ಸೋಮೇಶ್ವರ ವಿದ್ಯಾಲಯದ ಜನ್ಮಭೂಮಿ ಮತ್ತು ಜನ್ಮದಾತರಿಗೊಂದು ನಮನ ಕಾರ್ಯಕ್ರಮದಲ್ಲಿ ಡಿಸಿ ಬೀಳಗಿ
ದಾವಣಗೆರೆ, ಮಾ. 23 – ಪೋಷಕರನ್ನು ಗೌರವಿಸುವ ಮನೋಭಾವ ಹಾಗೂ ಸಚ್ಚಾರಿತ್ರ್ಯದ ನಿರ್ಮಾಣ ಚಿಕ್ಕಂದಿನಿಂದಲೇ ಆಗಬೇಕು. ಆಗ ಮಾತ್ರ ವಯಸ್ಸಾದ ಮೇಲೆ ತಂದೆ – ತಾಯಿಗಳನ್ನು ಮಕ್ಕಳು ತಿರಸ್ಕಾರ ಮಾಡುವುದಿಲ್ಲ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಹೇಳಿದ್ದಾರೆ.
ನಗರದ ಸೋಮೇಶ್ವರ ವಿದ್ಯಾಲಯದ ವತಿಯಿಂದ ಇಂದು ಸಂಜೆ ಆಯೋಜಿಸಲಾಗಿದ್ದ §ಜನ್ಮಭೂಮಿ ಮತ್ತು ಜನ್ಮದಾತರಿಗೊಂದು ನಮನ¬ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಹಿರಿಯ ನಾಗರಿಕರ ಹಿತರಕ್ಷಣಾ ಕಾಯ್ದೆಯ ಡಿಯ ನ್ಯಾಯಾಲಯವನ್ನು ನಾನು ನಿರ್ವಹಿಸು ತ್ತೇನೆ. ಇಲ್ಲಿ ಸುಮಾರು 100 ಪೋಷಕರು ತಮ್ಮ ಮಕ್ಕಳ ವಿರುದ್ಧ ದೂರು ದಾಖಲಿಸಿದ್ದಾರೆ. ಮಕ್ಕಳ ಮೇಲಿನ ನಂಬಿಕೆಯಿಂದ ಆಸ್ತಿ ಅವರ ಹೆಸರಿಗೆ ಮಾಡಿದ್ದೇವೆ. ಆದರೆ, ಅವರು ನಮ್ಮನ್ನು ಕಡೆಗಣಿಸಿ ಹಿಂಸೆ ಮಾಡುತ್ತಿದ್ದಾರೆ. ಅವರಿಂದ ಆಸ್ತಿ ವಾಪಸ್ ಕೊಡಿಸಿ ಎಂದು ಪೋಷಕರು ಕೇಳಿದ್ದಾರೆ ಎಂದು ಬೀಳಗಿ ಹೇಳಿದರು.
ಮುಂದೆ ಈ ರೀತಿಯ ಪ್ರಕರಣಗಳು ನಿಮ್ಮ ಮನೆಯಲ್ಲೂ ಹುಟ್ಟಿಕೊಳ್ಳಬಾರದು ಎಂದಿದ್ದರೆ ಈಗಲೇ ಒಳ್ಳೆಯ ಗುಣಗಳನ್ನು ಮಕ್ಕಳಲ್ಲಿ ಬೆಳೆಸಬೇಕು. ಮಕ್ಕಳೂ ಸಹ ತಮಗೆ ಶಿಕ್ಷಣ ಕೊಡಿಸಿ ಸಮಾಜದಲ್ಲಿ ಉತ್ತಮ ಸ್ಥಾನ ಸಿಗುವಂತೆ ಮಾಡಿದ ತಂದೆ – ತಾಯಿಗಳನ್ನು ತಿರಸ್ಕರಿಸಬಾರದು. ಹಾಗೆ ತಿರಸ್ಕರಿಸಿದವರಿಗೆ ನನ್ನ ಧಿಕ್ಕಾರವಿದೆ ಎಂದು ತಿಳಿಸಿದರು.
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಜೀವನದಲ್ಲಿ ಕ್ರಾಂತಿಕಾರಕ ಬದಲಾವಣೆ ತರುವ ಘಟ್ಟ. ಮಕ್ಕಳ ಭವಿಷ್ಯ ಈ ಹಂತದಲ್ಲಿ ನಿರ್ಧಾರವಾಗು ತ್ತದೆ. ಈ ಹಂತದಲ್ಲಿ ಕಂಡ ಕನಸುಗಳು ಸಾಕಾರವಾಗುತ್ತವೆ. ಹೀಗಾಗಿ ಉತ್ತಮ ಹಾಗೂ ದೊಡ್ಡ ಕನಸು ಕಾಣಬೇಕು. ಮುಂದಿನ ಗುರಿ ಬಗ್ಗೆ ಸ್ಪಷ್ಟತೆ ಇರಬೇಕು, ಆ ಗುರಿ ಕಡೆ ಹೆಜ್ಜೆ ಹಾಕಬೇಕು ಎಂದವರು ಕಿವಿಮಾತು ಹೇಳಿದರು.
ಪರಿಷತ್ ಮಾಜಿ ಸದಸ್ಯ ಎಂ.ಬಿ. ಭಾನುಪ್ರಕಾಶ್ ದಿಕ್ಸೂಚಿ ನುಡಿಗಳನ್ನಾಡಿ, ದೇಶಕ್ಕೆ 1947ರಲ್ಲಿ ಸ್ವಾತಂತ್ರ್ಯ ಬಂತು. ಆದರೆ, ಯಾವಾಗ ಹೋಯಿತು ಎಂಬುದಕ್ಕೆ ನಿರ್ದಿಷ್ಟ ದಿನಾಂಕವಿಲ್ಲ. ದೇಶ ನಮ್ಮತನ, ಪರಂಪರೆ, ಸಂಸ್ಕೃತಿ ಬಿಟ್ಟಾಗ ಸ್ವಾತಂತ್ರ್ಯ ಹೋಗುತ್ತದೆ ಎಂದು ಹೇಳಿದರು.
ದೇಶಕ್ಕೆ ಸ್ವಾತಂತ್ರ್ಯ ದೊರೆತ ನಂತರ ದೇಶಕ್ಕಾಗಿ ಬದುಕಬೇಕು ಎಂಬುದನ್ನು ಕಲಿಸಲಿಲ್ಲ. ನನಗೋಸ್ಕರ ಎಂದು ಕಲಿಸಿದೆವು. ಈ ರೀತಿ ಕಲಿತವರು ದೇಶಕ್ಕೂ ಬದುಕಲಿಲ್ಲ, ತಮಗಾಗೂ ಬದುಕಲಿಲ್ಲ ಎಂದು ತಿಳಿಸಿದರು.
ವಿಧಾನ ಪರಿಷತ್ ಮಾಜಿ ಮುಖ್ಯ ಸಚೇತಕ ಡಾ. ಎ.ಹೆಚ್. ಶಿವಯೋಗಿಸ್ವಾಮಿ ಮಾತನಾಡಿ, ಸಾಧನೆಗಾಗಿ ನಾವು ಮೇಲ್ಪಂಕ್ತಿ ಯನ್ನು ದೂರದಲ್ಲಿ ಹುಡುಕುತ್ತೇವೆ. ಆದರೆ, ಕಷ್ಟದ ಜೀವನದಲ್ಲಿ ಮೇಲೆ ಬಂದು ಉನ್ನತ ಸಾಧನೆ ಮಾಡಿದ ನಮ್ಮ ಮಧ್ಯೆ ಇರುವವರೇ ಮೇಲ್ಪಂಕ್ತಿ ಆಗಬೇಕು ಎಂದು ಕಿವಿಮಾತು ಹೇಳಿದರು.
ಸರ್ ಎಂ.ವಿ. ಕಾಲೇಜಿನ ಸಂಸ್ಥಾಪಕ ಎಸ್.ಜೆ. ಶ್ರೀಧರ್, ಎಸ್.ಎಸ್.ಐ.ಎಂ.ಎಸ್. ಮಕ್ಕಳ ವಿಭಾಗದ ಮುಖ್ಯಸ್ಥ ಡಾ. ಎನ್.ಕೆ. ಕಾಳಪ್ಪನವರ್, ಸೋಮೇಶ್ವರ ವಿದ್ಯಾಲಯದ ಅಧ್ಯಕ್ಷ ಹೆಚ್.ಆರ್. ಅಶೋಕ ರೆಡ್ಡಿ, ಸೋಮೇಶ್ವರ ವಿದ್ಯಾಲಯದ ಕಾರ್ಯದರ್ಶಿ ಕೆ.ಎಂ. ಸುರೇಶ್ ಅವರುಗಳು ಸಮಾರಂಭದ ವೇದಿಕೆಯಲ್ಲಿ ಉಪಸ್ಥಿತರಿದ್ದರು.