ಗೃಹಿಣಿ ಸ್ಪರ್ಧೆ ಕಾರ್ಯಕ್ರಮದಲ್ಲಿ ವಿಜಯಪುರದ ಸಾಹಿತಿ ಗಿರಿಜಾ ಮಾಲಿ ಪಾಟೀಲ್
ದಾವಣಗೆರೆ, ಮಾ. 20- ಕುಟುಂಬ ಸಮಾಜದ ಅಡಿಗಲ್ಲು. ಸ್ವಸ್ಥ ಸಮಾಜ ನಿರ್ಮಾಣದಲ್ಲಿ ಗೃಹಿಣಿ ಜವಾಬ್ದಾರಿ ಹೆಚ್ಚಿದೆ. ಕೇವಲ ನಾಲ್ಕು ಗೋಡೆಗಳಿಗೆ ಸೀಮಿತವಾಗಿದ್ದ ಮಹಿಳೆ, ಇಂದು ಕಲಾಕುಂಚದಂತಹ ವೇದಿಕೆಗಳ ಮೂಲಕ ಪ್ರತಿಭೆ ಹೊರ ಸೂಸುತ್ತಿರುವುದು ಹೆಮ್ಮೆಯ ವಿಚಾರ ಎಂದು ವಿಜಯಪುರ ಶ್ರೀ ಸಿದ್ಧೇಶ್ವರ ಸಾಹಿತ್ಯ ವೇದಿಕೆ ಸಂಸ್ಥಾಪಕರೂ, ಯುವ ಸಾಹಿತಿಯೂ ಆಗಿರುವ ಶ್ರೀಮತಿ ಗಿರಿಜಾ ಮಾಲಿ ಪಾಟೀಲ್ ಹೇಳಿದರು.
ನಗರದ ಚನ್ನಗಿರಿ ವಿರೂಪಾಕ್ಷಪ್ಪ ಕಲ್ಯಾಣ ಮಂಟಪದಲ್ಲಿ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ಮಹಿಳಾ ವಿಭಾಗದಿಂದ ವಿಶ್ವ ಮಹಿಳಾ ದಿನಾಚರಣೆ ಹಾಗೂ ಸಂಸ್ಥೆಯ 32 ನೇ ವಾರ್ಷಿಕೋತ್ಸವದ ಅಂಗವಾಗಿ ಇಂದು ಏರ್ಪಡಿಸಿದ್ದ ಗೃಹಿಣಿ ಸ್ಪರ್ಧೆ ವಿಜೇತರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.
ನಾಲ್ಕು ಗೋಡೆಗಳ ಮಧ್ಯೆ ಇದ್ದ ಮಹಿಳೆಯ ರನ್ನು ಸಮಾಜದ ಮುಖ್ಯವಾಹಿನಿಗೆ ತರುವಲ್ಲಿ ಕಲಾಕುಂಚ ಸಂಸ್ಥೆಯ ಕಾರ್ಯ ಯೋಜನೆಗಳೇ ಮಾಡುತ್ತಿರುವ ಕಾರ್ಯ ಶ್ಲ್ಯಾಘನೀಯ ಎಂದರು.
ಸಿದ್ಧಗಂಗಾ ವಿದ್ಯಾಸಂಸ್ಥೆ ಮುಖ್ಯಸ್ಥರಾದ ಶ್ರೀಮತಿ ಜಸ್ಟಿನ್ ಡಿಸೋಜ ಮಾತನಾಡಿ, ಮಹಿಳೆಯರಲ್ಲಿರುವ ಸುಪ್ತ ಪ್ರತಿಭೆಗಳನ್ನು ಹೊರ ತರುವಲ್ಲಿ ಕಲಾಕುಂಚ ಸಂಸ್ಥೆಯ ಶ್ರಮ ಸಾರ್ಥಕವಾದುದು ಎಂದು ಮೆಚ್ಚುಗೆ ವ್ಯಕ್ತಪಡಿಸಿದರಲ್ಲದೇ ಮುಂದಿನ ದಿನಗಳಲ್ಲಿ ಗೃಹಿಣಿಯರ ಸ್ಪರ್ಧೆ ಮಾದರಿಯಲ್ಲಿ ಅಜ್ಜಿಯರ ಸ್ಪರ್ಧೆ ನಡೆಸುವಂತೆ ಸೂಚಿಸಿದರು.
ಗೃಹಿಣಿ ಸ್ಪರ್ಧೆಯಲ್ಲಿ ವಿಜೇತರಾದ ಡಾ. ದೀಪಶ್ರೀ ಪ್ರಮೋದ್ ಗುಜ್ಜರ್ (ಪ್ರಥಮ), ಲೀಲಾ ಸುಭಾಷ್ (ದ್ವಿತೀಯ), ಮಧು ಸಂಕೇತ್ ಮತ್ತು ಉಮಾ ಮಹೇಶ್ವರಿ (ತೃತೀಯ) ಇವರನ್ನು ಸ್ಮರಣಿಕೆ, ಪ್ರಮಾಣ ಪತ್ರ, ಕಿರೀಟ ಹಾಗೂ ಸೀರೆ ನೀಡುವ ಮೂಲಕ ಗೌರವಿಸಲಾಯಿತು.
ಇದೇ ವೇಳೆ ಕಿರಿಯ ವಯಸ್ಸಿನಲ್ಲಿ ಹಿರಿದಾದ ಸಾಧನೆ ಮಾಡಿದ ಪುಟಾಣಿ ನಿಹಾರಿಕಳನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಕಲಾಕುಂಚ ಮಹಿಳಾ ವಿಭಾಗದ ಅಧ್ಯಕ್ಷೆ ಹೇಮಾ ಶಾಂತಪ್ಪ ಪೂಜಾರಿ, ಸಮಾಜ ಸೇವಕಿ ಸಾವಿತ್ರ ರೇವಣಸಿದ್ಧಪ್ಪ ಆನೆ ಕೊಂಡ, ಯುವ ಸಾಹಿತಿ ಮಂಜುಳಾ ಪ್ರಸಾದ್ ಬಂಗೇರ, ಚನ್ನಗಿರಿ ವಿರೂಪಾಕ್ಷಪ್ಪ ಟ್ರಸ್ಟ್ ವಂಶಸ್ಥರಾದ ರಶ್ಮಿ ಭರತ್ ಚನ್ನಗಿರಿ, ಸಂಸ್ಥೆಯ ಗೌರವಾಧ್ಯಕ್ಷೆ ವಾಸಂತಿ ಮಂಜುನಾಥ್, ಜ್ಯೋತಿ ಗಣೇಶ್ ಶೆಣೈ, ಸುನಂದಾದೇವಿ ಜಂಬನಗೌಡ, ಗಿರಿಜಮ್ಮ ನಾಗರಾಜ್, ಶೈಲಾ ವಿನೋದ್ ಮತ್ತಿತರರು ಉಪಸ್ಥಿತರಿದ್ದರು.
ಕಲಾಕುಂಚ ಸಂಸ್ಥೆ ಸಂಸ್ಥಾಪಕ ಸಾಲಿಗ್ರಾಮ ಗಣೇಶ್ ಶೆಣೈ ಕಾರ್ಯಕ್ರಮ ನಿರೂಪಿಸಿದರು.