ದಾವಣಗೆರೆ,ಮಾ.23- ನಗರದ ಬಹುತೇಕ ಎಲ್ಲ ವಿಭಾಗಗಳಲ್ಲಿಯೂ ಕಸದ ರಾಶಿಯೇ ಕಂಡುಬರುತ್ತಿದೆ.
ದುಗ್ಗಮ್ಮನ ಜಾತ್ರೆ ಆಗಿ ವಾರವಾಗುತ್ತಾ ಬಂದರೂ ಹಬ್ಬದ ತ್ಯಾಜ್ಯವನ್ನು ತೆಗೆಯುವಲ್ಲಿ ಮಹಾನಗರ ಪಾಲಿಕೆಯ ಆರೋಗ್ಯ ಇಲಾಖೆ ಗಮನಹರಿಸಿದಂತೆ ಕಂಡುಬರುತ್ತಿಲ್ಲ.
ಹಬ್ಬದ ಕಾರಣ ಕಸ ಒಯ್ಯವ ಮಹಾನಗರ ಪಾಲಿಕೆ ವಾಹನಗಳು ಶನಿವಾರದವರೆಗೂ ಬಹಳಷ್ಟು ಕಡೆಗೆ ಬಂದಿರಲಿಲ್ಲ. ಮಂಗಳವಾರ ಮತ್ತು ಶುಕ್ರವಾರ ಒಣ ಕಸವನ್ನು ಮಾತ್ರ ಸಂಗ್ರಹಿಸುತ್ತವೆ. ಉಳಿದಂತೆ ಹಸಿ ಕಸವನ್ನು ಸಂಗ್ರಹಿಸಲಾಗುತ್ತದೆ.
ಹೀಗಾಗಿ ಹಸಿ-ಒಣ ಕಸವನ್ನು ಮನೆಯಲ್ಲಿ ಇಟ್ಟು ಕೊಳ್ಳುವುದು ಹೇಗೆ? ಅದೂ ಹಬ್ಬದ ಸಂದರ್ಭದಲ್ಲಿ. ಅಂದು ಹಬ್ಬಕ್ಕೆ ಸಾವಿರಾರು ಜನ ಬಂದು ಹೋಗುತ್ತಾರೆ. ನಾಗರಿಕರು ಸಹ ಕಸವನ್ನು ತುಂಬಿದ ಚೀಲಗಳನ್ನು ಎಗ್ಗಿಲ್ಲದೆ ಕಂಡ ಕಂಡ-ಕಡೆಗಳಲ್ಲೆಲ್ಲಾ ಬಿಸಾಕುತ್ತಿರುವುದೇ ಈ ಅವ್ಯವಸ್ಥೆಗೆ ಕಾರಣವೂ ಆಗಿದೆೆ.
ಊಟ ಮಾಡಿದ ಅಡಿಕೆ ತಟ್ಟೆ, ಪ್ಲಾಸ್ಟಿಕ್ ತಟ್ಟೆಗಳು ಮತ್ತು ಕಪ್‌ಗಳು, ಖಾಲಿ ಚೀಲಗಳು, ಹಾಲಿನ ಕವರ್, ಕುಡಿದು ಬಿಸಾಕಿದ ಮದ್ಯದ ಖಾಲಿ ಸೀಸೆಗಳು. ಖಾಲಿ ಇರುವ ಜಾಗಗಳಲ್ಲಿ, ಕಾಂಪೌಂಡ್ ಗೋಡೆ, ಗಿಡ-ಗಂಟೆಗಳ ಮಧ್ಯೆ ದೊಡ್ಡ ಪ್ರಮಾಣದಲ್ಲಿಯೇ ಕಂಡುಬರುತ್ತಿವೆ.
ಹೀಗೆ ಬೇಕಾಬಿಟ್ಟ ಬಿಸಾಕಲಾಗಿರುವ ತಟ್ಟೆ, ಕಪ್ಪು ಪ್ಲಾಸ್ಟಿಕ್ ವಸ್ತುಗಳು ಗಾಳಿಗೆ ಹಾರಾಡುತ್ತಾ ರಸ್ತೆ ತುಂಬೆಲ್ಲ ಹರಡಿದರೆ, ಹಸಿ ಕಸ ಗಬ್ಬು ವಾಸನೆ ಬೀರುತ್ತಿದೆ. ಹಂದಿಗಳೂ ಸಹ ಕಸ ತುಂಬಿದ ಚೀಲಗಳನ್ನು ತಿನ್ನಲು ರಸ್ತೆಗೆ ಎಳೆದಾಡುತ್ತವೆ. ನಾಗರಿಕರು ರಸ್ತೆಯಲ್ಲಿ ಮೂಗು ಮುಚ್ಚಿಕೊಂಡು ಹೋಗುವಂತಹ ಪ್ರಸಂಗ ಬಂದಿದೆ.
ಅಮ್ಮನ ಹಬ್ಬದ ಕಾರಣದಿಂದಾಗಿ ಬಹಳಷ್ಟು ಪೌರ ಕಾರ್ಮಿಕರೂ ರಜೆ ಹಾಕಿರಬಹುದು. ಅದಕ್ಕೆ ಪರ್ಯಾಯ ವ್ಯವಸ್ಥೆಯನ್ನು ಪಾಲಿಕೆ ಮಾಡಿಕೊಳ್ಳಬೇಕು ಎಂಬುದು ಅನೇಕ ಜನರ ವಾದವಾಗಿದೆ.
ದೇವರಾಜ ಅರಸು ಬಡಾವಣೆ, ಫ್ಲೈಓವರ್ ಬಳಿ, ಪಿಸಾಳೆ ಗಿರಿಯಪ್ಪ ಮನೆ ರಸ್ತೆ ಆರಂಭದ, ಹಳಿ ಪಕ್ಕದ ಪಾರ್ಕ್ ಜಾಗದಲ್ಲಿ ದೆೊಡ್ಡದಾದ ಹಂದಿಯೊಂದು ಸತ್ತು ಬಿದ್ದಿದ್ದು, ಅದರ ವಾಸನೆಯಿಂದ ಜನ ಅಲ್ಲಿ ಅಡ್ಡಾಡದಂತಾಗಿದೆ. ಇಂತಹ ಅನೇಕ ಅನೈರ್ಮಲ್ಯ ವಾದ, ಆರೋಗ್ಯಕ್ಕೆ ಹಾನಿ ಉಂಟುಮಾಡುವ ತ್ಯಾಜ್ಯ ತೆರವುಗೊಳಿಸುವಂತೆ ನಾಗರಿಕರು ಮಹಾನಗರ ಪಾಲಿಕೆಯನ್ನು ಒತ್ತಾಯಿಸಿದ್ದಾರೆ.