ದಾವಣಗೆರೆ, ಮಾ.23- ಜಾತ್ರೆಯ ಬಾಡೂಟದ ತ್ಯಾಜ್ಯಗಳ ರಾಶಿ ಹಾಗೂ ದುರ್ನಾತವು ಮುಜುಗರ ಮತ್ತು ಅಸಭ್ಯತೆಗೆ ಹಿಡಿದ ಕೈಗನ್ನಡಿಯಾಗಿದೆ.
ನಗರದ ಲೋಕಿಕೆರೆ ರಸ್ತೆಯಲ್ಲಿ ಟಿವಿ ಸ್ಟೇಷನ್ ಕೆರೆಗೆ ಹೋಗುವ ಮಾರ್ಗದಲ್ಲಿರುವ ನಂಬರ್ 1 ಕೇಂದ್ರದ ಎದುರು ಬಾಡೂಟದ ತ್ಯಾಜ್ಯಗಳು, ಕಸದ ರಾಶಿ ವಿಲೇವಾರಿ ಕಾಣದೇ ರಸ್ತೆ ಮಗ್ಗುಲ್ಲಲೇ ಬಿದ್ದು ಅಸ್ವಚ್ಚತೆ ಕಾಣದೇ ಅಸಭ್ಯತೆಯನ್ನು ಪ್ರದರ್ಶಿಸುವಂತಿದೆ.
ನಗರ ದೇವತೆ ದುರ್ಗಾಂಬಿಕಾ ದೇವಿ ಜಾತ್ರೆ ಮುಕ್ತಾಯವಾಗಿ ಒಂದು ವಾರವಾದರೂ ಊಟದ ಎಲೆ, ತಟ್ಟೆ ಮುಂತಾದ ತ್ಯಾಜ್ಯ ವಸ್ತುಗಳನ್ನು ರಸ್ತೆ ಪಕ್ಕದಲ್ಲಿ ಸುರಿದಿದ್ದು, ಗಬ್ಬು ನಾರುವಂತಾಗಿದೆ. ಅಲ್ಲಿ ಸಾಗುವ ಜನರು ಮೂಗು ಹಿಡಿದು ಹೋಗುವಂತಾಗಿದೆ. ಈವರೆಗೂ ಪಾಲಿಕೆಯಿಂದ ತೆರವುಗೊಂಡಿಲ್ಲ. ಈ ನಿರ್ಲಕ್ಷ್ಯಕ್ಕೆ ನಾಗರೀಕರು ಆಕ್ಷೇಪಿಸಿದ್ದಾರೆ. ಅಲ್ಲದೇ ಕಸವನ್ನು ಚೆಲ್ಲಿ ಅನಾಗರೀಕತೆ ತೋರಿದವರ ಬೇಜವಾಬ್ದಾರಿತನಕ್ಕೆ ಅಸಮಾಧಾನವೂ ವ್ಯಕ್ತವಾಗುತ್ತಿದೆ. ಹೀಗೆ ಕಸದ ರಾಶಿ ವಿಲೇವಾರಿ ಕಾಣದೇ, ಅನಾಗರಿಕತೆಯಿಂದ ದಾವಣಗೆರೆ ನಗರವು ಸ್ಮಾರ್ಟ್ ಸಿಟಿ ಹೆಗ್ಗಳಿಕೆಗೆ ಕಳಂಕ ತರುವುದು ಎಂಬ ಬೇಸರ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗುತ್ತಿದೆ. ಕೂಡಲೇ ನಗರ ಪಾಲಿಕೆ ಈ ತ್ಯಾಜ್ಯ ವಿಲೇವಾರಿಗೆ ಮುಂದಾಗಬೇಕು, ಇಂತಹ ಅನಾಗರಿಕ ವರ್ತನೆಗೆ ಸೂಕ್ತ ಕ್ರಮಕೈಗೊಳ್ಳುವ ಮೂಲಕ ಮುಂದೆ ಇಂತಹದ್ದಕ್ಕೆ ಕಡಿವಾಣ ಹಾಕಬೇಕೆಂಬ ಒತ್ತಾಯದ ಕೂಗು ನಾಗರೀಕ ಮನಸ್ಸುಗಳಿಂದ ಕೇಳಿ ಬರುತ್ತಿದೆ.