ಮನುಷ್ಯನ ಬುದ್ಧಿ ಶಕ್ತಿ ಬೆಳೆದಷ್ಟು ಭಾವನೆಗಳು ಬೆಳೆಯುತ್ತಿಲ್ಲ

ದಾವಣಗೆರೆ, ಮಾ.25- ನಾಗರಿಕತೆಯ ಇಂದಿನ ಸಮಾಜದಲ್ಲಿ ಜಾತಿ ಸಂಘರ್ಷ ಹೆಚ್ಚುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ. ಜಾತಿಗಿಂತ ಧರ್ಮ ದೊಡ್ಡದು, ಧರ್ಮಕ್ಕಿಂತ ದೇಶ ದೊಡ್ಡದು ಎಂದು ರಂಭಾಪುರಿ ಪೀಠದ ಜಗದ್ಗುರು ಶ್ರೀ ಡಾ. ವೀರಸೋಮೇಶ್ವರ ಸ್ವಾಮೀಜಿ ಅಭಿಪ್ರಾಯಪಟ್ಟರು.

ತಾಲ್ಲೂಕಿನ ಹೂವಿನಮಡು ಗ್ರಾಮದಲ್ಲಿ ಜರುಗಿದ ಜನ ಜಾಗೃತಿ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಜಗದ್ಗುರುಗಳು ಆಶೀರ್ವಚನ ನೀಡಿದರು.

ಮನುಷ್ಯನ ಬುದ್ಧಿ ಶಕ್ತಿ ಬೆಳೆದಷ್ಟು ಭಾವನೆಗಳು ಬೆಳೆಯುತ್ತಿಲ್ಲ. ಧರ್ಮಕ್ಷೇತ್ರ ಮೊದಲ್ಗೊಂಡು ಎಲ್ಲಾ ರಂಗಗಳಲ್ಲಿ ಕಲುಷಿತ ವಾತಾವರಣ ನಿರ್ಮಾಣ ಗೊಳ್ಳುತ್ತಿರುವುದು ಆರೋಗ್ಯಕರ ಸಮಾಜಕ್ಕೆ ಮಾರಕವಾಗಿದೆ. ಸಾಮರಸ್ಯ ಬೆಳೆದು ಬರಲು ಸಂಸ್ಕಾರ, ಸಂಸ್ಕೃತಿಯ ಆಚರಣೆ ಮುಖ್ಯ. ಶ್ರೀ ಜಗದ್ಗುರು ರೇಣುಕಾಚಾರ್ಯರು ಮೌಲ್ಯಾಧಾರಿತ ತತ್ವ, ಚಿಂತನೆಗಳನ್ನು ಅರುಹಿ, ಸಕಲರನ್ನು ಉದ್ದರಿಸಿದ್ದಾರೆ. ಅವರ ಅಮೂಲ್ಯ ವಿಚಾರ ಧಾರೆ ಬದುಕಿ ಬಾಳುವ ಜನಾಂಗಕ್ಕೆ ಸನ್ಮಾರ್ಗದ ದರ್ಶನ ನೀಡುತ್ತವೆ. ಇದೇ ದಾರಿಯಲ್ಲಿ ಶರಣರು ನಡೆದು ಸಕಲ ಜನಾಂಗಕ್ಕೂ ಒಳಿತನ್ನು ಉಂಟು ಮಾಡಿದರೆಂದರು.

ಖಂಡನೆ : ಹಿಜಾಬ್ ಹಿನ್ನೆಲೆಯಲ್ಲಿ ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ಅವರು ಸ್ವಾಮಿಗಳು ಧರಿಸುವ ಪೇಟಾ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿರುವುದು ಶೋಭೆ ತರಲಾರದು. ಅದು ಹಿಂದೂ ಸಂಸ್ಕೃತಿಯ ತ್ಯಾಗ, ಔದಾರ್ಯದ ಪ್ರತೀಕವಾಗಿದೆ. ಕೆಲ ಸಮುದಾಯದವರ ಹಿತ ಬಯಸಲು ಹೋಗಿ, ಇನ್ನೊಬ್ಬರಿಗೆ ಸಲ್ಲದ ಮಾತನ್ನಾಡುವುದು ಒಳ್ಳೆಯದಲ್ಲ. ಆಗಾಗ್ಗೆ ಇಂಥ ಹೇಳಿಕೆಗಳನ್ನು ಕೊಡುವುದರಿಂದ ಅವರ ಜವಾಬ್ದಾರಿ ಸ್ಥಾನಕ್ಕೆ ಹಾನಿ ಉಂಟಾಗದೇ ಇರಲಾರದು. ಮುಂದೆ ಇಂಥ ಮಾತುಗಳನ್ನಾಡುವುದು ಮಾಜಿ ಮುಖ್ಯ ಮಂತ್ರಿಗಳ ಘನತೆಗೆ ಧಕ್ಕೆ ಉಂಟಾದೀತೆಂದು ಕಿವಿ ಮಾತು ಹೇಳಿದರು.

ಶಾಸಕ ಪ್ರೊ. ಲಿಂಗಣ್ಣ ಧರ್ಮ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ, ಎಲ್ಲ ಧರ್ಮಗಳಲ್ಲಿ ಇರುವ ಆದರ್ಶ ಚಿಂತನೆ ಅರಿತು ಆ ದಾರಿಯಲ್ಲಿ ನಡೆಯುವುದು ಜೀವನದ ಉನ್ನತಿಗೆ ಸಹಕಾರಿಯಾಗುತ್ತದೆ. ಪ್ರತಿಯೊಬ್ಬರೂ ಪರಸ್ಪರ ಸಾಮರಸ್ಯದಿಂದ ಬಾಳಬೇಕೆಂದರು.

ಆವರಗೊಳ್ಳದ ಶ್ರೀ ಓಂಕಾರ ಶಿವಾಚಾರ್ಯ ಸ್ವಾಮಿಗಳು ನೇತೃತ್ವ ವಹಿಸಿದ್ದರು. ದುಗ್ಗಾವತಿ ಉಭಯ ಶ್ರೀಗಳು, ರಾಂಪುರ ಹಾಲಸ್ವಾಮಿ ಶಿವಕುಮಾರ ಶ್ರೀಗಳು ಪಾಲ್ಗೊಂಡಿದ್ದರು.  

ಸಮಾರಂಭಕ್ಕೂ ಮುನ್ನ ಶ್ರೀ ರಂಭಾಪುರಿ ಜಗದ್ಗುರುಗಳವರ ಬೆಳ್ಳಿ ಅಡ್ಡಪಲ್ಲಕ್ಕಿ ಮಹೋತ್ಸವ ಗ್ರಾಮದಲ್ಲಿ ಸಡಗರ, ಸಂಭ್ರಮದಿಂದ ಜರುಗಿತು. ಹಲವಾರು ಕಲಾ ತಂಡಗಳು, ಕುಂಭ ಹೊತ್ತ ಮಹಿಳೆಯರು, ಆರತಿ ಹಿಡಿದ ಮುತ್ತೈದೆಯರು ಉತ್ಸವಕ್ಕೆ ಮೆರಗು ತಂದರು. 

error: Content is protected !!