ಆತ್ಮ, ಸಮಾಜದ ಕಲ್ಯಾಣ ವಚನಗಳಿಂದ ಸಾಧ್ಯ

ದಾವಣಗೆರೆ, ಮಾ. 23 –  ಶೋಷಣೆ ಹಾಗೂ ಅಜ್ಞಾನ ನಿವಾರಿಸುವ ಮೂಲ ಉದ್ಧೇಶ ವಚನ ಸಾಹಿತ್ಯದ್ದಾಗಿದೆ. ಆತ್ಮ ಹಾಗೂ ಸಮಾಜದ ಕಲ್ಯಾಣ ವಚನ ಸಾಹಿತ್ಯದಿಂದ ಸಾಧ್ಯ ಎಂದು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಗೌರವಾಧ್ಯಕ್ಷರೂ ಆಗಿರುವ ತೋಂಟದಾರ್ಯ ಮಠದ ಜಗದ್ಗುರು ಡಾ.ಶ್ರೀ ತೋಂಟದ ಸಿದ್ದರಾಮ ಮಹಾಸ್ವಾಮೀಜಿ ಹೇಳಿದ್ದಾರೆ.

ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್, ಮೈಸೂರು ಹಾಗೂ ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಸಂಯುಕ್ತಾಶ್ರಯದಲ್ಲಿ ನಗರದ ಕುವೆಂಪು ಕನ್ನಡ ಭವನದಲ್ಲಿ ಆಯೋಜಿಸಲಾಗಿದ್ದ ಮಾಗನೂರು ಬಸಪ್ಪ ಮತ್ತು ಸರ್ವಮಂಗಳಮ್ಮ ಸ್ಮರಣೆ ದತ್ತಿ ಉಪನ್ಯಾಸ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡುತ್ತಿದ್ದರು.

ವಚನಗಳು ಮುಕ್ತ ಛಂದಸ್ಸಿನವು. ಆದರೆ, ಜನಸಾಮಾನ್ಯರಿಗೆ ಅರ್ಥವನ್ನು ಸ್ಪಷ್ಟವಾಗಿ ತಿಳಿಸುವ ಉದ್ದೇಶದಿಂದ ವಚನಗಳಲ್ಲಿ ಛಂದ, ಪ್ರಾಸ, ಉಪಮೇಯ, ರೂಪಕ, ದೃಷ್ಯಾಂತ ಮಂತಾದ ಅಲಂಕಾರಗಳನ್ನು ಬಳಸಲಾಗಿದೆ ಎಂದವರು ಹೇಳಿದರು.

ವಚನ ಸಾಹಿತ್ಯವನ್ನು ಜನರ ಮನಸ್ಸಿಗೆ ತಲುಪಿಸಿ, ಅವರು ವಚನಗಳನ್ನು ಅಳವಡಿಸಿಕೊಂಡು ಶರಣರಾಗುವಂತೆ ಮಾಡಲು ಶರಣ ಸಾಹಿತ್ಯ ಪರಿಷತ್ತು ಶ್ರಮಿಸಬೇಕು ಎಂದವರು ಹೇಳಿದರು.

§ಶರಣ ಗೀತೆ¬ ಸಿ.ಡಿ. ಬಿಡುಗಡೆ ಮಾಡಿ ಮಾತನಾಡಿದ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಗೌರವ ಸಲಹೆಗಾರ ಡಾ. ಗೊ.ರು. ಚನ್ನಬಸಪ್ಪ, ಮಾಗನೂರು ಬಸಪ್ಪನವರು ಶರಣ ಸಾಹಿತ್ಯವನ್ನು ಜೀವನ ಸಿದ್ಧಾಂತ ಎಂದು ಪರಿಗಣಿಸಿದ್ದರು ಎಂದು ಹೇಳಿದರು.

ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರೊ. ಮಲೆಯೂರು ಗುರುಸ್ವಾಮಿ ಮಾತನಾಡಿ, ವಚನ ಸಾಹಿತ್ಯ ಹೇಳುವುದಕ್ಕೂ ನಡವಳಿಕೆಗೂ ಸಂಬಂಧ ಇಲ್ಲದಂತಾಗಿದೆ. ವಚನ ಸಾಹಿತ್ಯ ಮಾತಿನಲ್ಲಿ ಹೇಳುವವರ ಮನೆಗಳಲ್ಲಿ ನಡೆಯುವ ಮದುವೆ ಇತ್ಯಾದಿ ಸಮಾರಂಭಗಳು ಶರಣರ ತತ್ವಗಳಿಗೆ ವಿರುದ್ಧವಾಗಿರುತ್ತವೆ ಎಂದರು.

 

ಉಪನ್ಯಾಸ ನೀಡಿದ ಜಿಲ್ಲಾ ಕ.ಸಾ.ಪ. ಅಧ್ಯಕ್ಷ ಬಿ. ವಾಮದೇವಪ್ಪ, ದಾವಣಗೆರೆ ಜಿಲ್ಲೆಯ ವಿವಿಧ ಕ್ಷೇತ್ರಗಳಿಗೆ ಮಾಗನೂರು ಬಸಪ್ಪ ಹಾಗೂ ಸರ್ವಮಂಗಳಮ್ಮ ದಂಪತಿ ಕೊಡುಗೆ ನೀಡಿದ್ದಾರೆ. ಸತಿ – ಪತಿ ಒಂದಾದ ಭಕ್ತಿ ಹಿತ ಶಿವನಿಗೆ ಎಂಬುದಕ್ಕೆ ಬಸಪ್ಪ – ಸರ್ವಮಂಗಳಮ್ಮ ದಂಪತಿ ಉದಾಹರಣೆ ಎಂದರು.

ದತ್ತಿ ದಾನಿಯೂ ಆಗಿರುವ ಬಸಪ್ಪ ಅವರ ಪುತ್ರ ಎಂ.ಬಿ. ಸಂಗಮೇಶ್ವರ ಗೌಡ್ರು ಮಾತನಾಡಿ, ದತ್ತಿ ಹಣವನ್ನು ಇನ್ನೂ ಒಂದು ಲಕ್ಷ ರೂ. ಹೆಚ್ಚಿಸಲಾಗುವುದು. ಮುಂದಿನ ವರ್ಷ ಮೈಸೂರಿನಲ್ಲಿ ದತ್ತಿ ಉಪನ್ಯಾಸ ಆಯೋಜಿಸಲಾಗು ವುದು. ನಂತರದಲ್ಲಿ ಪ್ರತಿ ಜಿಲ್ಲೆಯಲ್ಲೂ ಕಾರ್ಯಕ್ರಮ ನಡೆಯಲಿದೆ ಎಂದು ಹೇಳಿದರು.

ಸಮಾರಭದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಗೌರವಾಧ್ಯಕ್ಷ ಡಾ. ಎಂ.ಜಿ.ಈಶ್ವರಪ್ಪ ಮಾತನಾಡಿ, ಕಳೆದ 800 ವರ್ಷಗಳಿದಲೂ ಶರಣರ ನಾಡು ಉದಯಿಸುತ್ತದೆ ಎಂದು ಹೇಳುತ್ತಲೇ ಬಂದಿದ್ದೇವೆ. ಆದರೂ, ಇನ್ನೂ ಶರಣರ ಆಶಯದ ನಾಡು ರೂಪುಗೊಂಡಿಲ್ಲ. ಶರಣ ಸಾಹಿತ್ಯವನ್ನು ಜನರಿಗೆ ತಲುಪಿಸಲು ಇನ್ನಷ್ಟು ಶ್ರಮಿಸಬೇಕಿದೆ ಎಂದರು.

ವೇದಿಕೆಯ ಮೇಲೆ ಶರಣ ಸಾಹಿತ್ಯ ಪರಿಷತ್ ನಿಕಟಪೂರ್ವ ಅಧ್ಯಕ್ಷ ಚಿಕ್ಕೋಳ್ ಈಶ್ವರಪ್ಪ, ಜಿಲ್ಲಾ ಕದಳಿ ಮಹಿಳಾ ವೇದಿಕೆ ಅಧ್ಯಕ್ಷೆ ಕುಸುಮಾ ಲೋಕೇಶ್, ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಬಿ. ಪರಮೇಶ್ವರಪ್ಪ ಮತ್ತಿತರರು ಉಪಸ್ಥಿತರಿದ್ದರು.

ಕೆ.ಸಿ. ಲಿಂಗರಾಜು ಸ್ವಾಗತಿಸಿದರೆ, ಡಾ. ಗೀತಾ ಬಸವರಾಜು ನಿರೂಪಿಸಿದರು. ಎನ್.ಎಸ್. ರಾಜು ವಂದಿಸಿದರು.

error: Content is protected !!