ಕರುಣಾ ಜೀವ ಕಲ್ಯಾಣ ಟ್ರಸ್ಟ್ ನ ಸಾಮಾಜಿಕ ಸೇವೆಗೆ ಗಣ್ಯರ ಶ್ಲ್ಯಾಘನೆ
ದಾವಣಗೆರೆ, ಮಾ.25- ಕರುಣಾ ಜೀವ ಕಲ್ಯಾಣ ಟ್ರಸ್ಟ್ ವತಿಯಿಂದ 45 ದಿನಗಳ ಕಾಲ ನಗರದ ವಿವಿಧ ವೃತ್ತಗಳಲ್ಲಿ ನಡೆಯಲಿರುವ ಮಜ್ಜಿಗೆ ವಿತರಣೆ ಕಾರ್ಯಕ್ರಮಕ್ಕೆ ಇಂದು ಚಾಲನೆ ನೀಡಲಾಯಿತು.
ನಗರದ ಜಯದೇವ ವೃತ್ತದಲ್ಲಿ ಏರ್ಪಾಡಾಗಿದ್ದ ಕಾರ್ಯಕ್ರಮಕ್ಕೆ ವಿರಕ್ತ ಮಠದ ಶ್ರೀ ಬಸವಪ್ರಭು ಸ್ವಾಮೀಜಿ ಚಾಲನೆ ನೀಡಿದರು. ನಂತರ ಮಾತನಾಡಿದ ಶ್ರೀಗಳು, ಬೇಸಿಗೆ ಬಂತೆಂದರೆ ಸಾಕು. ಬಿರು ಬಿಸಿಲಿನ ದಾಹಕ್ಕೆ ಮನುಷ್ಯರು ಹೈರಾಣಾಗಿ ಹೋಗುತ್ತಾರೆ. ಇಂತಹ ಸಮಯದಲ್ಲಿ ನೀರಿನ ಬದಲು ಮಜ್ಜಿಗೆ ಕುಡಿದರೆ ಆರೋಗ್ಯ ಸುಧಾರಣೆಯಾಗುತ್ತದೆ. ಅಲ್ಲದೆ ಮನಸ್ಸಿಗೂ ನೆಮ್ಮದಿ ಸಿಗುತ್ತದೆ.
ಬಿಸಿಲಿನ ಝಳ ಹೆಚ್ಚಾದರೆ ನೀರು ಕುಡಿಯಬೇಕೆನ್ನಿಸುತ್ತದೆ. ನೀರು ಕುಡಿದರೂ ಸಹ ಸಮಾಧಾನ ಆಗುವುದಿಲ್ಲ. ದೇಹಕ್ಕೆ ಸಮಾಧಾನ ಆಗಬೇಕೆಂದರೆ ಮಜ್ಜಿಗೆ ಕುಡಿಯಬೇಕು ಎಂದರು.
ಯಾರು ಮಜ್ಜಿಗೆ ಕುಡಿಯುತ್ತಾರೋ ಅವರ ಆರೋಗ್ಯ ಸುಧಾರಣೆ ಜೊತೆಗೆ ಮನಸ್ಸಿಗೆ ನೆಮ್ಮದಿ ಸಿಗುತ್ತದೆ. ಶ್ರೀಮಂತರು ಕೂಲ್ಡ್ರಿಂಕ್ಸ್ ಕುಡಿಯುತ್ತಾರೆ. ಆದರೆ ಬಡವರು, ಕುಡಿಯುವ ನೀರಿಗೂ ದುಡ್ಡಿಲ್ಲದೆ ಪರಿತಪಿಸುತ್ತಿದ್ದಾರೆ. ಇಂತಹ ಸಂದರ್ಭಗಳಲ್ಲಿ ಕರುಣಾಜೀವ ಕಲ್ಯಾಣ ಟ್ರಸ್ಟ್ ಮಜ್ಜಿಗೆ ವಿತರಣೆ ಕಾರ್ಯಕ್ರಮ ಹಮ್ಮಿಕೊಂಡಿರುವುದು ಶ್ಲ್ಯಾಘನೀಯ ಎಂದು ಹೇಳಿದರು.
ದಾವಣಗೆರೆಯ ಜಯದೇವ ವೃತ್ತ, ಹರಳೆಣ್ಣೆ ಕೊಟ್ರಬಸಪ್ಪ ವೃತ್ತ, ಜಿಲ್ಲಾಸ್ಪತ್ರೆ, ಚಾಮರಾಜ ಪೇಟೆಯ ಹಳೆ ಹೆರಿಗೆ ಮತ್ತು ಮಕ್ಕಳ ಆಸ್ಪತ್ರೆ ಕಡೆಗಳಲ್ಲಿ ಮಜ್ಜಿಗೆ ವಿತರಿಸಲಾಗುತ್ತದೆ ಎಂದರು.
ಕರುಣಾಜೀವ ಕಲ್ಯಾಣ ಟ್ರಸ್ಟ್ನ ಅಧ್ಯಕ್ಷ ಎಚ್.ಎನ್.ಮಲ್ಲಿಕಾರ್ಜುನಪ್ಪ, ಕಾರ್ಯದರ್ಸಿ ಶಿವನಕೆರೆ ಬಸವಲಿಂಗಪ್ಪ, ಟ್ರಸ್ಟಿಗಳಾದ ಮಂಜುಳಾ ಬಸವಲಿಂಗಪ್ಪ, ಎಲ್.ಎಸ್.ಪ್ರಭುದೇವ್, ಮಧುಸೂದನ್ ಮತ್ತಿತರರಿದ್ದರು.