ಸಾಮಾನ್ಯ ಕನಿಷ್ಠ ಯೋಜನೆಯೊಂದಿಗೆ ದಲಿತ ಸಂಘಟನೆಗಳು ಒಂದಾಗಿ, ದಲಿತ ಪ್ರಜ್ಞೆ ರೂಪಿಸಬೇಕು
ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಸಮಾವೇಶದಲ್ಲಿ ಸಾಹಿತಿ ಬರಗೂರು ರಾಮಚಂದ್ರಪ್ಪ ಕರೆ
ದಾವಣಗೆರೆ, ಮಾ. 18 – ಪಂಚೇಂದ್ರಿಯ ಗಳಿಂದ ವಂಚಿತವಾದ ಪ್ರಜಾಪ್ರಭುತ್ವದಲ್ಲಿ ನಾವಿದ್ದೇವೆ. ಅಂಬೇಡ್ಕರ್ ಆಶಯದ ಸಾಮಾಜಿಕ ಹಾಗೂ ಆರ್ಥಿಕ ಸ್ವಾತಂತ್ರ್ಯ ಇನ್ನೂ ಸಿಗದ ಈ ಸಂದರ್ಭದಲ್ಲಿ, ದಲಿತ ಸಂಘಟನೆಗಳು ಒಂದಾಗಿ ದಲಿತ ಪ್ರಜ್ಞೆ ಮೂಡಿಸಬೇಕಿದೆ ಎಂದು ಸಾಹಿತಿ ಹಾಗೂ ಪ್ರಗತಿಪರ ಚಿಂತಕ ಬರಗೂರು ರಾಮಚಂದ್ರಪ್ಪ ಕರೆ ನೀಡಿದ್ದಾರೆ.
ಕರ್ನಾಟಕ ದಲಿತ ಸಂಘರ್ಷ ಸಮಿತಿ ಆಶ್ರಯದಲ್ಲಿ ನಗರದ ಶ್ರೀಮತಿ ಪಾರ್ವತಮ್ಮ ಶಾಮನೂರು ಶಿವಶಂಕರಪ್ಪ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿದ್ದ ರಾಜ್ಯ ಮಟ್ಟದ ಪದಾಧಿಕಾರಿ ಗಳು ಮತ್ತು ಕಾರ್ಯಕರ್ತರ ಸಮಾವೇಶ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಈಗಿನ ಪ್ರಜಾಪ್ರಭುತ್ವದ ಪಂಚೇಂದ್ರಿಯಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ. ದಲಿತರನ್ನು ಮುಟ್ಟಿಸಿಕೊಳ್ಳದ ಕ್ರೂರ ಇತಿಹಾಸ ಇದೆ. ಪ್ರಜಾಪ್ರಭುತ್ವದಲ್ಲಿ ಕಿವಿ ಕಿವುಡಾಗಿ, ನಾಲಿಗೆಯೇ ದೊಡ್ಡದಾಗಿದೆ. ಅದರಲ್ಲೂ ನಾಗರ ಹಾವಿನ ವಿಷದಂತಹ ಮಾತುಗಳು ಕೇಳಿ ಬರುತ್ತಿವೆ ಎಂದವರು ವಿಷಾದಿಸಿದರು.
ಕಣ್ಣುಗಳು ದಲಿತರು ಹಾಗೂ ಬಡವರ ಬದುಕನ್ನು ನೋಡುತ್ತಿಲ್ಲ. ಕಣ್ಣುಗಳೀಗ ಕೇವಲ ಚುನಾವಣೆ ಮೇಲಿದೆ. ವೋಟಿಗಾಗಿ ದೇವರು, ಧರ್ಮ, ಜಾತಿ ಹಾಗೂ ಹಣ ಬಳಸಲಾಗುತ್ತಿದೆ ಎಂದು ಬರಗೂರು ಹೇಳಿದರು. ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರು ರಾಜಕೀಯದ ಜೊತೆಗೆ ಸಾಮಾಜಿಕ ಹಾಗೂ ಆರ್ಥಿಕ ಪ್ರಜಾಪ್ರಭುತ್ವ ಬಯಸಿದ್ದರು. ಆರ್ಥಿಕ ಪ್ರಜಾಪ್ರಭುತ್ವವೇ ಸಾಮಾಜಿಕ ಪ್ರಜಾಪ್ರಭುತ್ವದ ತಳಹದಿ. ಆದರೆ, ಆರ್ಥಿಕ – ಸಾಮಾಜಿಕ ಪ್ರಜಾಪ್ರಭುತ್ವ ಇನ್ನೂ ದೊರೆತಿಲ್ಲ ಎಂದವರು ಹೇಳಿದರು.
ಇಂತಹ ಸಂದರ್ಭದಲ್ಲಿ ದಲಿತ ಸಂಘಟನೆಗಳು ಜೊತೆಯಾಗಬೇಕಿದೆ. ಸಾಮಾನ್ಯ ಕನಿಷ್ಠ ಕಾರ್ಯಕ್ರಮದೊಂದಿಗೆ ಹೋರಾಟ ನಡೆಸಬೇಕಿದೆ. ದಲಿತ ನಾಯಕತ್ವಕ್ಕಾಗಿ ಸಂಘಟನೆಗಳು ಜೊತೆಯಾಗಬೇಕು. ಇಲ್ಲದಿದ್ದರೆ ಆತ್ಮವಂಚಕರ ನಡುವೆ ಆತ್ಮಸಾಕ್ಷಿ ಕಳೆದು ಹೋಗುತ್ತದೆ ಎಂದವರು ಎಚ್ಚರಿಸಿದರು.
ಮೈಸೂರಿನ ಉರಿಲಿಂಗ ಪೆದ್ದಿಮಠದ ಶ್ರೀ ಜ್ಞಾನಪ್ರಕಾಶ ಸ್ವಾಮೀಜಿ ಮಾತನಾಡಿ, ಅಂಬೇಡ್ಕರ್ ಆಶಯದಂತೆ ದಲಿತರು ಆಳುವ ದೊರೆ ಆಗಬೇಕು. ಹಾಗೆ ಆಗಬೇಕಾದರೆ, §ಬೀದಿಯಲ್ಲಿ ಅಂಬೇಡ್ಕರ್ ವಾದ – ಮನೆಯಲ್ಲಿ ಮನುವಾದ’ ಎಂಬ ಧೋರಣೆ ಬಿಡಬೇಕು. ಧರ್ಮ – ದೇವರು ನಿಮಗೆ ಯಾವುದೇ ಬೆಂಬಲ ನೀಡಿಲ್ಲ. ಅಂಬೇಡ್ಕರ್ ಅವರು ಹಕ್ಕುಗಳನ್ನು ಕೊಟ್ಟಿದ್ದಾರೆ ಎಂದು ತಿಳಿಸಿದರು.
ಚಿತ್ರದುರ್ಗದ ಕೋಡಿಹಳ್ಳಿಯ ಆದಿಜಾಂಬವ ಮಠದ ಶ್ರೀ ಷಡಕ್ಷರಿ ಮುನಿ ದೇಶೀಕೇಂದ್ರ ಸ್ವಾಮೀಜಿ ಮಾತನಾಡಿ, ಹೋರಾಟ ಮಾಡದಿದ್ದರೆ ದಲಿತ ಸಮುದಾಯ ಕಳೆದು ಹೋಗುತ್ತದೆ. ಎಲ್ಲ ಕ್ಷೇತ್ರಗಳಲ್ಲಿ ಆಗುತ್ತಿರುವ ಅನ್ಯಾಯ ಎದುರಿಸಲು ಶಿಕ್ಷಣ, ಸಂಘಟನೆ ಹಾಗೂ ಹೋರಾಟ ಬೇಕು ಎಂದು ಹೇಳಿದರು.
ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕ ಎಂ. ಗುರುಮೂರ್ತಿ ಶಿವಮೊಗ್ಗ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಛಲವಾದಿ ಗುರುಪೀಠದ ಶ್ರೀ ಬಸವನಾಗಿದೇವ ಸ್ವಾಮೀಜಿ ಹಾಗೂ ಮಹಾ ಶಿವಶರಣ ಹರಳಯ್ಯ ಗುರುಪೀಠದ ಪೀಠಾಧ್ಯಕ್ಷ ಶ್ರೀ ಬಸವ ಹರಳಯ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.
ವೇದಿಕೆ ಮೇಲೆ ದಸಂಸ ಹಿರಿಯ ನಾಯಕ ಮುಂಡರಗಿ ನಾಗರಾಜ, ಸಂಘಟನೆಯ ಮುಖಂಡರಾದ ಬಿ.ಎನ್. ಗಂಗಾಧರಪ್ಪ, ಹನುಮಂತಪ್ಪ ಕಾಕರಗಲ್, ಫಕ್ಕೀರಪ್ಪ ಮುಂಡಗೋಡ, ರತ್ನಮ್ಮ ಜೀವಿಕ ಮತ್ತಿತರರು ಉಪಸ್ಥಿತರಿದ್ದರು.