ದಾವಣಗೆರೆ, ಮಾ. 18- ಹೋಳಿ ಹಬ್ಬದ ಪ್ರಯುಕ್ತ ನಗರದಲ್ಲಿ ಶುಕ್ರವಾರ ರಾತ್ರಿ ಸಂಭ್ರಮದ ಕಾಮ ದಹನ ನಡೆಯಿತು.
ನಗರದ ಹರಳೆಣ್ಣೆ ಕೊಟ್ರಬಸಪ್ಪ ವೃತ್ತ ಸೇರಿದಂತೆ ವಿವಿಧ ವೃತ್ತಗಳು ಹಾಗೂ ಬಡಾವಣೆಗಳಲ್ಲಿ ಯುವಕರು ಕಾಮದಹನ ಮಾಡಿದರು.
ಬೆಳಿಗ್ಗೆ ಮಕ್ಕಳು ಹಾಗೂ ಯುವಕರ ಗುಂಪು ಕಾಮಣ್ಣನ ಚಿತ್ರ ಹಿಡಿದು ಮನೆ ಮನೆಗೆ ತೆರಳಿ ಪಟ್ಟಿ ಕೇಳುತ್ತಿದ್ದರೆ, ಪ್ರಮುಖ ರಸ್ತೆಗಳಲ್ಲಿ ವಾಹನಗಳನ್ನು ತಡೆದು ಹಣ ಸಂಗ್ರಹಿ ಸುತ್ತಿದ್ದುದು ಕಂಡು ಬಂತು.
ಸಂಜೆಯೇ ಕಾಮದಹನಕ್ಕೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿತ್ತು. ಕಾಮಣ್ಣನನ್ನು ಸುಡಲು ಬೇಕಾದ ಕಟ್ಟಿಗೆ, ಕುಳ್ಳು, ತೆಂಗಿನ ಗರಿಗಳನ್ನು ಗುಡ್ಡೆ ಹಾಕಿಕೊಳ್ಳುತ್ತಿದ್ದರು. ರಾತ್ರಿಯಾಗುತ್ತಿದ್ದಂತೆ ಕಾಮಣ್ಣನ ಪ್ರತಿಕೃತಿ ಹಾಗೂ ಚಿತ್ರಪಟ ಇಟ್ಟು ಸಿಂಗರಿಸಿ ರಾತ್ರಿ ದಹಿಸಿ ಸಂಭ್ರಮಿಸಿದರು. ಸಾರ್ವಜನಿಕರು ಹಾಗೂ ಮಕ್ಕಳು ಪಾಲ್ಗೊಂಡಿದ್ದರು.
ಇಂದು ಹೋಳಿ: ಶನಿವಾರ ಮುಂಜಾನೆಯೇ ಆರಂಭವಾಗಲಿರುವ ಹೋಳಿ ಹಬ್ಬಕ್ಕೆ ಮಕ್ಕಳು, ಯುವಕರು, ಯುವತಿಯರು ಸಿದ್ಧರಾಗಿದ್ದಾರೆ.
ರಂಗಿನಾಟಕ್ಕೆ ಬೇಕಾದ ವಿವಿಧ ಬಣ್ಣಗಳನ್ನು ಮಾರಾಟ ಮಾಡಲು ಕಿರಾಣಿ ಅಂಗಡಿ, ಫ್ಯಾನ್ಸಿ ಸ್ಟೋರ್ ಮುಂತಾದ ಕಡೆ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಸಂಜೆ ಖರೀದಿಯೂ ನಡೆಯುತ್ತಿತ್ತು. ಮಕ್ಕಳ ಪಿಚಕಾರಿಗೆ ಅಂಗಡಿಗಳಲ್ಲಿ ಬೇಡಿಕೆ ಹೆಚ್ಚಾಗಿತ್ತು.
ರಾಂ ಅಂಡ್ ಕೋ ವೃತ್ತದಲ್ಲಿ ಬಣ್ಣದಾಟಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಕಳೆದ ಕೆಲ ವರ್ಷ ಕೊರೊನಾ ಹಿನ್ನೆಲೆಯಲ್ಲಿ ಕಳೆಗುಂದಿದ್ದ ಬಣ್ಣದಾಟ, ಈ ವರ್ಷ ರಂಗೇರುವುದರಲ್ಲಿ ಅನುಮಾನವಿಲ್ಲ.
ಅಕ್ಕಿ ವರ್ತಕರಿಂದ ಕಾಮದಹನ: ಸಾಂಪ್ರದಾಯಿಕವಾಗಿ ಕಾಮದಹನ ಮಾಡುವ ಮೂಲಕ ಚೌಕಿ ಪೇಟೆ ಹಿಂಬಾಗ ಹಳೇ ಗುಜ್ಜರಿ ಲೈನ್ ಅಕ್ಕಿ ವರ್ತಕರು ಹೋಳಿ ಆಚರಣೆಗೆ ಅದ್ಧೂರಿಯಾಗಿ ಚಾಲನೆ ನೀಡಿದದರು. ಈ ಸಂದರ್ಭದಲ್ಲಿ ಅಕ್ಕಿ ವರ್ತಕರಾದ ಜಯಪ್ರಕಾಶ್ ಮಾಗಿ, ಬಿ.ಪಿ.ಎಂ.ಜಗದೀಶ್, ಹಲವಾಗಲ ರುದ್ರೇಶ್, ಜಯರಾಜ್ ಮೇಟಿ, ಟಿ.ಎಸ್.ಮಲ್ಲಿಕಾರ್ಜುನ, ಸತೀಶ್ ಹುಬ್ಬಳ್ಳಿ, ಪರುಶುರಾಮ್ ಪಿ.ಎಸ್.ಎ.ಬಿ.ಬಸವರಾಜ್, ಶಾಸ್ತ್ರೀ ಬಸವರಾಜ್, ವಿನಾಯಕ ಬ್ಯಾಡಗಿ, ಮಾಳಗಿ ಸಿದ್ದು, ವಿಶ್ವನಾಥ ಬಾದಾಮಿ ಮಹಾನಗರ ಪಾಲಿಕೆ ಮಾಜಿ ಸದಸ್ಯರಾದ ಶಿವನಗೌಡ ಟಿ.ಪಾಟೀಲ್,ಟಿಂಕರ್ ಮಂಜಣ್ಣ ಉಪಸ್ಥಿತರಿದ್ದರು