ಬುದ್ಧಿವಂತಿಕೆ, ಕರುಣೆ, ಕೌಶಲ್ಯಗಳನ್ನು ರೂಢಿಸಿಕೊಳ್ಳಿ

ವಿದ್ಯಾರ್ಥಿಗಳಿಗೆ ಡಾ. ಎಂ.ಜಿ. ಈಶ್ವರಪ್ಪ ಕರೆ

ದಾವಣಗೆರೆ, ಜ.11 – ಕೇವಲ ಪಠ್ಯದ ಅಧ್ಯಯನದಿಂದ ಶಿಕ್ಷಣದಲ್ಲಿ ಪೂರ್ಣ ಯಶಸ್ಸು ಸಿಗುವುದಿಲ್ಲ. ಓದಿನ ಜೊತೆಗೆ ಬುದ್ಧಿವಂತಿಕೆ, ಕರುಣೆ ಹಾಗೂ ಕೌಶಲ್ಯಗಳನ್ನೂ ರೂಢಿಸಿಕೊಳ್ಳಬೇಕು ಎಂದು ಜನಪದ ತಜ್ಞ ಡಾ.ಎಂ.ಜಿ. ಈಶ್ವರಪ್ಪ ತಿಳಿಸಿದ್ದಾರೆ.

ಸ್ಥಳೀಯ ವಿದ್ಯಾನಗರ ಉದ್ಯಾನವನದ ಕಾವ್ಯ ಮಂಟಪದಲ್ಲಿ ಗ್ರಂಥಸರಸ್ವತಿ ಪ್ರತಿಭಾರಂಗದ ಆಶ್ರಯದಲ್ಲಿ ಇಂದು ಆಯೋಜಿಸಲಾಗಿದ್ದ ಕನ್ನಡ ನುಡಿಜಾಣ ಪ್ರತಿಭಾ ಪುರಸ್ಕಾರ ಪ್ರದಾನ, ಶತಮಾನದ ಕನ್ನಡ ಕಾವ್ಯ ವಾಚನ ನಿತ್ಯೋತ್ಸವ ಹಾಗೂ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ವಿಜೇತರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಸನ್ಮಾನಿತರಾಗಿ ಅವರು ಮಾತನಾಡಿದರು.

ಸಾರ್ವತ್ರಿಕ ಶಿಕ್ಷಣದ ಕಾರಣದಿಂದಾಗಿ ಈಗ ಎಲ್ಲರೂ ಕಲಿತವರಾಗಿದ್ದೇವೆ. ಆದರೆ, ಜನಪದರಿಗೆ ಸಿಗುತ್ತಿದ್ದ ಜೀವನಾನುಭವ ಸಿಗುತ್ತಿಲ್ಲ. ಮಹಾತ್ಮ ಗಾಂಧೀಜಿ ಅವರು ಹೇಳಿರುವ ಹಾಗೆ ಬುದ್ಧಿ, ಕರುಣೆ ಹಾಗೂ ಕೌಶಲ್ಯಗಳನ್ನು ಒಳಗೊಂಡ ಶಿಕ್ಷಣ ನಮಗೆ ಸಿಗುತ್ತಿಲ್ಲ ಎಂದು ವಿಷಾದಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಆಶುಕವಿ ಯುಗಧರ್ಮ ರಾಮಣ್ಣ, ಇಂದು ಕೇವಲ ವಿದ್ಯಾವಂತರನ್ನು ಕಾಣುತ್ತಿದ್ದೇವೆ. ವಿದ್ಯಾವಂತರ ಜೊತೆಗೆ ಬುದ್ಧಿವಂತ, ಬಲವಂತ ಹಾಗೂ ಛಲವಂತರೂ ಆಗಬೇಕು. ಲೌಕಿಕದ ಜೊತೆಗೆ ಅಲೌಕಿಕ ಹಾಗೂ ಲೋಕಾನುಭವವನ್ನೂ ಹೊಂದಬೇಕು ಎಂದು ತಿಳಿಸಿದರು.

ಅಕ್ಷರದಿಂದ ಸಾಧನೆ ಹಾಗೂ ಸಾಕ್ಷಾತ್ಕಾರ ಎರಡೂ ಸಾಧ್ಯವಿದೆ. ಅಜ್ಞಾನದಿಂದ ಬ್ರಹ್ಮಜ್ಞಾನದ ಕಡೆಗೆ ಸಾಗಬೇಕಿದೆ ಎಂದ ಅವರು, ವಿದ್ಯಾರ್ಥಿಗಳು ವ್ಯಕ್ತಿತ್ವ ಬೆಳೆಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಅಭಿವೃದ್ಧಿ ಉಪ ನಿರ್ದೇಶಕ ಹೆಚ್.ಕೆ. ಲಿಂಗರಾಜು ಮಾತನಾಡಿ, ವಿದ್ಯಾರ್ಥಿಗಳು ಸಾಧನೆಯ ಕನಸು ಕಾಣುವ ಸಂಕಲ್ಪ ಮಾಡಬೇಕು. ಯಶಸ್ಸು ಎಂದರೆ ಒಂದು ಹಂತಕ್ಕೆ ಸಾಧನೆ ಮಾಡಿ ನಿಲ್ಲುವುದಲ್ಲ. ನಿರಂತರವಾಗಿ ಸಾಧಿಸುತ್ತಿರುವುದೇ ಯಶಸ್ಸು ಎಂದರು.

ಚಿಕ್ಕಮಗಳೂರಿನ ಬಸವ ಮಂದಿರದ ಶ್ರೀ ಡಾ. ಬಸವ ಮರುಳಸಿದ್ದ ಸ್ವಾಮೀಜಿ ಸಮಾರಂಭದ ಸಾನಿಧ್ಯ ವಹಿಸಿ ಮಾತನಾಡಿ, ವಿದ್ಯೆ ಜೊತೆ ಬುದ್ಧಿ ಇದ್ದರೆ ಹೃದಯ ವಿಶಾಲವಾಗುತ್ತದೆ. ಯಾವುದೇ ವಿದ್ಯಾರ್ಥಿಯೂ ಕೀಳರಿಮೆ ಬೆಳೆಸಿಕೊಳ್ಳುವ ಅಗತ್ಯ ಇಲ್ಲ. ಬದುಕಿನಲ್ಲಿ ಸಾಧಿಸುವ ವಿಶ್ವಾಸ ಇದ್ದರೆ ಸೋಲೆಂದೂ ಎದುರಾಗುವುದಿಲ್ಲ ಎಂದರು.

ಗ್ರಂಥ ಸರಸ್ವತಿ ಪ್ರತಿಭಾರಂಗದ ಅಧ್ಯಕ್ಷ ಆರ್. ಶಿವಕುಮಾರ ಸ್ವಾಮಿ ಕುರ್ಕಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.

ಈ ಸಂದರ್ಭದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುಗಧರ್ಮ ರಾಮಣ್ಣ ಹಾಗೂ ಡಾ. ಎಂ. ಜಿ.ಈಶ್ವರಪ್ಪ ಅವರಿಗೆ ಸನ್ಮಾನಿಸಲಾಯಿತು. ಎಸ್.ಎಸ್.ಎಲ್.ಸಿ. ಹಾಗೂ ಪಿಯುಸಿಯ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಕನ್ನಡ ನುಡಿ ಜಾಣ ಪ್ರತಿಭಾ ಪುರಸ್ಕಾರ ಪ್ರದಾನ ಮಾಡಲಾಯಿತು.

error: Content is protected !!