ದಾವಣಗೆರೆ, ಮಾ. 21 – ದೇಶದಲ್ಲಿ ವೈದ್ಯಕೀಯ ಶಿಕ್ಷಣ ವೆಚ್ಚ ಹೆಚ್ಚಾಗಿರುವ ಕಾರಣ ವಿದ್ಯಾರ್ಥಿಗಳು ವಿದೇಶಕ್ಕೆ ಹೋಗುತ್ತಿದ್ದಾರೆ. ಇದನ್ನು ತಡೆಯಲು ವೈದ್ಯಕೀಯ ಶಿಕ್ಷಣ ವೆಚ್ಚ ಕಡಿಮೆ ಮಾಡಲು ಸರ್ಕಾರ ಕ್ರಮ ತೆಗೆದು ಕೊಳ್ಳಲು ಮುಂದಾಗಲಿದೆ ಎಂದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಉಕ್ರೇನ್ ಸಮರದಲ್ಲಿ ಸಾವನ್ನಪ್ಪಿದ ರಾಣೇಬೆನ್ನೂರು ತಾಲ್ಲೂಕು ಚಳಗೇರಿಯ ನವೀನ್ ಶೇಖರಗೌಡ ಅವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ತೆರಳುವ ವೇಳೆ ನಗರದ ಜಿ.ಎ.ಐ.ಟಿ. ಹೆಲಿಪ್ಯಾಡ್ನಲ್ಲಿ ತಮ್ಮನ್ನು ಭೇಟಿಯಾದ ಪತ್ರಕರ್ತರೊಂದಿಗೆ ಅವರು ಮಾತನಾಡುತ್ತಿದ್ದರು.
ದೇಶದಲ್ಲಿ ಸರ್ಕಾರಿ ವೈದ್ಯಕೀಯ ಸೀಟುಗಳ ವೆಚ್ಚ ಕಡಿಮೆ ಇದೆ. ಆದರೆ, ಪಿ.ಯು.ಸಿ.ಯಲ್ಲಿ ಶೇ.90-95ರಷ್ಟು ಅಂಕ ಪಡೆದವರಿಗೂ, ನೀಟ್ ಮೂಲಕ ಸರ್ಕಾರಿ ಸೀಟು ಸಿಗುತ್ತಿಲ್ಲ. ಮ್ಯಾನೇಜ್ಮೆಂಟ್ ಹಾಗೂ ಎನ್ಆರ್ಐ ಸೀಟುಗಳ ವೆಚ್ಚ ಹೆಚ್ಚಾಗಿರುವ ಕಾರಣ ವಿದ್ಯಾರ್ಥಿಗಳು ವಿದೇಶಕ್ಕೆ ಹೋಗುತ್ತಿದ್ದಾರೆ ಎಂದು ಬೊಮ್ಮಾಯಿ ಹೇಳಿದರು.
ಮೋದಿ ವರ್ಚಸ್ಸು ಹಾಗೂ ಭಗೀರಥ ಯತ್ನದಿಂದ ವಿದ್ಯಾರ್ಥಿಗಳು ವಾಪಸ್
ಉಕ್ರೇನ್ ಸಮರ ಭೂಮಿಯಿಂದ ವಿದ್ಯಾರ್ಥಿಗಳನ್ನು ಕರೆ ತಂದ ಬಗ್ಗೆ ಸಿಎಂ ವಿವರಣೆ
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ವರ್ಚಸ್ಸು ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಹೊಂದಿರುವ ಒಳ್ಳೆಯ ಸಂಬಂಧ ಗಳಿಂದಾಗಿ ಭಗೀರಥ ಯತ್ನ ನಡೆಸಿದ್ದರ ಪರಿಣಾಮ 19 ಸಾವಿರ ವಿದ್ಯಾರ್ಥಿಗಳನ್ನು ವಾಪಸ್ ಕರೆ ತರಲು ಸಾಧ್ಯವಾಗಿದೆ. ಇದೊಂದು ಭಗೀರಥ ಯತ್ನ. ಅಮೆರಿಕದಂತಹ ದೇಶ ಸಹ ತನ್ನ ನಾಗರಿಕರನ್ನು ಅಲ್ಲೇ ಬಿಟ್ಟಿದೆ ಎಂದು ಬೊಮ್ಮಾಯಿ ಹೇಳಿದರು.
ಅಂತರರಾಷ್ಟ್ರೀಯ ಮಟ್ಟದಲ್ಲಿ ಮೋದಿ ಹೊಂದಿರುವ ವರ್ಚಸ್ಸು ಹಾಗೂ ಬೇರೆ ದೇಶಗಳ ಜೊತೆ ಹೊಂದಿರುವ ಉತ್ತಮ ಸಂಬಂಧಗಳ ಕಾರಣದಿಂದ ಉಕ್ರೇನ್ ಸುತ್ತಲಿನ ದೇಶಗಳ ರಾಯಭಾರಿ ಮಾರ್ಗಗಳ ಮೂಲಕ ವಿದ್ಯಾರ್ಥಿಗಳನ್ನು ವಾಪಸ್ ಕರೆ ತರಲು ಸಾಧ್ಯವಾಯಿತು. ಉಕ್ರೇನ್ನಲ್ಲಿ ಭಾರತೀಯ ವಿದ್ಯಾರ್ಥಿಗಳಿಗೆ ಅತಿ ಹೆಚ್ಚು ಪ್ರಾತಿನಿಧ್ಯ ಕೊಟ್ಟು, ಭಾರತದ ಧ್ವಜ ಹಿಡಿದು ಬಂದವರನ್ನು ಗಡಿ ದಾಟಿಸಲಾಗಿದೆ ಎಂದವರು ತಿಳಿಸಿದರು.
ಆಪರೇಷನ್ ಗಂಗಾ ಕಾರ್ಯಾಚರಣೆಗೆ ಮುಂಚೆ ಕರ್ನಾಟಕದ 61 ವಿದ್ಯಾರ್ಥಿಗಳು ಬಂದಿದ್ದರು. ಕಾರ್ಯಾಚರಣೆ ನಂತರ 572 ವಿದ್ಯಾರ್ಥಿಗಳು ವಾಪಸ್ ಬಂದಿದ್ದಾರೆ ಎಂದವರು ತಿಳಿಸಿದರು.
ವೈದ್ಯಕೀಯ ಶಿಕ್ಷಣ ಈಗ ಎನ್.ಎಂ.ಸಿ. (ರಾಷ್ಟ್ರೀಯ ವೈದ್ಯಕೀಯ ಮಂಡಳಿ) ನಿಯಂತ್ರಣದಲ್ಲಿದೆ. ಈ ಹಿನ್ನೆಲೆಯಲ್ಲಿ ಎನ್.ಎಂ.ಸಿ. ಜೊತೆ ಚರ್ಚಿಸುವ ಮೂಲಕ ವೈದ್ಯಕೀಯ ಸೀಟುಗಳನ್ನು ಮೂರು ವರ್ಗಗಳಾಗಿ ವಿಂಗಡಿಸಿ ವೆಚ್ಚ ಕಡಿಮೆ ಮಾಡಲು ಪರಿಶೀಲಿಸಲಾಗುತ್ತಿದೆ ಎಂದವರು ಹೇಳಿದರು.
ವಿಶೇಷವಾಗಿ ಉಕ್ರೇನ್ ಯುದ್ಧ ಆದ ನಂತರ ವೈದ್ಯಕೀಯ ಶಿಕ್ಷಣದ ಕುರಿತು ಪುನರ್ಚಿಂತನೆ ನಡೆದಿದೆ ಎಂದ ಅವರು, ಉಕ್ರೇನ್ನಿಂದ ಮರಳಿದ ವೈದ್ಯಕೀಯ ವಿದ್ಯಾರ್ಥಿಗಳ ಶಿಕ್ಷಣ ಮುಂದುವರೆಸುವ ಬಗ್ಗೆ ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸುತ್ತಿದೆ. ಎಲ್ಲಾ ರಾಜ್ಯಗಳ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಸಂಬಂಧಿಸಿದ ವಿಷಯ ಇದಾಗಿರುವುದರಿಂದ ಕೇಂದ್ರ ನಿರ್ಧಾರ ತೆಗೆದುಕೊಳ್ಳಬೇಕು ಎಂದವರು ಇಂಗಿತ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಸಂಸದ ಜಿ.ಎಂ.ಸಿದ್ದೇಶ್ವರ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಯೂ ಆಗಿರುವ ಶಾಸಕ ಎಂ.ಪಿ.ರೇಣುಕಾಚಾರ್ಯ, ಮೇಯರ್ ಜಯಮ್ಮ ಗೋಪಿನಾಯ್ಕ, ಪ್ರಭಾರ ಐಜಿಪಿ ತ್ಯಾಗರಾಜನ್, ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚನ್ನಪ್ಪ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್, ಮಾಜಿ ಮೇಯರ್ ಎಸ್.ಟಿ.ವೀರೇಶ್ ಮತ್ತಿತರರು ಉಪಸ್ಥಿತರಿದ್ದರು.