ಎಂ.ಎಂ.ಶಿಕ್ಷಣ ಮಹಾವಿದ್ಯಾಲಯದ ದೀಪದಾನ ಕಾರ್ಯಕ್ರಮದಲ್ಲಿ ಎಚ್.ಬಿ.ಮಂಜುನಾಥ
ದಾವಣಗೆರೆ, ಮಾ. 17- ವಾರ್ಷಿಕ ಪರೀಕ್ಷೆಯಲ್ಲಿ ಉತ್ತೀರ್ಣರಾಗುವಂತಹ ಶಿಕ್ಷಣವನ್ನು ಕೊಟ್ಟರೆ ಸಾಲದು, ಜೀವನ ಪರೀಕ್ಷೆಯಲ್ಲೂ ಗೆಲ್ಲುವಂತಹ ಶಿಕ್ಷಣವನ್ನು ಕೊಡಬೇಕಾಗಿದೆ ಎಂದು ಹಿರಿಯ ವ್ಯಂಗ್ಯ ಚಿತ್ರಕಾರ ಹೆಚ್.ಬಿ. ಮಂಜುನಾಥ ಹೇಳಿದರು.
ನಗರದ ಮಾಕನೂರು ಮಲ್ಲೇಶಪ್ಪ ಶಿಕ್ಷಣ ಮಹಾವಿದ್ಯಾಲಯದ ದೀಪದಾನ ಕಾರ್ಯಕ್ರಮದ ಮುಖ್ಯ ಅಭ್ಯಾಗತರಾಗಿ ಮಾತನಾಡಿದ ಅವರು, ಭಾವೀ ಶಿಕ್ಷಕರಾಗುವ ಇಂದಿನ ಪ್ರಶಿಕ್ಷಣಾರ್ಥಿಗಳು ತಮ್ಮ ಭವಿಷ್ಯವನ್ನು ರೂಪಿಸಿಕೊಂಡರೆ ಸಾಲದು ವಿದ್ಯಾರ್ಥಿಗಳ ಭವಿಷ್ಯವನ್ನೂ ರೂಪಿಸಬೇಕು ಎಂದರು.
ಅಧ್ಯಾಪಕರುಗಳು ಪಠ್ಯದಲ್ಲಿರುವುದು ಇಷ್ಟೇ ಎಂದು ಸೀಮಿತಗೊಳ್ಳದೇ ಸಮಕಾಲೀನದ ವಿದ್ಯಮಾನಗಳನ್ನೂ ಉದಾಹರಿಸುತ್ತಾ ಪಾಠ ಮಾಡುವುದು ಸಾಧ್ಯವಿದೆ ಎಂದರು.
ವಿದ್ಯಾರ್ಥಿ ಸಂಘದ ಸಮಾರೋಪ ನುಡಿಗಳನ್ನಾಡಿದ ಕಾಲೇಜಿನ ಸ್ಥಳೀಯ ಸಲಹಾ ಸಮಿತಿ ಸದಸ್ಯ ಪ್ರೊ.ಎಸ್.ಹಾಲಪ್ಪ, ಸಂವಹನಾ ಸಾಮರ್ಥ್ಯ ಪಡೆಯದೇ ಯಶಸ್ವಿ ಅಧ್ಯಾಪಕರಾಗಲು ಸಾಧ್ಯವಿಲ್ಲ. ಇದಕ್ಕೆ ಜ್ಞಾನದೊಂದಿಗೆ ಭಾಷಾಪ್ರೌಢಿಮೆಯೂ ಬೇಕು. ಆಧುನಿಕವಾದ ಡಿಜಿಟಲ್ ತಂತ್ರಜ್ಞಾನವನ್ನು ಅಧ್ಯಾಪನದ ಗುಣಮಟ್ಟ ವೃದ್ಧಿಗೆ ಬಳಸಿಕೊಳ್ಳಬಹುದಾಗಿದೆ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಸ್ಥಳೀಯ ಸಲಹಾ ಸಮಿತಿ ಅಧ್ಯಕ್ಷ ಪ್ರೊ. ಬಿ.ಸಿದ್ದಲಿಂಗಯ್ಯ, ಓರ್ವ ವೈದ್ಯನ ತಪ್ಪಿನಿಂದ ಒಂದು ಸಾವಾಗಬಹುದು, ಓರ್ವ ಇಂಜಿನಿಯರ್ ತಪ್ಪಿನಿಂದ ಒಂದು ನಿರ್ಮಾಣ ಬಿದ್ದು ಹೋಗಬಹುದು. ಆದರೆ, ಒಬ್ಬ ಉಪಾಧ್ಯಾಯನ ತಪ್ಪಿನಿಂದ ಒಂದು ಸಮಾಜವೇ ಹಾಳಾಗಬಹುದು, ಶಿಕ್ಷಕರ ಮೇಲೆ ಗುರುತರ ಜವಾಬ್ದಾರಿ ಇದ್ದು, ಮಾದರಿ ಶಿಕ್ಷಕರಾಗಬೇಕು ಎಂದರು ಕಾಲೇಜಿನ ಪ್ರಾಂಶುಪಾಲ ಡಾ. ಕೆ. ಟಿ.ನಾಗರಾಜ್ ನಾಯ್ಕರವರು ದತ್ತಿ ನಿಧಿ ಬಹುಮಾನ ವಿತರಣೆ ನಡೆಸಿಕೊಟ್ಟರು.
ಮಂಜುಳಾ ಮತ್ತು ದೀಪಾ ನಿರೂಪಿಸಿದ ಕಾರ್ಯಕ್ರಮದಲ್ಲಿ ಪ್ರಾರ್ಥನೆಯನ್ನು ಅನುಷಾ ಮತ್ತು ಸಂಗಡಿಗರು ಹಾಡಿದರು. ಸ್ವಾಗತವನ್ನು ಸಹಾಯಕ ಪ್ರಾಧ್ಯಾಪಕ ಡಾ. ಹಾಲೇಶಪ್ಪ ಟಿ. ಕೋರಿದರು.
ಪ್ರಶಿಕ್ಷಣಾರ್ಥಿಗಳ ಅನಿಸಿಕೆಗಳನ್ನು ರಾಘವೇಂದ್ರ, ಭಾಗ್ಯಶ್ರೀ, ಅಮೃತ, ಕೃಷ್ಣವೇಣಿ ವ್ಯಕ್ತಪಡಿಸಿದರು. ದೀಪದಾನ ಪ್ರಮಾಣ ವಚನವನ್ನು ಸಹಾಯಕ ಪ್ರಾಧ್ಯಾಪಕರಾದ ಪ್ರೊ. ಡಾ. ಜಿ.ಎಂ. ಶಶಿಕಲಾ ನೆರವೇರಿಸಿಕೊಟ್ಟರು. ಸಹಾಯಕ ಪ್ರಾಧ್ಯಾಪಕ ಡಾ. ಸಂತೋಷ್ ಕುಮಾರ್ ಆರ್. ವಂದಿಸಿದರು.