ಆಯುರ್ವೇದ ವೈದ್ಯರು ನಿಜವಾದ ವಾರಿಯರ್ಸ್

ದಾವಣಗೆರೆ, ಮಾ. 21- ಆಯುರ್ವೇದ ವೈದ್ಯರು ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಕೋವಿಡ್ ಮಹಾಮಾರಿಯಿಂದ ಲಕ್ಷಾಂತರ ಜನರ ಜೀವ ಉಳಿಸಿದ್ದಾರೆ. ಆಯುರ್ವೇದ ವೈದ್ಯರು ನಿಜವಾದ ಕೊರೊನಾ ವಾರಿಯರ್ಸ್ ಎಂದು ಆಯುರ್ವೇದ ಆಚಾರ್ಯ ಡಾ. ಶಂಕರಗೌಡ ಹೇಳಿದರು.

ಹರಿಹರ ರಸ್ತೆ ಕರೂರಿನ ಬಳಿಯ ಖಾಸಗಿ ಹೋಟೆಲ್‌ನಲ್ಲಿ ಹಮ್ಮಿಕೊಂಡಿದ್ದ ಆಯುರ್ವೇದ ವೈದ್ಯರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.

ಕೊರೊನಾ ವಿರುದ್ಧದ ಸಮರದಲ್ಲಿ ಗೆಲುವು ಸಾಧಿಸುವಲ್ಲಿ ಆಯುರ್ವೇದ ವೈದ್ಯರು ಪ್ರಮುಖ ಪಾತ್ರ ವಹಿಸಿದ್ದಾರೆ. ಆ ಸಂದರ್ಭದಲ್ಲಿ ಪ್ರತಿ ಮನೆಯಲ್ಲೂ ಆಯುರ್ವೇದ ಪದ್ಧತಿ ಯನ್ನು ಅನುಸರಿಸಲಾಗಿತ್ತು ಎಂದು ತಿಳಿಸಿದರು.

ಭಾರತೀಯ ಆಯುರ್ವೇದ ವೈದ್ಯರನ್ನು ಗೌರವಿಸುವ ಮೂಲಕ ವೈದ್ಯರ ನೈತಿಕ ಸ್ಥೈರ್ಯವನ್ನು ಹೆಚ್ಚಿಸುವ ಕೆಲಸವನ್ನು ಮಾಡಲಾಗಿದೆ ಎಂದು ಹೇಳಿದರು.

ಆಯುರ್ವೇದಾಚಾರ್ಯ ಡಾ.ಜ್ಞಾನೇಶ್ವರ ಮಾತನಾಡಿ, ರಾಜಸ್ಥಾನದ ಡಿಸ್ಪೆನ್ಸರಿ ಮುಂಬೈ ಆಯುರ್ವೇದ ವೈದ್ಯರಿಗೆ ಸನ್ಮಾನ ಮಾಡುವ ಮೂಲಕ ಹೊಸ ಚೈತನ್ಯವನ್ನು ನೀಡಿದೆ ಎಂದರು.

ಆಯುರ್ವೇದಾಚಾರ್ಯ ಡಾ. ಉಮೇಶ್ ಹಿರೇಮಠ ಮಾತನಾಡಿ, ಕೋವಿಡ್-19 ರ ಸಂದರ್ಭದಲ್ಲಿ ಆಯುರ್ವೇದ ವೈದ್ಯರು ನಿಸ್ವಾರ್ಥ ಸೇವೆ ಸಲ್ಲಿಸುವ ಮೂಲಕ ರೋಗಿಗಳ ಜೀವ ಉಳಿಸಿದ್ದಾರೆ. ಇದು ಶಾಶ್ವತವಾಗಿ ನೆನಪಿನಲ್ಲಿ ಉಳಿಯುತ್ತದೆ ಎಂದು ತಿಳಿಸಿದರು.

ಡಾ. ಮಂಜುನಾಥ್, ಮಲ್ಲಿಕಾರ್ಜುನ್ ಹಳ್ಳೂರು, ಗುರುರಾಜ ಶಾಸ್ತ್ರಿ, ಡಾ. ದರ್ಶನ್ ಬಾಬು ಮಾತನಾಡಿ, ಕೊರೊನಾ ಸಂದರ್ಭದಲ್ಲಿ ಆಯುರ್ವೇದ ಔಷಧಿಗಳು ಪರಿಣಾಮಕಾರಿ ಎಂಬುದನ್ನು ಸಾಬೀತು ಪಡಿಸಿವೆ ಎಂದು ಹೇಳಿದರು.

ಜಿಲ್ಲೆಯ ಎಲ್ಲಾ ವೈದ್ಯರಿಗೆ ರಾಜಸ್ಥಾನ ಡಿಸ್ಪೆನ್ಸರಿ ಮುಂಬೈ (ಆರ್‌ಎಪಿಎಲ್ ಗ್ರೂಪ್) ಕುಟುಂಬದ ಪರವಾಗಿ ಹಾರ, ಶಾಲು, ಸಫಾ ಚಿಹ್ನೆಗಳನ್ನು ನೀಡಿ ಗೌರವಿಸಲಾಯಿತು.

ಇದೇ ವೇಳೆ ಆರ್‌ಎಪಿಎಲ್ ಸಮೂಹದ ಅಧ್ಯಕ್ಷ ಡಾ. ಎಸ್.ಡಿ. ಚೌಪ್ದಾರ್ ಅವರಿಗೆ ಎರಡು ನಿಮಿಷಗಳ ಮೌನಾಚರಣೆ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಕಾರ್ಯಕ್ರಮ ಪ್ರಭಾರಿ ಜಾಹಿದ್ ಅಹಮದ್, ಕರೀಂಖಾನ್, ಸೈಯದ್ ಯೂಸೂಫ್, ಸಂಯೋಜಕಿ ಶ್ರುತಿ ಶೆಟ್ಟಿ ಮತ್ತು ಇತರರು ಉಪಸ್ಥಿತರಿದ್ದರು.

error: Content is protected !!