ಏನಮ್ಮ, ಓಟ್ ಹಾಕಕ್ಕೆ ರೆಡಿನಾ….

ಕ್ಷೇತ್ರಗಳಿಗೆ ಅಧಿಕಾರಿಗಳು ಭೇಟಿ ನೀಡಿ ಮತಪಟ್ಟಿ ಪರಿಷ್ಕರಣೆ ಕಾರ್ಯಕ್ರಮ ಪರಿಶೀಲನೆ

ದಾವಣಗೆರೆ, ಜ. 8 – ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯಕ್ರಮ ಸಂಬಂಧ ಮತದಾರರ ಪಟ್ಟಿ ವೀಕ್ಷಕರು ಹಾಗೂ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಎಸ್.ಆರ್. ಉಮಾಶಂಕರ್ ದಾವಣಗೆರೆ ನಗರದ ಭಾಷಾನಗರದಲ್ಲಿ ಮನೆಯೊಂದಕ್ಕೆ ಭೇಟಿ ನೀಡಿ ಖುದ್ದು ಪರಿಶೀಲನೆ ನಡೆಸಿದರು. 

ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೊಳಿಸಲು 18 ವರ್ಷ ಪೂರ್ಣಗೊಂಡ ಯುವತಿ ಸಲ್ಲಿಸಿದ್ದ ಅರ್ಜಿ ಹಾಗೂ ದಾಖಲೆಗಳನ್ನು ಪರಿಶೀಲಿಸಿದ ಅವರು, ‘ಏನಮ್ಮ, ಓಟ್ ಹಾಕಕ್ಕೆ ರೆಡಿನಾ…’ ಎಂದು ಕಿರು ನಗುವಿನೊಂದಿಗೆ ಪ್ರಶ್ನಿಸಿದರು. ಇದಕ್ಕೆ ಮುಗುಳ್ನಗೆಯೊಂದಿಗೆ ಪ್ರತಿಕ್ರಿಯಿಸಿದ ಆ ಯುವತಿ ‘ರೆಡಿಯಾಗಿದೀನಿ ಸರ್, ಚುನಾವಣೆ ಬರಲಿ, ಖಂಡಿತಾ ಓಟು ಹಾಕುತ್ತೇನೆ ಎಂದಳು.

ಹಿರಿಯ ಅಧಿಕಾರಿಗಳು ತಮ್ಮ ಮನೆಗೆ ಖುದ್ದು ಭೇಟಿ ನೀಡಿ, ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೊಳಿಸಲು ಬಿಎಲ್‍ಒಗೆ ಸಲ್ಲಿಸಿದ್ದ ಅರ್ಜಿ ಹಾಗೂ ದಾಖಲೆಗಳನ್ನು ಪರಿಶೀಲಿಸಿದ ಪರಿಗೆ ಆಶ್ಚರ್ಯಚಕಿತರಾದಂತೆ ಕಂಡುಬಂದ
ಆ ಮನೆಯ ಕುಟುಂಬಸ್ಥರು ಸಂತಸ ವ್ಯಕ್ತಪಡಿಸಿದರು.  

ಚುನಾವಣೆ ಸಂದರ್ಭದಲ್ಲಿ ಮತ ಚಲಾಯಿಸಲು ಯಾವುದೇ ಆಸೆ, ಆಮಿಷಗಳಿಗೆ ಒಳಗಾಗದೆ, ನೈತಿಕವಾಗಿ ಮತದಾನ ಮಾಡಬೇಕು, ಯಾರದೇ ಒತ್ತಡ ಅಥವಾ ಭೀತಿಗೆ ಒಳಗಾಗದೆ, ಒಳ್ಳೆಯ ಅಭ್ಯರ್ಥಿಗೆ ತಮ್ಮ ಮತ ಚಲಾಯಿಸಬೇಕು, ಅಲ್ಲದೆ ತಪ್ಪದೇ ಮತದಾನ ಮಾಡಬೇಕು ಎಂದು ಮತದಾರರ ಪಟ್ಟಿ ವೀಕ್ಷಕರಾದ ಎಸ್.ಆರ್. ಉಮಾಶಂಕರ್ ಇದೇ ಸಂದರ್ಭದಲ್ಲಿ ಜಾಗೃತಿ ಮೂಡಿಸಿದರು.

‘ಯಾರಿಗೆ ಓಟ್ ಹಾಕ್ತೀರಿ’ ಎಂದು ಹಾಸ್ಯಮಿಶ್ರಿತ ಧ್ವನಿಯಲ್ಲಿ ಪ್ರಶ್ನಿಸಿದ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರಿಗೆ ಉತ್ತರ ನೀಡಿದ ಕುಟುಂಬದ ಮತದಾರರು, ಚುನಾವಣೆ ಸಂದರ್ಭದಲ್ಲಿ ನಮಗೆ ಯಾರು ಸೂಕ್ತ ಹಾಗೂ ಒಳ್ಳೆಯ ಅಭ್ಯರ್ಥಿ ಎಂದು ಅನ್ನಿಸುತ್ತದೆಯೋ, ಅವರಿಗೇ ಮತ ನೀಡುತ್ತೇವೆ.  ಯಾವುದೇ ಆಸೆ, ಆಮಿಷಗಳಿಗೆ ತಮ್ಮ ಮತ ಮಾರಿಕೊಳ್ಳುವುದಿಲ್ಲ ಎಂದು ಭರವಸೆಯ ಮಾತುಗಳನ್ನಾಡಿದರು.  

ಮತಗಟ್ಟೆ ವಿಭಾಗದಲ್ಲಿ ಹೊಸದಾಗಿ ಹೆಸರು ಸೇರ್ಪಡೆಗೊಳಿಸಲು, ತೆಗೆದುಹಾಕಲು, ತಿದ್ದುಪಡಿ ಹಾಗೂ ಸ್ಥಳಾಂತರಕ್ಕೆ ಸಲ್ಲಿಸಲಾದ ಅರ್ಜಿಗಳ ಕುರಿತು ಸಂಬಂಧಪಟ್ಟ ಬಿಎಲ್‍ಒ ಅವರಿಂದ ಜಿಲ್ಲಾಧಿಕಾರಿಗಳು ಇದೇ ಸಂದರ್ಭದಲ್ಲಿ ಮಾಹಿತಿ ಪಡೆದುಕೊಂಡರು.

ಉಪವಿಭಾಗಾಧಿಕಾರಿ ಮಮತಾ ಹೊಸಗೌಡರ್ ಸೇರಿದಂತೆ ವಿವಿಧ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

error: Content is protected !!