ಜಗಳೂರು, ಮಾ.22- ಅಭಿವೃದ್ಧಿ ಹೆಸರಿನಲ್ಲಿ ಪರಿಸರ, ಮಣ್ಣು, ನೀರು, ಗಾಳಿ ಎಲ್ಲವೂ ಕಲುಷಿತವಾಗುತ್ತಿವೆ. ನೀರನ್ನು ಸಂರಕ್ಷಿಸದಿದ್ದರೆ ಮುಂದಿನ ಪೀಳಿಗೆ ಸರ್ವನಾಶವಾಗುವುದರಲ್ಲಿ ಅನುಮಾನವಿಲ್ಲ, ಈಗಲೇ ಎಚ್ಚರಿಕೆ ವಹಿಸಬೇಕು ಎಂದು ಸಿವಿಲ್ ನ್ಯಾ. ಜಿ. ತಿಮ್ಮಯ್ಯ ತಿಳಿಸಿದರು.
ತಾಲ್ಲೂಕು ಕಾನೂನು ಸೇವಾ ಸಮಿತಿ ಹಾಗೂ ವಕೀಲರ ಸಂಘದ ಸಂಯುಕ್ತ ಆಶ್ರಯದಲ್ಲಿ ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ `ವಿಶ್ವ ಜಲ ದಿನ’ ಮತ್ತು ಕಾನೂನು ಅರಿವು, ನೆರವು ಕಾರ್ಯಕ್ರಮವನ್ನು ಗಿಡಕ್ಕೆ ನೀರು ಹಾಕುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಇಡೀ ಜಗತ್ತೇ ನೀರಿನ ಸಮಸ್ಯೆ ಅನುಭವಿಸುತ್ತಿದೆ. ಗ್ರಹ ಗುಚ್ಛಗಳಲ್ಲಿ ಭೂಮಿ ಸರ್ವ ಶ್ರೇಷ್ಠವಾದುದು. ಕಾರಣ ಮನುಷ್ಯ ಸೇರಿ ಎಲ್ಲಾ ಸಕಲ ಜೀವ ರಾಶಿಗಳಿಗೂ ನೀರು ಅಮೃತ ಬಿಂದು, ಆದರೆ ಪರಿಸರದ ಬಗ್ಗೆ, ಮಣ್ಣಿನ ಬಗ್ಗೆ, ಕಾಡುಗಳ ನಾಶ ಮತ್ತು ನೀರಿನ ಸಂರಕ್ಷಣೆ ಬಗ್ಗೆ ಮನುಷ್ಯ ತಲೆ ಕೆಡಿಸಿಕೊಳ್ಳುತ್ತಿಲ್ಲ. ಮಿತಿ ಮೀರಿದ ಕಳೆ ನಾಶಕದ ಔಷಧಗಳನ್ನು ಬಳಸಿ ಮಣ್ಣಿನ ಸೂಕ್ಷ್ಮ ಜೀವಿಗಳನ್ನು ನಾಶ ಮಾಡುತ್ತಿದ್ದೇವೆ. ಮಣ್ಣಿನ ಫಲವತ್ತತೆ ಮತ್ತು ಸಾರ ನಾಶವಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಕಾರ್ಬನ್ ಡೈ ಆಕ್ಸೈಡ್ ಹೆಚ್ಚಾಗುತ್ತಿದ್ದು, ಹಸಿರು ಮನೆ ಪರಿಣಾಮದಿಂದ ಓಝೋನ್ ಪದರ ನಾಶವಾಗುತ್ತಿದೆ. ಇದರಿಂದ ಮುಕ್ತವಾಗಬೇಕು ಎಂದರೆ ಭೂಮಿಯನ್ನು ತಂಪಾಗಿಡಬೇಕು. ಸಾವಯವ ಕೃಷಿಯನ್ನು ಮಾಡಬೇಕು. ಅರಣ್ಯ ರಕ್ಷಣೆಗೆ ಬದ್ಧವಾಗಿರಬೇಕು. ಇಲ್ಲದಿದ್ದರೆ ಮುಂದೊಂದು ದಿನ ಆಕ್ಸಿಜನ್ ಇಲ್ಲದೇ ಸಾಯುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಪ್ರತಿಯೊಬ್ಬರೂ ಮನೆಯ ಮುಂದೆ ಎರಡೆರಡು ಗಿಡ ನೆಟ್ಟು, ಉಪಯೋಗಿಸುವ ವ್ಯರ್ಥ ನೀರನ್ನು ಅದಕ್ಕೆ ಹಾಕಿದರೆ ಸಾಕು ಅರಣ್ಯ ವೃದ್ಧಿಯಾಗುತ್ತದೆ ಎಂದು ಸಲಹೆ ನೀಡಿದರು.
ಕೆರೆ ಕಟ್ಟೆಗಳನ್ನು ನಿರ್ಮಿಸಿ ಮಳೆ ನೀರು ಸಂಗ್ರಹ ಮತ್ತು ಮಳೆಕೊಯ್ಲು ಹೆಚ್ಚಿಸಬೇಕು. ಜಗಳೂರು ತಾಲ್ಲೂಕಿನ 57 ಕೆರೆಗಳಿಗೆ ನೀರು ಬರುತ್ತಿದ್ದು ಜನರು ಅದನ್ನು ಸದುಪಯೋಗ ಪಡಿಸಿಕೊಳ್ಳಿ, ನೀರನ್ನು ಅನಾವಶ್ಯಕ ವ್ಯರ್ಥ ಮಾಡಬೇಡಿ ಎಂದರು.
ಹಿರಿಯ ವಕೀಲ ಕೆ.ಎನ್.ಪರಮೇಶ್ವರಪ್ಪ ಮಾತನಾಡಿ, ಗ್ರಾಹಕರ ಹಕ್ಕುಗಳ ರಕ್ಷಣೆ ಆಗಬೇಕಾದರೆ ಗ್ರಾಹಕರು ವ್ಯಾಪಾರಸ್ಥರಿಂದ ಖರೀದಿಸಿದ ವಸ್ತುಗಳಿಗೆ ರಶೀದಿ ಪಡೆಯಬೇಕು. ಎಂಆರ್ಪಿ ಬೆಲೆ ನೋಡಿ ಕೊಂಡುಕೊಳ್ಳಬೇಕು. ಕ್ವಾಂಟಿಟಿ, ಕ್ವಾಲಿಟಿಯನ್ನು ಪರಿಶೀಲಿಸಿ ಎಚ್ಚರಿಕೆಯಿಂದ ವಸ್ತುಗಳನ್ನು ಖರೀದಿಸಿ ಎಂದು ಸಲಹೆ ನೀಡಿದರು.
ವಕೀಲ ವೈ. ಹನುಮಂತಪ್ಪ ಮಾತನಾಡಿ, ಪಂಚ ಭೂತಗಳಲ್ಲಿ ನೀರಿಗೆ ಪ್ರಧಾನ ಮಹತ್ವವಿದೆ. ಸಂಘ ಜೀವಿಯಾದ ಮನುಷ್ಯ ಇತಿಹಾಸವನ್ನು ನೆನೆದು ವಾಸ್ತವದಲ್ಲಿ ಬದುಕಿದರೆ ಭವಿಷ್ಯ ಉಜ್ವಲವಾಗುತ್ತದೆ. ನೀರನ್ನು ಉಳಿಸಿದರೆ ಭವಿಷ್ಯ, ಇಲ್ಲವಾದರೆ ಜೀವ ಸಂಕುಲ ನಾಶವಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.
ವಕೀಲರ ಸಂಘದ ಕಾರ್ಯದರ್ಶಿ ಕೆ.ವಿ.ರುದ್ರೇಶ್ ಪ್ರಾಸ್ತಾವಿಕ ಭಾಷಣ ಮಾಡಿದರು, ವಕೀಲರಾದ ಶರಣಪ್ಪ, ಬಸವರಾಜಪ್ಪ, ತಿಪ್ಪೇಸ್ವಾಮಿ ಡಿ.ವಿ., ನಾಗಪ್ಪ ಮುಂತಾದವರು ಉಪಸ್ಥಿತರಿದ್ದರು.