ಜನ್ಮ ಜಯಂತ್ಯೋತ್ಸವ ಸಮಾರಂಭದಲ್ಲಿ ಬಿ.ವೀರಣ್ಣ ಬಣ್ಣನೆ
ದಾವಣಗೆರೆ,ಮಾ.25- ಎಲ್.ಜಿ. ಹಾವನೂರ ಅವರು ಸಮಾಜದಲ್ಲಿ ತುಳಿತಕ್ಕೆ ಒಳಗಾಗಿದ್ದ ಹಿಂದುಳಿದ ವರ್ಗದ ಜನರಿಗೆ ಸಾಮಾಜಿಕ ನ್ಯಾಯ ಕಲ್ಪಿಸಿದ ನೇತಾರರು ಎಂದು ಜಿಲ್ಲಾ ವಾಲ್ಮೀಕಿ ನಾಯಕ ಸಮಾಜದ ಅಧ್ಯಕ್ಷ ಬಿ. ವೀರಣ್ಣ ಬಣ್ಣಿಸಿದರು.
ನಗರದ ವಾಲ್ಮೀಕಿ ನಾಯಕ ಸಮಾಜದ ವಿದ್ಯಾರ್ಥಿ ನಿಲಯದಲ್ಲಿ ನಾಯಕ ಸಮಾಜದ ವತಿಯಿಂದ ಇಂದು ಏರ್ಪಾಡಾಗಿದ್ದ ಹಾವನೂರು ಅವರ 97ನೇ ಜನ್ಮ ಜಯಂತ್ಯೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ರಾಜ್ಯ ಸರ್ಕಾರದ ಕಾನೂನು ಮಂತ್ರಿಯಾಗಿ ರಾಜ್ಯದ ಜನರಿಗೆ ವಿಶೇಷವಾಗಿ ಹಿಂದುಳಿದ ವರ್ಗದ ಏಳಿಗೆಗೆ ಕಾರಣೀಕರ್ತರಾಗಿದ್ದಾರೆ. ಅವರ ಅವಧಿಯಲ್ಲಿ ಜಾರಿಗೆ ಬಂದ ಅನೇಕ ಜನಪರ ಕಾರ್ಯಕ್ರಮಗಳು ಇಂದಿನ ಸಮಾಜದಲ್ಲಿ ತುಳಿತಕ್ಕೆ ಒಳಗಾದ ಜನರಿಗೆ ಸಾಮಾಜಿಕ ನ್ಯಾಯ ಕಲ್ಪಿಸುವಲ್ಲಿ ಸಹಕಾರಿಯಾಗಿದೆ ಎಂದು ತಿಳಿಸಿದರು.
ರಾಜ್ಯದಲ್ಲಿ ಹಿಂದುಳಿದ ಮಕ್ಕಳ ಶೈಕ್ಷಣಿಕ ಅಭಿವೃದ್ಧಿ ಗಮನದಲ್ಲಿಟ್ಟುಕೊಂಡು, ಶಿಕ್ಷಣ ವಸತಿ ನಿಲಯಗಳನ್ನು ಆರಂಭಿಸುವ ಮೂಲಕ ಬಡವರ ಶೈಕ್ಷಣಿಕ ಪ್ರಗತಿಗೆ ಕಾರಣರಾದರು. ಅವರು ಬದುಕಿರುವವರೆಗೆ ತಳ ಸಮುದಾಯದ ಜನರ ಶ್ರೇಯೋಭಿವೃದ್ಧಿಗೆ ದುಡಿದರು ಎಂದು ಸ್ಮರಿಸಿದರು.
ಕಾನೂನು ಸಚಿವರಾಗಿ, ದಕ್ಷಿಣ ಆಫ್ರಿಕಾದ ಸಂವಿಧಾನ ಸಮಿತಿ ಸದಸ್ಯರಾಗಿ. ರಾಜ್ಯಸಭಾ ಸದಸ್ಯರಾಗಿ, ದೇವರಾಜ ಅರಸು ಅವರ ಕಾಲದಲ್ಲಿ ವಿಧಾನ ಪರಿಷತ್ ಸದಸ್ಯರಾಗಿ, ಕಾನೂನು ಮಂತ್ರಿಯಾಗಿ ಅಪಾರ ಸೇವೆ ಸಲ್ಲಿಸಿದ್ದಾರೆ. ಇಡೀ ರಾಜ್ಯದ ಜವಾಬ್ದಾರಿ ಹೊತ್ತು, ಎಲ್ಲಾ ವರ್ಗಗಳ ಏಳಿಗೆಗಾಗಿ ಶ್ರಮಿಸಿ ಕಾರ್ಯ ನಿಷ್ಠೆ ತೋರಿದ್ದಾರೆ. ಹಾವನೂರು ವರದಿ ಎಂಬ ಖ್ಯಾತಿ ಪಡೆದಿದ್ದ ಹಾವನೂರು ಅವರು ವಾಲ್ಮೀಕಿ ನಾಯಕ ಸಮುದಾಯದ ಕಣ್ಮಣಿಯಾಗಿದ್ದರು ಎಂದು ಹೇಳಿದರು.
ನಾಯಕ ಸಮಾಜದ ಮುಖಂಡ ಪಿ.ಆರ್. ಶಾಹು ಮಾತನಾಡಿ, ಹಿಂದುಳಿದ ಜನಾಂಗದ ಅಭಿವೃದ್ಧಿಗಾಗಿ ಸಮ ಸಮಾಜ ನಿರ್ಮಾಣದ ಕನಸು ಕಟ್ಟಿಕೊಂಡು ಮುನ್ನಡೆದ ಎಲ್.ಜಿ. ಹಾವನೂರು ಅವರು ಹಿಂದುಳಿದ ವರ್ಗದ ಮುಂಚೂಣಿಯ ನಾಯಕರಾಗಿದ್ದರು ಎಂದರು.
ಈ ಸಂದರ್ಭದಲ್ಲಿ ನಾಯಕ ಸಮಾಜದ ಯುವ ಮುಖಂಡ ಶ್ರೀನಿವಾಸ ದಾಸಕರಿಯಪ್ಪ, ಎನ್.ಎಂ. ಆಂಜನೇಯ ಗುರೂಜಿ, ಕೆ.ಆರ್. ಮಂಜುನಾಥ, ಹದಡಿ ಕುಮಾರ್, ಎಸ್.ಟಿ. ರವಿ, ವಸಂತ್‌ಕುಮಾರ್, ರಾಜುನಾಯ್ಕ, ಪ್ರಮೋದ್‌ಕುಮಾರ್, ಪೈಲ್ವಾನ್ ಬಸವರಾಜ್ ಸೇರಿದಂತೆ ಇತರರು ಇದ್ದರು.