ಕೊನೆ ಭಾಗಕ್ಕೆ ತಲುಪದ ಭದ್ರಾ ನೀರು ಕಾಡಾ ಅಧ್ಯಕ್ಷರಿಂದ ಖುದ್ದು ಪರಿಶೀಲನೆ

ಮಲೇಬೆನ್ನೂರು, ಮಾ,23- ಭದ್ರಾ ಅಚ್ಚುಕಟ್ಟಿನ ಕೊನೆ ಭಾಗಕ್ಕೆ ನೀರು ಸರಿಯಾಗಿ ಪೂರೈಕೆ ಆಗದ ಕಾರಣ, ಭತ್ತದ ಗದ್ದೆ ಬಿರುಕು ಬಿಟ್ಟಿರುವ ಹಿನ್ನೆಲೆಯಲ್ಲಿ ಮಂಗಳವಾರ ಭದ್ರಾ ಕಾಡಾ ಅಧ್ಯಕ್ಷೆ ಪವಿತ್ರ ರಾಮಯ್ಯ  ಸ್ಥಳಕ್ಕೆ ಖುದ್ದು ಭೇಟಿ ನೀಡಿ ಪರಿಶೀಲಿಸಿದರು, ಇದಕ್ಕೂ ಮುನ್ನ ಅವರು ಕೊಮಾರನಹಳ್ಳಿ  ಬಳಿಯ ಭದ್ರಾ ಕಾಲುವೆ ಗೇಜ್ ಪರಿಶೀಲನೆ  ಮಾಡಿದಾಗ ನೀರಿನ ವ್ಯತ್ಯಯ ಕಂಡು ಬಂದಿತು. ಇದನ್ನು ಸೂಕ್ತ ರೀತಿಯಲ್ಲಿ ನಿರ್ವಹಿಸುವಂತೆ  ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ಬೇಸಿಗೆ ಹಂಗಾಮಿನಲ್ಲಿ ಕೊನೆ ಭಾಗದ ನೀರಿನ ಸಮಸ್ಯೆ ಕುರಿತು ಎಇಇ ಸಂತೋಷ್ ವಿವರಿಸಿದರು. ರಾತ್ರಿ ವೇಳೆ ಗೇಜ್ ಕುಸಿತದ ಕಾರಣ ನೀರಿನ ಹರಿವು ಕಡಿಮೆ ಆಗುತ್ತದೆ, ಬೇಸಿಗೆ ವೇಳೆ ನೀರಿನ ಬೇಡಿಕೆ ಕೂಡ ಹೆಚ್ಚಾಗಿದೆ. 11 ಎಫ್, 16, 17ನೇ ಭದ್ರಾ ಉಪ ಕಾಲು ವೆಗಳ ರೈತರಾದ ನಾರಾಯಣಪ್ಪ, ನಾಗರಾಜಪ್ಪ, ದೊಡ್ಡಬಸಪ್ಪ ಭತ್ತ, ಮೆಕ್ಕೆಜೋಳ, ತೋಟದ ಬೆಳೆ ಒಣಗುತ್ತಿವೆ, ಒಮ್ಮೆ ನೀರು ಹರಿಸುವುದು ಕಷ್ಟ ಎಂದರು.

ದೇವರಬೆಳಕೆರೆ ಪಿಕಪ್ ಡ್ಯಾಮ್‌ನಲ್ಲಿ ನಿರ್ಮಿಸಿರುವ ಕ್ರಸ್ಟ್ ಗೇಟ್ ನಿಂದ ಆಗುತ್ತಿರುವ ತೊಂದರೆ, ನಾಲೆಯಲ್ಲಿ ನೀರು ಹರಿಯದಿರುವುದು, ಅಣೆಕಟ್ಟೆಯಲ್ಲಿ ಜೋಂಡು ಸಂಗ್ರಹವಾಗಿರುವ ಕುರಿತು ಮುಖಂಡ ನಾಗೇಂದ್ರಪ್ಪ ಗಮನ ಸೆಳೆದರು ಹಾಗೂ ಸ್ಥಳೀಯ ರೈತರು ಸಾಥ್ ನೀಡಿದರು.

ನೀರಿನ ನಿರ್ವಹಣೆ ಹಾಗೂ ಗೇಜ್ ಕುಸಿತವಾಗದಂತೆ ಕ್ರಮ ತೆಗೆದುಕೊಳ್ಳುವ ಭರವಸೆಯನ್ನು ಕಾಡಾ ಅಧ್ಯಕ್ಷರು ರೈತರಿಗೆ ನೀಡಿದರು.

ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಿಗೆ ದೂರವಾಣಿ ಕರೆ ಮಾಡಿದ ಪವಿತ್ರ, ನೀರಿನ ನಿರ್ವಹಣೆ ಕುರಿತು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ  ನಿರ್ದೇಶಕರು,  ಇದರ ಮಾಹಿತಿ ಯನ್ನು  ಶಿವಮೊಗ್ಗ ನೀರಾವರಿ ನಿಗಮದ ಮುಖ್ಯ ಇಂಜಿ ನಿಯರ್ ಮೂಲಕ ಕಡತ ಮಂಡಿಸುವಂತೆ ಸೂಚಿಸಿದರು.

ಭಾನುವಳ್ಳಿ, ಕಾಮಲಾಪುರ, ಸಿರಿಗೆರೆ ಭಾಗಕ್ಕೆ ಭೇಟಿ ನೀಡಲಾಯಿತು. ರೈತರ ಸಮಸ್ಯೆಗಳ ಬಗ್ಗೆ ಖುದ್ದು ಸ್ಥಳ ಪರಿಶೀಲನೆ ಮಾಡಿದಾಗ ಅಲ್ಲಿನ ನೀರಿನ ನಿರ್ವಹಣೆಯಲ್ಲಿ ವ್ಯತ್ಯಯವಾಗಿರುವುದಕ್ಕೆ ಆಕ್ಷೇಪಿಸಿದ ಕಾಡಾ ಅಧ್ಯಕ್ಷರು ಸೂಕ್ತ ಕ್ರಮ ಕೈಗೊಳ್ಳುವಂತೆ ಸ್ಥಳದಲ್ಲಿದ್ದ ನೀರಾವರಿ ಇಲಾಖೆಯ ಇಂಜಿನಿಯರ್‌ಗಳಿಗೆ ತಾಕೀತು ಮಾಡಿದರು.

ರೈತರನ್ನು ಭೇಟಿ ಮಾಡುವ ಕುರಿತು ಮುಂಚಿತವಾಗಿ ನೀರಾವರಿ ನಿಗಮದ ಎಇಇ ಅವರಿಗೆ ತಿಳಿಸಿದ್ದರೂ, ಕೆಲಸದ ನಿಮಿತ್ತ ಧಾರವಾಡಕ್ಕೆ ಹೋಗಿದ್ದಾರೆ ಎಂದು ಕಾಡಾ ಅಧ್ಯಕ್ಷರು  ಬೇಸರ ವ್ಯಕ್ತಪಡಿಸಿದ ಘಟನೆಯೂ ನಡೆಯಿತು.

error: Content is protected !!