ವಿಶ್ವದಲ್ಲಿಯೇ ತಾಯಿಗೆ ವಿಶಿಷ್ಟವಾದ ಸ್ಥಾನವಿದೆ

ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿ

ಜಗಳೂರು, ಮಾ.21- ವಿಶ್ವದಲ್ಲಿಯೇ ತಾಯಿಗೆ ವಿಶಿಷ್ಟವಾದ ಸ್ಥಾನವಿದ್ದು, ವಿಶ್ವದಲ್ಲಿ ಶಾಂತಿ ನೆಲೆಸಬೇಕಾದರೆ ಮೊದಲು ಮಹಿಳಾ ವಿಮೋಚನೆಯಾಗಬೇಕು ಎಂದು ಸಿರಿಗೆರೆ  ತರಳಬಾಳು ಮಠದ ಡಾ.ಶಿವಮೂರ್ತಿ ಶಿವಾಚಾರ್ಯ ಮಹಾ ಸ್ವಾಮೀಜಿ ಹೇಳಿದರು. 

ಪಟ್ಟಣದ ವೀರಶೈವ ಕಲ್ಯಾಣ ಮಂಟಪದಲ್ಲಿ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ `ಸ್ವರ್ಣಿಮ ಭಾರತದ ನಿರ್ಮಾಣದಲ್ಲಿ ಮಹಿಳೆಯರ ಪಾತ್ರ’ ಕುರಿತಾದ ಕಾರ್ಯಕ್ರಮ ಉದ್ಘಾಟಿಸಿ ಸ್ವಾಮೀಜಿ ಮಾತನಾಡಿದರು.

 ಮಾತೃ ವಾತ್ಸಲ್ಯದ ಯಶೋಧೆ ಶ್ರೀಕೃಷ್ಣನಿಗೆ ದಂಡಿಸುತ್ತಾಳೆ. ದೇವರಿಗೆ ತತ್ಸಮಾನಳು ಎಂದರೆ ಅದು ಹೆಣ್ಣು ಮಾತ್ರ. ಆದ್ದರಿಂದ ಮಹಿಳೆಯರನ್ನು ಗೌರವದಿಂದ ಕಾಣಬೇಕು, ಪ್ರೋತ್ಸಾಹ ನೀಡಬೇಕು ಎಂದರು.

ಬ್ರಹ್ಮಾಕುಮಾರಿ ಸಂಸ್ಥೆಯ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಸಾಂಸಾರಿಕ ಜೀವನಕ್ಕೆ ಅಂಟಿಕೊಳ್ಳದೇ ಸಮಾಜದಲ್ಲಿ ಅಧ್ಯಾತ್ಮಿಕತೆಯ ಮೂಲಕ ಶಾಂತಿ ನೆಲೆಸುವಂತೆ ಮಾಡುತ್ತಿದ್ದಾರೆ ಎಂದು ಜಗದ್ಗುರುಗಳು ಪ್ರಶಂಸಿಸಿದರು.

ರಾಜಯೋಗಿನಿ ಬ್ರಹ್ಮಾಕುಮಾರಿ ವೀಣಾ ಮಾತನಾಡಿ, ತೊಟ್ಟಿಲ ತೂಗುವ ಕೈಗಳು ಜಗತ್ತನ್ನು ಆಳಬಲ್ಲವು. ಇದಕ್ಕೆ ಉದಾಹರಣೆಯಾಗಿ ಝಾನ್ಸಿ ರಾಣಿ ಲಕ್ಷ್ಮಿಭಾಯಿ, ಕಿತ್ತೂರು ರಾಣಿ ಚನ್ನಮ್ಮರಂತೆ ಸಾವಿರಾರು ಮಹಿಳೆಯರಿದ್ದಾರೆ. ಪ್ರತಿಯೊಬ್ಬ ಹೆಣ್ಣಿಗೂ ಧೈರ್ಯ ತುಂಬುವ ಕೆಲಸವಾಗಬೇಕು ಎಂದರು. 

ಮಾಜಿ ಶಾಸಕ ಎಚ್.ಪಿ.ರಾಜೇಶ್ ಮಾತನಾಡಿ, ಪರಮ ಪೂಜ್ಯರ ಆಶೀರ್ವಾದದಿಂದ ಬರದನಾಡು ಭೂತಾಯಿಗೆ ತುಂಗಭದ್ರೆಯರು ಹರಿಯುತ್ತಿರುವುದು ಸಂತಸ ತಂದಿದೆ. ತುಂಗಭದ್ರೆಯರು ಹೆಣ್ಣಾಗಿ ಜಗಳೂರು ತಾಲ್ಲೂಕಿನ ಜನರ ಬವಣೆ ನೀಗಿಸಲು ಬರುತ್ತಿರುವುದು ಸಂತಸ ತಂದಿದೆ ಎಂದರು. 

ಈ ಸಂದರ್ಭದಲ್ಲಿ ರಾಜಯೋಗಿನಿ ಬ್ರಹ್ಮಾಕುಮಾರಿ ಭಾರತಿ, ಶ್ರೀಮತಿ ಪುಷ್ಪ ಲಕ್ಷ್ಮಣ ಸ್ವಾಮಿ, ಫಾದರ್ ವಿಲಿಯಂ ಮಿರಾಂದ, ಶಾಹೀನಾ ಬೇಗಂ, ಸಿಪಿಐ ಮಂಜುನಾಥ್ ಪಂಡಿತ್, ಸಾಹಿತಿ ಬಿ.ಟಿ ಗೀತಾ ಮಂಜು, ಅರವಿಂದ್ ಸೇರಿದಂತೆ ಅನೇಕರು ಮಾತನಾಡಿದರು. 

error: Content is protected !!