲು ಸರ್ಕಾರ ಮೀನಾಮೇಷ ಎಣಿಸುತ್ತಿರುವುದು ಖಂಡನೀಯ ಎಂದರು. ವಾಲ್ಮೀಕಿ ನಾಯಕ ಸಮಾಜಕ್ಕೆ ಮೀಸಲಾತಿ ಹೆಚ್ಚಳ ವಿಳಂಬವಾಗಲು ಸರ್ಕಾರ ಹಾಗೂ ಮೀಸಲಾತಿಯಿಂದ ಗೆದ್ದ ಶಾಸಕರ, ಸಚಿವರ ಇಚ್ಚಾಶಕ್ತಿಯ ಕೊರತೆ ಕಾರಣವಾಗಿದ್ದು, ನಾಗಮೋಹನ್‍ದಾಸ್ ವರದಿ ಅನುಷ್ಠಾನ ಗೊಳಿಸುವಂತೆ ಬೆಂಗಳೂರಿನ ಫ್ರೀಡಂ ಪಾರ್ಕ್‍ನಲ್ಲಿ ಮಾರ್ಚ್ 30 ರಂದು ಜರುಗುವ ರಾಜ್ಯ ಮಟ್ಟದ ವಿಶೇಷ ಸಭೆಗೆ ತಾಲ್ಲೂಕಿನ ಸಮಾಜದ ಬಂಧುಗಳು ಭಾಗವಹಿಸಬೇಕು ಎಂದು ಮನವಿ ಮಾಡಿದರು.
ವಾಲ್ಮೀಕಿ ಜಾತ್ರಾ ಸಮಿತಿ ತಾಲ್ಲೂಕು ಅಧ್ಯಕ್ಷ ಆಲದಹಳ್ಳಿ ಷಣ್ಮುಖಪ್ಪ ಹಾಗೂ ನಿವೃತ್ತ ಮುಖ್ಯ ಶಿಕ್ಷಕ ಆನಂದಪ್ಪ ಮಾತನಾಡಿ, ರಾಜ್ಯದಲ್ಲಿಯೇ 4ನೇ ಅತಿ ದೊಡ್ಡ ವಾಲ್ಮೀಕಿ ನಾಯಕ ಸಮಾಜದ ಜನಸಂಖ್ಯೆಗೆ ಅನುಗುಣ ವಾಗಿ ಶೇ.7.5 ಕ್ಕಿಂತ ಹೆಚ್ಚಿನ ಮೀಸಲಾತಿ ನೀಡುವಂತೆ ಒತ್ತಾಯಿಸಿ ಕಳೆದ 46 ದಿನಗಳಿಂದ ಶ್ರೀಗಳು ಧರಣಿ ಸತ್ಯಾಗ್ರಹ ನಡೆಸುತ್ತಿದ್ದರೂ ಸರ್ಕಾರ ಮೌನ ವಹಿಸಿದ್ದು, ಶ್ರೀಗಳ ತೀರ್ಮಾನಕ್ಕೆ ನಾವು ಬದ್ದರಾಗಿದ್ದೇವೆ ಎಂದರು,
ಪಂಚಾಯಿತಿ ಮಾಜಿ ಅಧ್ಯಕ್ಷ ಲಕ್ಕಳ್ಳಿ ಹನುಮಂತಪ್ಪ, ಬಿಜೆಪಿ ಎಸ್.ಟಿ ಘಟಕದ ತಾಲ್ಲೂಕು ಅಧ್ಯಕ್ಷ ಟಿ. ಮನೋಜ್, ವಾಲ್ಮೀಕಿ ನಾಯಕ ಸಮಾಜದ ಸಂಘಟನಾ ಕಾರ್ಯದರ್ಶಿ ತಿಮ್ಮೇಶ, ನ್ಯಾಯವಾದಿಗಳಾದ ಕೆ.ಎಂ. ಪ್ರಾಣೇಶ, ಜಿಟ್ಟಿನಕಟ್ಟಿ ಮಂಜುನಾಥ. ರೈತ ಸಂಘದ ದ್ಯಾಮಜ್ಜಿ ಹನುಮಂತಪ್ಪ, ಏಕಲವ್ಯ ಸಂಘರ್ಷ ಸಮಿತಿ ಅಧ್ಯಕ್ಷ ರಾಯದುರ್ಗದ ಪ್ರಕಾಶ್, ಶಿಕ್ಷಕ ಹನುಮಂತಪ್ಪ, ವಾಲ್ಮೀಕಿ ನಾಯಕ ಮಹಿಳಾ ಘಟಕದ ಮಂಜುಳಾ, ಪವಿತ್ರ, ಶೋಭಾ, ಮುಖಂಡರುಗಳಾದ ಕವಸರ ನಾಗರಾಜ, ಹನುಮಂತಪ್ಪ, ದೊಡ್ಡಗರಡಿ ದೈವಸ್ಥರಾದ ಕಮ್ಮಾರ ದೊಡ್ಡಹಾಲಪ್ಪ,
ಕೆ. ಅಂಜಿನಪ್ಪ, ಸಿ. ನಾಗರಾಜ, ಬಿ.ದುರುಗಪ್ಪ ಸೇರಿದಂತೆ ಇತರರು ಇದ್ದರು.