ಕ್ರಾಂತಿಯುತ ಹೋರಾಟ ನಡೆದರೆ ಸರ್ಕಾರವೇ ಹೊಣೆ

ಜ.14ರ ಪಾದಯಾತ್ರೆ ಒಳಗಾಗಿ ಸಿಎಂ ಕೊಟ್ಟ ಮಾತಿನಂತೆ ನಡೆಯಲಿ: ಕೂಡಲ ಸಂಗಮ ಶ್ರೀ

ದಾವಣಗೆರೆ, ಜ.6- ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡುವ ವಿಚಾರ ದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಇದೇ ದಿನಾಂಕ 14ರ ಪಾದಯಾತ್ರೆ ಒಳಗಾಗಿ ಕೊಟ್ಟ ಮಾತಿನಂತೆ ನಡೆದುಕೊಳ್ಳಬೇಕು. ಇಲ್ಲವಾದರೆ ಪಾದಯಾತ್ರೆ ವೇಳೆ ಸಮಾಜದ ಯುವಜನರು ಕ್ರಾಂತಿಯುತ ಹೋರಾಟಕ್ಕೆ ಇಳಿದರೆ, ಮುಂದಿನ ಅನಾಹುತಗಳಿಗೆ ಸರ್ಕಾರವೇ ಹೊಣೆಯೇ ಹೊರತು ನಮ್ಮ ಸಮಾಜವಲ್ಲ ಎಂದು ಕೂಡಲ ಸಂಗಮದ ಲಿಂಗಾಯತ ಪಂಚಮಸಾಲಿ ಜಗದ್ಗುರು ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿ ಮುನ್ನೆಚ್ಚರಿಕೆ ನೀಡಿದರು.

ಇಂದಿಲ್ಲಿ ಮಾಜಿ ಶಾಸಕ ಹೆಚ್.ಎಸ್. ಶಿವಶಂಕರ್ ಅವರ ನಿವಾಸದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಶ್ರೀಗಳು ಮಾತನಾಡುತ್ತಾ, ಈ ಹಿಂದೆ ಬೆಳಗಾವಿಯಲ್ಲಿ ಮೀಸಲಾತಿಗಾಗಿ ಉಪವಾಸ ಸತ್ಯಾಗ್ರಹ ನಡೆಸಿದ ಸಂದರ್ಭದಲ್ಲಿ ಸ್ವತಃ ಸಿಎಂ ಯಡಿಯೂರಪ್ಪ ನಮಗೆ ದೂರವಾಣಿ ಮೂಲಕ ಸಂಪರ್ಕಿಸಿ, ಮೀಸಲಾತಿ ಕಲ್ಪಿಸುವುದಾಗಿ ಭರವಸೆ ನೀಡಿದ್ದರು. ಒಂದು ತಿಂಗಳ ಗಡುವು ಮುಗಿದರೂ ಸಹ ಮೀಸಲಾತಿ ವಿಚಾರದಲ್ಲಿ ಯಾವುದೇ ನಿರ್ಣಯ ಕೈಗೊಂಡಿಲ್ಲ ಎಂದು ತಿಳಿಸಿದರು.

ನಮ್ಮವರೇ ಮುಖ್ಯಮಂತ್ರಿಗಳಿರುವಾಗ ಸಮಾಜಕ್ಕೆ ಮೀಸಲಾತಿ ದೊರಕಲಿದೆ ಎಂಬ ವಿಶ್ವಾಸವಿದೆ. ಮುಖ್ಯಮಂತ್ರಿಗಳು ಕೊಟ್ಟ ಮಾತನ್ನು ಉಳಿಸಿಕೊಳ್ಳಬೇಕು. ಈ ಹಿನ್ನೆಲೆಯಲ್ಲಿ ಅವರ ಮೇಲೆ ಒತ್ತಡ ಹಾಕಲು ಜಾಗೃತಿ ಸಮಾವೇಶಗಳನ್ನು ಆಯೋಜಿಸುತ್ತಿದ್ದೇವೆ. ಜ.14ರಂದು ಕೂಡಲ ಸಂಗಮದ ಲಿಂಗಾಯತರ ಧಾರ್ಮಿಕ ಪೀಠದಿಂದ ಬೆಂಗಳೂರಿನ ವಿಧಾನಸೌಧದ ಆಡಳಿತ ಪೀಠದವರೆಗೆ ಪಂಚ ಲಕ್ಷ ಹೆಜ್ಜೆಗಳ ಬೃಹತ್ ಪಾದಯಾತ್ರೆಯನ್ನು ಹಮ್ಮಿಕೊಂಡಿದ್ದು, ಅಷ್ಟರೊಳಗಾಗಿ ರಾಜ್ಯದ ಮುಖ್ಯಮಂತ್ರಿಗಳು ತಮಗಿರುವ ಪರಮಾಧಿಕಾರ ಬಳಸಿ, ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡಲು ಶಿಫಾರಸ್ಸು ಮಾಡಿ ಕ್ಯಾಬಿನೆಟ್ ನಲ್ಲಿ ನಿರ್ಣಯ ಕೈಗೊಳ್ಳುವ ಮುಖೇನ ನಮ್ಮ ಸಮಾಜಕ್ಕೆ ನ್ಯಾಯ ಒದಗಿಸಬೇಕೆಂದು ಒತ್ತಾಯಿಸಿದರು.

ನಾವು ಶಾಂತಿಯುತವಾಗಿ ಪಾದಯಾತ್ರೆ ನಡೆಸುತ್ತೇವೆ. ಪಾದಯಾತ್ರೆ ಸಮಯದಲ್ಲಿ ಸಮಾಜದ ಯುವಜನರು ರಸ್ತೆ ತಡೆ ಚಳವಳಿ ನಡೆಸಲು ನಿರ್ಧರಿಸಿದ್ದಾರೆ. ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ, ಲಿಂಗಾಯತ ಬಡ ಸಮಾಜಗಳಿಗೆ ಕೇಂದ್ರ ಸರ್ಕಾರ ಒಬಿಸಿ ಮೀಸಲಾತಿಗೆ ಸೇರ್ಪಡೆ ಮಾಡಬೇಕು ಎನ್ನುವುದು ನಮ್ಮ ಸಮಾಜದ ಒತ್ತಾಯವಾಗಿದೆ ಎಂದು ಹೇಳಿದರು.

ಮಂಗಳವಾರ ಮತ್ತೆ ಸಿಎಂ ಯಡಿಯೂರಪ್ಪ ಅವರು ದೂರವಾಣಿ ಕರೆ ಮಾಡಿ, ಇಷ್ಟರಲ್ಲೇ ತಮ್ಮ ಬೇಡಿಕೆ ಈಡೇರಿಸುತ್ತೇವೆ ಎಂದು ಪುನಃ ಭರವಸೆ ನೀಡಿದ್ದು, ಈ ಸಂಬಂಧ ನಮ್ಮ ಸಮಾಜದ ಶಾಸಕ ಸಿ.ಸಿ. ಪಾಟೀಲ್ ಅವರು ಜನವರಿ 9ರಂದು ಮಾತುಕತೆಗೆ ಬರುತ್ತೇವೆ ಎಂದು ಹೇಳಿದ್ದಾರೆ. ಈ ಸಮಯದಲ್ಲಿ ಮೀಸಲಾತಿ ಆದೇಶ ಬರಬಹುದು ಎಂಬ ನಿರೀಕ್ಷೆ ಇದೆ. ಆದರೂ ನಾವುಗಳು ಹೋರಾಟದ ರೂಪುರೇಷೆ ನಿಲ್ಲಿಸಿಲ್ಲ. ಹೋರಾಟಕ್ಕೆ ಸಜ್ಜಾಗುತ್ತಿದ್ದೇವೆ ಎಂದರು. 

ಮಾಜಿ ಶಾಸಕ ವಿಜಯಾನಂದ ಕಾಶಪ್ಪನರ್ ಮಾತನಾಡಿ,  ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿಗಾಗಿ `ಮಾಡು ಇಲ್ಲವೇ ಮಡಿ’ ಎಂಬ ಘೋಷಣೆಯೊಂದಿಗೆ ಪಾದಯಾತ್ರೆ ಹಮ್ಮಿಕೊಂಡಿದ್ದು, ಸುಮಾರು 15 ಲಕ್ಷ ಸಮಾಜ ಬಾಂಧವರೊಂದಿಗೆ ಈ ಬಾರಿ ಜೀವ ಹೋದರೂ ಸಹ ವಿಧಾನಸೌಧಕ್ಕೆ ಮುತ್ತಿಗೆ ಹಾಕಿ ಮೀಸಲಾತಿ ಪಡೆಯುವುದು ಮಾತ್ರ ಖಚಿತವೆಂದರು.

ಅಪೇಕ್ಷೆ ಪಟ್ಟು ಕರೆದವರಿಗೆ ನನ್ನ ಬೆಂಬಲ: ಮಾಜಿ ಶಾಸಕ ಹೆಚ್.ಎಸ್. ಶಿವಶಂಕರ್ ಮಾತನಾಡಿ, ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ಪಡೆಯಲು ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿ ತಳ ಹಂತದಿಂದ ಹೋರಾಟ ನಡೆಸುತ್ತಿದ್ದಾರೆ. ಸಮಾಜದ ಏಳಿಗೆ ಮತ್ತು ಸಂಘಟನೆಗಾಗಿ ಸಮಾಜವನ್ನು ಹೋರಾಟಕ್ಕೆ ಸಜ್ಜುಗೊಳಿಸುವ ಜೊತೆಗೆ ಜಾಗೃತಗೊಳಿಸುತ್ತಿದ್ದಾರೆ. ಇದು ಪಕ್ಷಾಧಾರಿತ ಹೋರಾಟವಲ್ಲ. ನಮ್ಮನ್ನು ಅಪೇಕ್ಷೆ ಪಟ್ಟು ಪ್ರೀತಿಯಿಂದ ಕರೆದವರೊಂದಿಗೆ ಹೋರಾಟಕ್ಕೆ ಬೆಂಬಲ ನೀಡುತ್ತೇನೆ. ಮತ್ತೆ ಕೆಲವರು ಹೈಟೆಕ್ ಸೋಷಿಯಲ್ ಮೀಡಿಯಾ ಸ್ವಾಮೀಜಿ ಇದ್ದಾರೆ. ಅವರು ಫೇಸ್‍ಬುಕ್, ವಾಟ್ಸಾಪ್ ಮೂಲಕ ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ಸೆಳೆಯುತ್ತಿದ್ದಾರೆ ಎಂದು ಹರಿಹರ ಪಂಚಮಸಾಲಿ ಪೀಠದ ಶ್ರೀ ವಚನಾನಂದ ಸ್ವಾಮೀಜಿ ಬಗ್ಗೆ ಪ್ರತಿಕ್ರಿಯಿಸುತ್ತಾ, ನಮಗೆ ಎರಡು ರೀತಿಯ ಸ್ವಾಮೀಜಿಗಳು ಬೇಕಾಗಿದ್ದಾರೆ. ಅಲ್ಲದೇ ಸಾಮಾಜಿಕ ಜಾಲತಾಣದ ಹೋರಾಟವೂ ಅಗತ್ಯವಾಗಿದೆ ಎಂದು ಹೇಳಿದರು. 

ಪತ್ರಿಕಾಗೋಷ್ಠಿಯಲ್ಲಿ ಪಾಲಿಕೆ ಮೇಯರ್ ಬಿ.ಜಿ. ಅಜಯ ಕುಮಾರ್, ಮುಖಂಡರಾದ ಎಂ.ಟಿ. ಸುಭಾಶ್ಚಂದ್ರ, ಹೆಚ್.ಎಸ್. ರವೀಂದ್ರ, ಪ್ರಭು ಕಲಬುರ್ಗಿ, ಅಶೋಕ ಗೋಪನಾಳ್, ಮಂಜುಳ ಮಹೇಶ್, ಮಹಾಂತೇಶ್ ಒಣರೊಟ್ಟಿ, ರುದ್ರಮ್ಮ ಮಲ್ಲಿಕಾರ್ಜುನ, ಆಶಾ ಸೋಮಶೇಖರ್ ಸೇರಿದಂತೆ ಇತರರು ಇದ್ದರು.

error: Content is protected !!