ನಾಡಿನ ವೀರಶೈವ ಮಠಗಳು ಶ್ರೇಷ್ಠ ಪರಂಪರೆಯ ಪೀಠಗಳು: ಕಾರಜೋಳ

ಹರಿಹರದಲ್ಲಿ ಶ್ರೀಶೈಲ ಸಮುದಾಯ ಭವನಕ್ಕೆ ಚಾಲನೆ ನೀಡಿದ ಸಚಿವ

ಹರಿಹರ, ಜ.7- ನಾಡಿನಲ್ಲಿರುವ ವೀರಶೈವ ಮಠಗಳು ಸರ್ಕಾರದ ಸೌಲಭ್ಯ ಗಳನ್ನು ನಿರೀಕ್ಷೆ ಮಾಡದೆ, ಶೈಕ್ಷಣಿಕ, ಧಾರ್ಮಿಕ ಹಾಗೂ ಸಾಂಸ್ಕೃತಿಕವಾಗಿ ವಂಚಿತರಾದವರಿಗೆ ಸಂಸ್ಕಾರವಂತರನ್ನಾಗಿ ಮಾಡಿ ಅಕ್ಷರ ಮತ್ತು ಅನ್ನ ದಾಸೋಹದೊಂದಿಗೆ ಸಮಾಜದ ಬೆಳವಣಿಗೆಗೆ ಅಪಾರವಾದ ಕೊಡುಗೆ ನೀಡುವ ಮೂಲಕ ಶ್ರೇಷ್ಠ ಪರಂಪರೆಯನ್ನು ಹೊಂದಿರುವ ಪೀಠಗಳಾಗಿವೆ ಎಂದು ಉಪ ಮುಖ್ಯಮಂತ್ರಿ ಮತ್ತು ಲೋಕೋ ಪಯೋಗಿ ಸಚಿವ ಗೋವಿಂದ ಕಾರಜೋಳ ಶ್ಲಾಘಿಸಿದರು.

ನಗರದ ಎಸ್.ಜೆ.ವಿ.ಪಿ. ಕಾಲೇಜು ವತಿಯಿಂದ ಶ್ರೀಶೈಲ ಸಮುದಾಯ ಭವನ, ಅತಿಥಿ ಗೃಹ, ವಾಣಿಜ್ಯ ಸಂಕೀರ್ಣ ಹಾಗೂ ಹೊರಾಂಗಣ ಉದ್ಯಾನವನ ಸಭಾ ಭವನದ ಭೂಮಿ ಪೂಜಾ ಸಮಾರಂಭದಲ್ಲಿ ನಾಮಫಲಕ ಅನಾವರಣ ಮಾಡಿ ಅವರು ಮಾತನಾಡಿದರು.

ಶ್ರೀಶೈಲ ಪೀಠಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ಚಂದ್ರಗುಪ್ತ ಮೌರ್ಯ ಕಾಲದಿಂದಲೂ ಬಂದ  ಭಕ್ತಿಯ ಪರಂಪರೆ ಇಂದಿಗೂ ಮುಂದುವರೆದಿದೆ. ಮಠದ ಭಕ್ತರು ಆಂಧ್ರಪ್ರದೇಶ, ಮಹಾರಾಷ್ಟ್ರ, ಕರ್ನಾಟಕ, ತೆಲಂಗಾಣ ಮುಂತಾದ ಕಡೆಗಳಲ್ಲಿ ಇದ್ದಾರೆ. ಶ್ರೀಶೈಲ ಜಗದ್ಗುರುಗಳು ಪ್ರವಾಹ ಸಮಯದಲ್ಲಿ ಮನೆ ಕಳೆದುಕೊಂಡು ನಿರಾಶ್ರಿತರಾದವರಿಗೆ ಮನೆ ಕಟ್ಟಿಸಿಕೊಡುವ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡು, ಅವಕಾಶ ವಂಚಿತರಿಗೆ ಸಾಮಾಜಿಕ ನ್ಯಾಯವನ್ನು ಕೊಡಿಸುವ ಕಾರ್ಯ ಮಾಡಿದ್ದು ಶ್ಲಾಘನೀಯ ಎಂದರು.

 ನಾಡಿನಲ್ಲಿ 36 ಸಾವಿರ ಮಠಗಳಿವೆ. ಅದರಲ್ಲಿ ಇತ್ತೀಚಿನ ದಿನಗಳಲ್ಲಿ ಉಪಜಾತಿಯ ಮಠಗಳು ಸಹ ಹುಟ್ಟಿಕೊಂಡಿವೆ. 29,400 ಕಂದಾಯ ಗ್ರಾಮಗಳು ಮತ್ತು 58,640 ವಸತಿ ಕೇಂದ್ರಗಳಿವೆ‌. ಆದರೆ ಪ್ರತಿಯೊಂದು ಜನವಸತಿ ಕೇಂದ್ರಗಳು ಒಂದು ಮಠಗಳಲ್ಲಿ ಇವೆ. ನಾಡಿನ ಎಲ್ಲ ಮಠ ಪರಂಪರೆ ಮತ್ತು ಗುರಿ  ಮಾನವ ಕಲ್ಯಾಣವಾಗಿದೆ.  ಎಲ್ಲಾ ವರ್ಗದ ಜನರಿಗೆ ರಕ್ಷಣೆ ನೀಡಿರುವುದು ಭಾರತದ ಸಂಸ್ಕೃತಿಯೆನಿಸಿದೆ ಎಂದು ಮಠಗಳ ಮಹತ್ವ ಸಾರಿದರು.

ಪ್ರಾಚೀನ ಕಾಲದಲ್ಲಿ ಗುರುಕುಲ ಮತ್ತು ಆಶ್ರಮಗಳು ಮನುಷ್ಯನ ಬೇಕು ಬೇಡಗಳ ಕಡೆ ಗಮನ ಹರಿಸುತ್ತಾ ಬಂದು ತದನಂತರದಲ್ಲಿ ಅವುಗಳು ಪರಿವರ್ತನೆ ಆಗಿ ಮಠಗಳಾಗಿವೆ. ಶೂದ್ರರು ಶಿಕ್ಷಣದಿಂದ ವಂಚಿತರಾದ ಕಾಲದಲ್ಲಿ ಅವರಿಗೆ ನಾಡಿನ ಮಠಗಳು ಶಿಕ್ಷಣ ಸಂಸ್ಥೆಗಳನ್ನು ತೆರೆದು ಅಕ್ಷರ ದಾಸೋಹ ಕೈಗೊಂಡವು. ಸರ್ಕಾರ ಅನೇಕ ಸೌಲಭ್ಯಗಳ ಮೂಲಕ ಮಕ್ಕಳಿಗೆ ಶಿಕ್ಷಣ ನೀಡುತ್ತಿದ್ದರೂ ಕೂಡ ಶೇ. 66 ರಷ್ಟು ಮಾತ್ರ ವಿದ್ಯಾವಂತರು ಇದ್ದಾರೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಶ್ರೀಶೈಲ ಅಭಿವೃದ್ಧಿಗೆ 10 ಕೋಟಿ ರೂಪಾಯಿ ಮಂಜೂರು ಮಾಡಿದ್ದು  ಪ್ರಸ್ತುತ 5 ಕೋಟಿ ರೂ. ಮೊತ್ತದ  ಚೆಕ್ ನೀಡಿದ್ದಾರೆ ಎಂದರು.

ಸಂಸದ ಜಿ.ಎಂ. ಸಿದ್ದೇಶ್ವರ  ಮಾತನಾಡಿ, ನಾಡಿನ ಜನರ ಒಳಿತಿಗಾಗಿ ಶ್ರೀಶೈಲ ಪೀಠವು ಅನೇಕ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಾ ಬಂದಿದೆ. ಅದನ್ನು ಉಳಿಸಿಕೊಂಡು, ಬೆಳಸಿಕೊಂಡು ಹೋಗುವಂತಹ ಕಾರ್ಯವನ್ನು ಯುವ ಪೀಳಿಗೆ ಮಾಡಬೇಕಾಗಿದೆ. ಹರಿಹರ ನಗರದಲ್ಲಿ ನಿರ್ಮಾಣವಾಗುತ್ತಿರುವ ಸಮುದಾಯ ಭವನ ನಿರ್ಮಾಣಕ್ಕೆ ನಾನು ಕೂಡ ಎಲ್ಲಾ ರೀತಿಯ ಸಹಾಯ ಮಾಡುವುದಾಗಿ ಹೇಳಿದರು.

ದಾವಣಗೆರೆ ಶಾಸಕ ಶಾಮನೂರು ಶಿವಶಂಕರಪ್ಪ ಮಾತನಾಡಿ ನಾಡಿನ ವೀರಶೈವ ಮಠಗಳು ಬಡವರ ಮತ್ತು ಶೋಷಿತ ವರ್ಗದ ಜನರಿಗೆ ಶಿಕ್ಷಣ ಸಂಸ್ಥೆಗಳನ್ನು ತೆರೆದು ಆ ಮೂಲಕ ಸಮಾಜದ ಅಂಧಕಾರವನ್ನು ಹೋಗಲಾಡಿಸುವ ಕಾರ್ಯವನ್ನು ಮಾಡಿದ್ದಾರೆ. ಇಲ್ಲಿನ ಸಮುದಾಯ ಭವನ ನಿರ್ಮಾಣಕ್ಕೆ ಸರ್ಕಾರದ ವತಿಯಿಂದ ಎಷ್ಟು ಸಾಧ್ಯವೋ ಅಷ್ಟು ಅನುದಾನ ಕೊಡಿಸುವ ಕೆಲಸವನ್ನು ನಾನು ಕೂಡ ಮಾಡುತ್ತೇನೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಶ್ರೀಶೈಲ ಪೀಠದ ಜಗದ್ಗುರು ಶ್ರೀ ಚೆನ್ನಸಿದ್ಧರಾಮ ಪಂಡಿತಾರಾಧ್ಯ ಸ್ವಾಮೀಜಿ, ಕೋಡಿಯಾಲ ಹೊಸಪೇಟೆಯ ಶ್ರೀ  ಬಾಲಯೋಗಿ ಜಗದೀಶ್ವರ ಸ್ವಾಮಿಗಳು ಮಾತನಾಡಿದರು. ಮಾಜಿ ಶಾಸಕ ಬಿ.ಪಿ. ಹರೀಶ್, ದಾವಣಗೆರೆ ಮಹಾಪೌರ ಬಿ.ಜಿ. ಅಜಯ್‌ ಕುಮಾರ್, ಜವಳಿ ವರ್ತಕ ಬಿ.ಸಿ. ಉಮಾಪತಿ, ಉದ್ಯಮಿ ಅಥಣಿ ವೀರಣ್ಣ, ಬಿಜೆಪಿ ಜಿಲ್ಲಾಧ್ಯಕ್ಷ ಎಸ್.ಎಂ. ವೀರೇಶ್ ಹನಗವಾಡಿ, ಸತೀಶ್ ಬೆಂಗಳೂರು, ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ,  ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯಪ್ಪ, ವಿನಾಯಕ ಶಿಕ್ಷಣ ಸಂಸ್ಥೆಯ ಎನ್.ಎ. ಮುರುಗೇಶ್, ತಹಶೀಲ್ದಾರ್‌ ಕೆ.ಬಿ. ರಾಮಚಂದ್ರಪ್ಪ, ಪೌರಾಯುಕ್ತ ಉದಯಕುಮಾರ್, ಡಿ.ಎಂ. ಹಾಲಸ್ವಾಮಿ, ಬಸವರಾಜ್ ಸ್ವಾಮಿ, ಆರ್.ಟಿ. ಪ್ರಶಾಂತ್, ಎನ್.ಹೆಚ್. ಪಾಟೀಲ್ ಇನ್ನಿತರರಿದ್ದರು.  

error: Content is protected !!