ದಾವಣಗೆರೆ, ಜ.10- ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದಲ್ಲಿ ಇದೇ ದಿನಾಂಕ 14 ಮತ್ತು 15ರಂದು ಹರ ಜಾತ್ರೋತ್ಸವ ನಡೆಯಲಿದೆ.
ಹರ ಜಾತ್ರೆಯು ಕೋವಿಡ್ ಹಿನ್ನೆಲೆಯಲ್ಲಿ ವರ್ಚ್ಯುಯಲ್ನಲ್ಲಿ ನಡೆಸಲು ತೀರ್ಮಾನಿಸಲಾಗಿತ್ತು. ಆದರೆ, ಈಗ ಪರಿಸ್ಥಿತಿ ಸ್ವಲ್ಪ ಮಟ್ಟಿಗೆ ಸುಧಾರಣೆ ಹೊಂದಿರುವ ಹಿನ್ನೆಲೆಯಲ್ಲಿ ವರ್ಚ್ಯುಯಲ್ನ ಮತ್ತು ವೇದಿಕೆ ಕಾರ್ಯಕ್ರಮ ಎರಡೂ ವ್ಯವಸ್ಥೆಯಲ್ಲಿ ನಡೆಯಲಿದೆ ಎಂದು ಹರಿಹರ ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠದ ಪ್ರಧಾನ ಧರ್ಮದರ್ಶಿ ಬಿ.ಸಿ. ಉಮಾಪತಿ, ಹರ ಜಾತ್ರಾ ಸಮಿತಿ ಅಧ್ಯಕ್ಷ ಬಿ. ಲೋಕೇಶ್ ಅವರುಗಳು ಇಂದಿಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಜಾತ್ರೆಗೆ ಜರ್ಮನಿ ತಂತ್ರಜ್ಞಾನದಿಂದ ವೇದಿಕೆ ರೂಪಿಸಲ್ಪಡುವುದು. 80×60 ಅಡಿಯಲ್ಲಿ ವೇದಿಕೆ ನಿರ್ಮಿಸಲಿದ್ದು, ಸಾಮಾಜಿಕ ಅಂತರದಡಿ 20ರಿಂದ 25 ಸಾವಿರ ಜನರು ಕುಳಿತುಕೊಳ್ಳಲು ಆಸನ ವ್ಯವಸ್ಥೆ ಮಾಡಲಾಗಿದೆ. ವೀರಶೈವ ಲಿಂಗಾಯತ ಪಂಚಮಸಾಲಿ ಶ್ರೀಕ್ಷೇತ್ರದ ನಾಲ್ಕು ಕಿ.ಮೀ. ವ್ಯಾಪ್ತಿಯಲ್ಲಿ ವರ್ಚ್ಯುಯಲ್ನಿಂದ ಕಾರ್ಯಕ್ರಮವನ್ನು ವೀಕ್ಷಿಸಲು ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಆಪ್ ಮೂಲಕ ಮೊಬೈಲ್ನಲ್ಲೂ ವೀಕ್ಷಿಸಬಹುದಾಗಿದೆ ಎಂದರು.
ದಿನಾಂಕ 14ರ ಬೆಳಗ್ಗೆ 11.30ಕ್ಕೆ ತುಮಕೂರು ಸಿದ್ಧಗಂಗಾ ಮಠದ ಶ್ರೀ ಸಿದ್ಧಲಿಂಗ ಮಹಾಸ್ವಾಮೀಜಿ ಹರದ್ವಾರ ಉದ್ಘಾಟಿಸುವರು. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸಂಕ್ರಾಂತಿ ಸಂಭ್ರಮ ಉದ್ಘಾಟಿಸುವರು. ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಸ್ವಾವಲಂಬಿ ಸಮಾವೇಶ ಉದ್ಘಾಟಿಸುವರು. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ, ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ, ಸಚಿವರುಗಳಾದ ಕೆ.ಎಸ್. ಈಶ್ವರಪ್ಪ, ರಮೇಶ ಜಾರಕಿಹೊಳಿ, ಆನಂದ್ ಸಿಂಗ್, ಶಶಿಕಲಾ ಜೊಲ್ಲೆ, ಶಾಸಕರುಗಳಾದ ಎಂ.ಪಿ. ರೇಣುಕಾಚಾರ್ಯ, ಮಾಡಾಳ್ ವಿರೂಪಾಕ್ಷಪ್ಪ, ಕರುಣಾಕರರೆಡ್ಡಿ, ಎಸ್.ಎ. ರವೀಂದ್ರನಾಥ್, ಎಸ್.ವಿ. ರಾಮಚಂದ್ರಪ್ಪ, ಪ್ರೊ. ಲಿಂಗಣ್ಣ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಲಿದ್ದಾರೆ.
12ಕ್ಕೆ ತುಂಗಭದ್ರಾ ನದಿ ಸ್ವಚ್ಛತಾ ಆಂದೋಲನಾ
ಹರಿಹರ ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಶ್ರೀ ವಚನಾನಂದ ಮಹಾಸ್ವಾಮೀಜಿ ಪ್ರತಿ ಭಾನುವಾರ ತುಂಗಾಭದ್ರಾ ನದಿ ತೀರದಲ್ಲಿ ಸ್ವಚ್ಛತಾ ಆಂದೋಲನವನ್ನು ನಮ್ಮ ಊರು-ನಮ್ಮ ಹೊಣೆ ಕಾರ್ಯಕ್ರಮದಡಿ ಮಾಡುತ್ತಿದ್ದು, ನಾಡಿದ್ದು ದಿನಾಂಕ 12ರಂದು ಬೆಳಗ್ಗೆ 6 ಗಂಟೆಯಿಂದ ಹರಿಹರದ ಶ್ರೀ ರಾಘವೇಂದ್ರ ಮಠದ ಹತ್ತಿರ ತುಂಗಭದ್ರಾ ನದಿ ತೀರದಲ್ಲಿ ಸ್ವಚ್ಛತಾ ಆಂದೋಲವಿದೆ.
-ಬಿ.ಸಿ. ಉಮಾಪತಿ
ಸಮುದಾಯಕ್ಕೆ ಒಬಿಸಿಗೆ ಪ್ರಮುಖ ಒತ್ತಾಯ
ವೀರಶೈವ ಲಿಂಗಾಯತ ಪಂಚಮಸಾಲಿ ಸಮುದಾಯಗಳನ್ನು ಕೇಂದ್ರ ಸರ್ಕಾರ ಒಬಿಸಿ ಮೀಸಲಾತಿಗೆ ಸೇರ್ಪಡೆ ಮಾಡಬೇಕು ಎನ್ನುವುದು ವೀರಶೈವ ಲಿಂಗಾಯತ ಪಂಚಮಸಾಲಿಗಳ ಪ್ರಮುಖ ಒತ್ತಾಯವಾಗಿದೆ ಎಂದು ಮುಖಂಡ ಬಿ. ಲೋಕೇಶ್ ತಿಳಿಸಿದ್ದಾರೆ.
ಸಮುದಾಯಕ್ಕೆ 2ಎ ಮೀಸಲಾತಿಗಾಗಿ ಹಾಗೂ ಒಬಿಸಿಗೆ ಸೇರ್ಪಡೆಗಾಗಿ ಕೂಡಲಸಂಗಮ ಶ್ರೀಗಳ ಹೋರಾಟಕ್ಕೆ ನಮ್ಮಗಳ ಅಭ್ಯಂತರವಿಲ್ಲ. ಅವರು ಒಂದು ರೀತಿಯಾಗಿ ಹೋರಾಟ ಮಾಡುತ್ತಿದ್ದು, ನಾವು ಕಾನೂನಾತ್ಮಕ ಹೋರಾಟ ನಡೆಸುವುದು ನಮ್ಮಗಳ ನಿಲುವು. ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿಬೇಕು. ಅದಕ್ಕಿಂತ ಮುಖ್ಯವಾಗಿ ಒಬಿಸಿ ಪಟ್ಟಿಗೆ ಸೇರಿಸಬೇಕೆಂಬ ಪ್ರಮುಖ ಒತ್ತಾಯವಾಗಿ ಈಗಾಗಲೇ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸಮಾಜದ ಯುವ ಘಟಕ ಮನವಿ ಮಾಡಿಕೊಂಡಿದೆ ಎಂದರು.
ಅಂದು ಮಧ್ಯಾಹ್ನ 3ಕ್ಕೆ ಭೂ ತಪಸ್ವಿ ಸಮಾವೇಶದಲ್ಲಿ ರೈತರ ಅಭಿವೃದ್ಧಿ ವಿಚಾರವಾಗಿ ಚರ್ಚೆ ನಡೆಯಲಿದೆ. ಇಳಕಲ್ನ ಚಿತ್ತರಗಿ ವಿಜಯ ಮಹಾಂತೇಶ್ವರ ಸಂಸ್ಥಾನ ಮಠದ ಶ್ರೀ ಗುರುಮಹಾಂತ ಶಿವಯೋಗಿ, ಹಾವೇರಿ ಹುಕ್ಕೇರಿ ಮಠದ ಶ್ರೀ ಸದಾಶಿವ ಸ್ವಾಮೀಜಿ ಸಾನ್ನಿಧ್ಯದಲ್ಲಿ ವೀರಶೈವ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಡಾ. ಶಾಮನೂರು ಶಿವಶಂಕರಪ್ಪ ಸಮಾವೇಶ ಉದ್ಘಾಟಿಸುವರು. ಸಚಿವರುಗಳಾದ ವಿ. ಸೋಮಣ್ಣ, ಜಗದೀಶ್ ಶೆಟ್ಟರ್, ಬಸವರಾಜ್ ಬೊಮ್ಮಾಯಿ, ಸಿ.ಸಿ. ಪಾಟೀಲ್, ಬಿ.ಸಿ. ಪಾಟೀಲ್, ಡಾ. ಕೆ. ಸುಧಾಕರ್, ಸಂಸದ ಜಿ.ಎಂ. ಸಿದ್ದೇಶ್ವರ, ಶಾಸಕರುಗಳಾದ ಬಸವನಗೌಡ ಪಾಟೀಲ್ ಯತ್ನಾಳ್, ಅರವಿಂದ ಬೆಲ್ಲದ ಮತ್ತಿತರರು ಆಗಮಿಸಲಿದ್ದಾರೆ. ಸಂಜೆ 6ಕ್ಕೆ ಅರ್ಜುನ್ ಇಟಗಿ ರಸಮಂಜರಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ದಿನಾಂಕ 15ರ ಬೆಳಗ್ಗೆ 11.30ಕ್ಕೆ ಯುವರತ್ನ ಸಮಾವೇಶ ನಡೆಯಲಿದ್ದು, ವಿಜಯಪುರ ಸ್ಪರ್ಶ ಫೌಂಡೇಷನ್ ಅಧ್ಯಕ್ಷೆ ಸಂಯುಕ್ತಾ ಪಾಟೀಲ್ ಉದ್ಘಾಟಿಸುವರು. ನಟ ಪುನಿತ್ ರಾಜಕುಮಾರ್, ಬಿಜೆಪಿ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ, ಸಿ.ಪಿ. ಯೋಗೇಶ್ವರ ಮತ್ತಿತರರು ಭಾಗವಹಿಸಲಿದ್ದಾರೆ. ಮಧ್ಯಾಹ್ನ 3 ಗಂಟೆಗೆ ಪಂಚಮಸಾಲಿ ಜಗದ್ಗುರು ಶ್ರೀ ವಚನಾನಂದ ಮಹಾಸ್ವಾಮೀಜಿಯವರ ತೃತೀಯ ಪೀಠಾರೋಹಣ ಕಾರ್ಯಕ್ರಮಕ್ಕೆ ನಡೆಯಲಿದೆ. ಹುಬ್ಬಳ್ಳಿಯ ಮೂರು ಸಾವಿರ ಮಠ ಮಹಾಸಂಸ್ಥಾನದ ಶ್ರೀ ಡಾ. ಗುರುಸಿದ್ಧ ರಾಜಯೋಗೀಂದ್ರ ಮಹಾಸ್ವಾಮೀಜಿ, ಹಗರಿಬೊಮ್ಮನಹಳ್ಳಿ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ಶಾಖಾಮಠದ ಶ್ರೀ ಮಹಾಂತ ಶಿವಾಚಾರ್ಯ ಸ್ವಾಮೀಜಿ ಸಾನಿಧ್ಯ ವಹಿಸುವರು. ಪೀಠಾರೋಹಣ ಕಾರ್ಯಕ್ರಮ ಉದ್ಘಾಟನೆಯನ್ನು ವಿಧಾನಸಭಾ ಉಪಸಭಾಪತಿ ಆನಂದ ಮಾಮನಿ ನೆರವೇರಿಸುವರು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಶಾಸಕರಾದ ಶಿವಾನಂದ ಪಾಟೀಲ್, ಎಸ್. ರಾಮಪ್ಪ ಮತ್ತಿತರರು ಭಾಗವಹಿಸುವರೆಂದರು.
ಪತ್ರಿಕಾಗೋಷ್ಠಿಯಲ್ಲಿ ಸಮಾಜದ ಮುಖಂಡರಾದ ವಾಣಿ ಶಿವಣ್ಣ, ಕೆ. ಶಿವಕುಮಾರ್, ಹೆಚ್.ಎನ್. ನಾಗರಾಜ, ಪತ್ರೆ ರಾಜಣ್ಣ, ಎಂ. ದೊಡ್ಡಪ್ಪ, ಎಸ್.ಸಿ. ಕಾಶೀನಾಥ್ ಇದ್ದರು.