ಕೊರೊನಾ ವಾರ್‌ನಿಂದ ವ್ಯಾಕ್ಸಿನ್‌ ವಾರ್‌ ಕಡೆಗೆ

ಜಿಲ್ಲೆಯ ಆರು ಕೇಂದ್ರಗಳಲ್ಲಿ ನಡೆದ ಲಸಿಕೆಯ ತಾಲೀಮು

ದಾವಣಗೆರೆ, ಜ. 8 – 2020 ವರ್ಷವಿಡೀ ಕೊರೊನಾ ವಿರುದ್ಧ ಸಮರ ಸಾರಿದ ನಂತರ, 2021ರಲ್ಲಿ ಕೊರೊನಾ ಲಸಿಕೆ ನೀಡುವ ಬೃಹತ್ ಸಿದ್ಧತೆ ಆರಂಭವಾಗಿದೆ. ಅದರ ಅಂಗವಾಗಿ ಜಿಲ್ಲೆಯ ಆರು ಕಡೆಗಳಲ್ಲಿ ಕೊರೊನಾ ಲಸಿಕೆ ನೀಡುವ ತಾಲೀಮು ಆರಂಭವಾಗಿದೆ.

ನಗರದ ಭಾಷಾನಗರದಲ್ಲಿರುವ ಆರೋಗ್ಯ ಕೇಂದ್ರದಲ್ಲಿ ಶುಕ್ರವಾರ ಲಸಿಕೆಯ ತಾಲೀಮಿಗೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎಸ್.ಆರ್. ಉಮಾಶಂಕರ್ ಚಾಲನೆ ನೀಡಿದರು.

ಈ ಕೇಂದ್ರದ ಕಿರಿಯ ಮಹಿಳಾ ಆರೋಗ್ಯ ಸಹಾಯಕಿ ಎ. ದೀಪ ಅವರು ತಾಲೀಮಿನಲ್ಲಿ ಮೊದಲಿಗರಾಗಿದ್ದರು. ಆಧಾರ್ ಕಾರ್ಡ್ ನೀಡಿ ಹೆಸರು ನೋಂದಾಯಿಸಿದ ನಂತರ, ಅವರ ವಿಳಾಸವನ್ನು ದೃಢೀಕರಿಸಿಕೊಳ್ಳಲಾಯಿತು. ಕೊವಿನ್ ತಂತ್ರಾಂಶದ ಮೂಲಕ ದೀಪ ಮಾಹಿತಿಯನ್ನು ಅಪ್‌ಲೋಡ್‌ ಮಾಡಲಾಯಿತು. ಅಣಕು ಲಸಿಕೆ ನೀಡಿದ ನಂತರ ಅರ್ಧ ಗಂಟೆ ವಿರಮಿಸಲಾಯಿತು.

ಈ ಸಂದರ್ಭದಲ್ಲಿ ಆರ್.ಸಿ.ಹೆಚ್. ಅಧಿಕಾರಿ ಡಾ. ಮೀನಾಕ್ಷಿ ಅವರು ಲಸಿಕೆ ತಾಲೀಮಿನ ಕುರಿತು ಮಾಹಿತಿ ನೀಡಿ, ಲಸಿಕೆ ನೀಡಿದಾಗ ವ್ಯತಿರಿಕ್ತ ಪರಿಣಾಮವಾದರೆ ಆ ಬಗ್ಗೆ ನಿಗಾ ವಹಿಸಲು 30 ನಿಮಿಷಗಳ ಕಾಲ ನಿಗಾ ಕೋಣೆಯಲ್ಲಿ ಇರಬೇಕಾಗುತ್ತದೆ ಎಂದರು.

ಅಡ್ವರ್ಸ್ ಇವೆಂಟ್ ಫಾಲೋಯಿಂಗ್ ಇಮ್ಯುನೈಸೇಷನ್ (ಎಇಎಫ್ಐ) ಕಿಟ್ ಅನ್ನು ಸಿದ್ಧವಾಗಿಟ್ಟುಕೊಳ್ಳಲಾಗಿರುತ್ತದೆ. ವ್ಯತಿರಿಕ್ತ ಪರಿಣಾಮ ಎದುರಾದಾಗ ಚಿಗಟೇರಿ ಆಸ್ಪತ್ರೆಗೆ ಕರೆದೊಯ್ಯಲು ಆಂಬ್ಯುಲೆನ್ಸ್ ಸಿದ್ಧವಾಗಿರಿಸಿಕೊಳ್ಳಲಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ಮಾತನಾಡಿದ ಉಮಾಶಂಕರ್, ಲಸಿಕೆ ಪಡೆದವರು 28 ದಿನಗಳ ನಂತರ ಎರಡನೇ ಸುತ್ತಿನ ಲಸಿಕೆಗೆ ಬರಬೇಕಾಗುತ್ತದೆ. ಈ ಅವಧಿಯಲ್ಲಿ ಸಮಸ್ಯೆಯಾದರೆ ಸಂಪರ್ಕಿಸಬೇಕಾದವರ ವಿವರ ಹಾಗೂ ತೆಗೆದುಕೊಳ್ಳಬೇಕಾದ ಕ್ರಮಗಳ ಕುರಿತು ಕರಪತ್ರದಲ್ಲಿ ವಿವರ ನೀಡಿ ಎಂದು ಸೂಚನೆ ನೀಡಿದರು.

ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಮಾತನಾಡಿ, ಈ ಹಿಂದೆ ಕೋವಿಡ್ ವಾರ್ ರೂಂನಲ್ಲಿದ್ದ ಸಿಬ್ಬಂದಿಯನ್ನೇ ವ್ಯಾಕ್ಸಿನ್ ವಾರ್ ರೂಮ್‌ಗೆ ಬಳಸಿಕೊಳ್ಳಲು ಸಿದ್ಧತೆಗಳು ನಡೆದಿವೆ ಎಂದು ಹೇಳಿದರು.

ಪತ್ರಕರ್ತರೊಂದಿಗೆ ಮಾತನಾಡಿದ ಉಮಾಶಂಕರ್‌, ಜಿಲ್ಲೆಯ ಆರೂ ಕೇಂದ್ರಗಳಲ್ಲಿ ಗೊಂದಲ ಇಲ್ಲದೆ ಲಸಿಕೆಯ ತಾಲೀಮು ನಡೆದಿದೆ. ಪ್ರತಿದಿನ 100 ಜನರು ಬಂದರೂ ಲಸಿಕೆ ನೀಡಲು ಯಾವುದೇ ತೊಂದರೆಯಾಗದ ವ್ಯವಸ್ಥೆ ಇದೆ ಎಂದರು.

ಪ್ರತಿದಿನ ಲಕ್ಷಾಂತರ ಜನರಿಗೆ ಲಸಿಕೆ ನೀಡುವಾಗ ಮೊಬೈಲ್‌ಗೆ ಒ.ಟಿ.ಪಿ. ಪಡೆಯುವುದು ತೊಂದರೆಯಾಗುತ್ತದೆ. ಈ ಕಾರಣದಿಂದಾಗಿ ಒ.ಟಿ.ಪಿ. ರಹಿತವಾಗಿಯೂ ಲಸಿಕೆ ನೀಡಲು ಅವಕಾಶ ಕಲ್ಪಿಸಲಾಗಿದೆ ಎಂದರು.

ಜಿಲ್ಲೆಯ 17,500ರಷ್ಟು ಆರೋಗ್ಯ ಕಾರ್ಯಕರ್ತರಿಗೆ ಮೊದಲ ಹಂತದಲ್ಲಿ ಲಸಿಕೆ ನೀಡಲಾಗುತ್ತದೆ. ಅವರೆಲ್ಲರ ಮಾಹಿತಿಯನ್ನು ಮೊದಲೇ ಆನ್‌ಲೈನ್‌ನಲ್ಲಿ ಅಪ್ಡೇಟ್‌ ಮಾಡಲಾಗಿದೆ ಎಂದು ಹೇಳಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ನಾಗರಾಜ್,  ಬಾಷಾನಗರದ ಯುಪಿಹೆಚ್‍ಸಿ ವೈದ್ಯಾಧಿಕಾರಿ ಡಾ. ಮಂಜುಳಾ, ಉಪವಿಭಾಗಾಧಿಕಾರಿ ಮಮತಾ ಹೊಸಗೌಡರ್ ಸೇರಿದಂತೆ ವಿವಿಧ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಜಿಲ್ಲೆಯ ಚಿಗಟೇರಿ ಜಿಲ್ಲಾ ಆಸ್ಪತ್ರೆ ಹಾಗೂ ಎಸ್.ಎಸ್.ಐ.ಎಂ.ಎಸ್ ವೈದ್ಯಕಿಯ ಮಹಾವಿದ್ಯಾಲಯ,  ಹೊನ್ನಾಳಿಯ ಸಾರ್ವಜನಿಕ ಆಸ್ಪತ್ರೆ, ಚನ್ನಗಿರಿ ತಾಲ್ಲೂಕಿನ ಸಂತೇಬೆನ್ನೂರಿನ ಸಮುದಾಯ ಆರೋಗ್ಯ ಕೇಂದ್ರ ಮತ್ತು ಹರಿಹರ ತಾಲ್ಲೂಕಿನ ಕೊಂಡಜ್ಜಿಯ ಪ್ರಾಥಮಿಕ ಆರೋಗ್ಯ ಕೇಂದ್ರ ಗಳಲ್ಲೂ ಲಸಿಕೆಯ ತಾಲೀಮು ನಡೆಸಲಾಯಿತು.

error: Content is protected !!