ದಾವಣಗೆರೆ, ಮಾ.23 – ನಗರದ ಜಯದೇವ ವೃತ್ತದಿಂದ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದ ವರೆಗಿನ ರಸ್ತೆಯ ಮಧ್ಯಭಾಗದಲ್ಲಿರುವ ಗಿಡಗಳಿಗೆ ಮಹಾನಗರ ಪಾಲಿಕೆಯಿಂದ ಬುಧವಾರ ನೀರುಣಿಸಲಾಗುತ್ತಿತ್ತು.
ಗಿಡಗಳು ಆಳೆತ್ತರಕ್ಕೆ ಬೆಳೆದಿವೆ. ನೀರು ನಿಲ್ಲಲ್ಲು ಒಂದಿಷ್ಟೂ ಜಾಗವಿಲ್ಲ. ಲಾರಿಯೊಂದರ ಮೇಲೆ ನೀರಿನ ಸಿಂಟೆಕ್ಸ್ ಇಟ್ಟುಕೊಂಡು ಗಿಡಗಳ ಬುಡಕ್ಕೆ ನೀರು ಬಿಡುತ್ತಾ ಸಾಗುತ್ತಿದ್ದರು. ಎಲ್ಲಾ ನೀರು ರಸ್ತೆಗೆ ಹರಿದು ಹೋಗುತ್ತಿದ್ದರೂ ಸಹ ಸಿಬ್ಬಂದಿಗಳು ಮಾತ್ರ ತಮ್ಮ ಪಾಡಿಗೆ ತಾವು, ಇದೇ ನಮ್ಮ ಕೆಲಸ ಎಂಬಂತೆ ಸಾಗುತ್ತಿದ್ದುದು `ಗುರು – ಶಿಷ್ಯರು’ ಚಿತ್ರವನ್ನು ನೆನಪಿಸುವಂತಿತ್ತು.
ಗಿಡಗಳ ಬುಡದಲ್ಲಿ ಒಂದಿಷ್ಟು ಗುಂಡಿ ಮಾಡಲು ಸಾಧ್ಯವಿದೆ. ನಂತರ ನೀರು ಬಿಟ್ಟರೆ ಬೇಸಿಗೆ ಬೇಗೆಯಲ್ಲಿ ಗಿಡಗಳಿಗೆ ಒಂದಿಷ್ಟು ನೀರು ಸಿಕ್ಕಂತಾಗುತ್ತದೆ. ಆದರೆ ನಾಮಕಾವಸ್ಥೆಗೆ ನೀರು ಚೆಲ್ಲಿದರೆ ಹೇಗೆ? ಎಂಬುದು ಅಲ್ಲಿನ ವ್ಯಾಪಾರಸ್ಥರ ಪ್ರಶ್ನೆಯಾಗಿತ್ತು. ಇಂದು ನೀರುಣಿಸಿದವರು ಮತ್ತೆ ಯಾವಾಗ ಬರುವರೋ ಗೊತ್ತಿಲ್ಲ. ಅಪರೂಪಕ್ಕೊಮ್ಮೆ ನೀರು ಹಾಕುವಾಗಲಾದರೂ ಜವಾಬ್ದಾರಿಯಿಂದ ವರ್ತಿಸಲಿ. ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನ ಹರಿಸಲಿ ಎಂದು ಹದಡಿ ರಸ್ತೆಯ ವ್ಯಾಪಾರಿಗಳು ಒತ್ತಾಯಿಸಿದ್ದಾರೆ.