ಸಂಬಂಧಿಸಿದ ಅಧಿಕಾರಿಗಳಿಗೆ ಸಚಿವ ಈಶ್ವರಪ್ಪ ಖಡಕ್ ಎಚ್ಚರಿಕೆ
ದಾವಣಗೆರೆ ಜ.6- ಜಿಲ್ಲೆಯಲ್ಲಿ ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲು ಸರ್ಕಾರ ಅನುದಾನ ನೀಡಲು ಮುಂದಾದರೂ ಅದನ್ನು ಸಮರ್ಪಕವಾಗಿ ಬಳಸಿ ಕೊಂಡು ಕಾರ್ಯಗತಗೊಳಿಸಲು ನಿಮಗೇನು ಕಷ್ಟ. ಕಾರ್ಯ ಗತವಾಗದಿದ್ದರೂ ಸುಮ್ಮನೇ ಸಭೆಗೆ ಮಾಹಿತಿ ನೀಡಬೇಕೆಂದು ಅಸಮರ್ಪಕ ಉತ್ತರ ನೀಡುವುದು ಸಲ್ಲ. ಬಡವರ ಕುಡಿಯುವ ನೀರಿನಲ್ಲಿ ಅನ್ಯಾಯ ಮಾಡುವುದು ನ್ಯಾಯವಲ್ಲ.
ನಗರದ ಜಿಲ್ಲಾ ಪಂಚಾಯತ್ ಮುಖ್ಯ ಸಭಾಂಗಣದಲ್ಲಿ ಇಂದು ಸಂಜೆ ತಮ್ಮ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾ ಪಂಚಾಯತ್ ಪ್ರಗತಿ ಪರಿಶೀಲನಾ ಸಭೆಯಲ್ಲಿ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್‍ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ಮಾತನಾಡಿದರು.
ಬಹುಗ್ರಾಮ ಕುಡಿಯುವ ನೀರು ಸರಬರಾಜು ಯೋಜನೆಯಡಿ ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮತ್ತು ಶುದ್ದ ಕುಡಿಯುವ ನೀರಿನ ಘಟಕಗಳು ಕಾರ್ಯ ಇಲ್ಲದಿರುವ ಬಗ್ಗೆ ಮಾಹಿತಿ ಪಡೆದು ಅಸಮಾಧಾನ ವ್ಯಕ್ತಪಡಿಸುತ್ತಾ, ಸಂಬಂಧಿಸಿದ ಅಧಿಕಾರಿಗಳಿಗೆ ಚಾಟಿ ಬೀಸಿದರಲ್ಲದೇ, 2 ತಿಂಗಳ ಬಿಟ್ಟು ತಾವು ಬರುವುದರೊಳಗಾಗಿ ಕುಡಿಯುವ ನೀರಿನ ವ್ಯವಸ್ಥೆ ಸಮರ್ಪಕವಾಗಿಸುವಂತೆ ಖಡಕ್ ಎಚ್ಚರಿಕೆ ಸಹ ನೀಡಿದರು.
2020-21ನೇ ಸಾಲಿನ ರಾಷ್ಟ್ರೀಯ ಗ್ರಾಮೀಣ ಕುಡಿಯುವ ನೀರು ಸರಬರಾಜು ಯೋಜನೆಯ ಮುಂದುವರೆದ ಕಾಮಗಾರಿಗಳ ಪ್ರಗತಿ ವರದಿ ಪರಿಶೀಲನೆ ವೇಳೆ ಸಚಿವ ಈಶ್ವರಪ್ಪ ಅಧಿಕಾರಿಗಳ ಮಾಹಿತಿ ಪಡೆಯುತ್ತಾ, ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ಸಂಬಂಧಿಸಿದಂತೆ 12 ಕಾಮಗಾರಿಗಳಿಗೆ ಬಜೆಟ್‍ನಲ್ಲಿ ಹೆಚ್ಚುವರಿ ಅನುದಾನ ಕೇಳಲಾಗಿದೆ. ಈ ಕಾಮಗಾರಿಗಳಿಗೆ 11.17 ಕೋಟಿ ನಿಗದಿಪಡಿಸಲಾಗಿದೆ. ಈ ಪೈಕಿ 9 ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದೆ. ಆದರೆ ಕೇವಲ 2.26 ಕೋಟಿ ವೆಚ್ಚ ಮಾಡಲಾಗಿದೆ ಎಂದು ವರದಿ ನೀಡಿದ್ದೀರಿ. ಹೀಗೆ ಸರ್ಕಾರದಿಂದ ಅನುದಾನ ನೀಡಿದರೂ ಏಕೆ ಬಳಸಿಕೊಂಡು ಕಾಮಗಾರಿ ಪೂರ್ಣಗೊಳಿಸಿಲ್ಲ. ಸಂಬಂಧಿಸಿದ ಕಂಟ್ರಾಕ್ಟರ್ ಕೆಲಸ ಮಾಡಿಯೂ ಆಗಿರುವ ಕಾಮಗಾರಿಗಳ ವೆಚ್ಚದ ಬಿಲ್ ಪಾವತಿಗೆ ಸಲ್ಲಿಸಿಲ್ಲವೇ? ಅಥವಾ ಕೆಲಸವೇ ಆಗಿಲ್ಲವೇ ಎಂದು ಪ್ರಶ್ನಿಸಿದರು.
ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆಯ ಕಾರ್ಯಪಾಲಕ ಅಭಿಯಂತರ ನಾಗಪ್ಪ ಮಾತನಾಡಿ, ಗ್ರಾಮೀಣ ಕುಡಿಯುವ ನೀರಿಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ವಿವಿಧ ಯೋಜನೆಗಳಡಿ 726 ಕಾಮಗಾರಿಗಳಿಗೆ 72.94 ಕೋಟಿ ಅನುದಾನ ಕೇಳಿದ್ದು, ಈವರೆಗೆ 604 ಕಾಮಗಾರಿಗಳು ಪೂರ್ಣಗೊಂಡಿವೆ. 23.77 ಕೋಟಿ ವೆಚ್ಚ ಮಾಡಲಾಗಿದೆ. 119 ಕಾಮಗಾರಿ ಪ್ರಗತಿಯಲ್ಲಿವೆ. ಹಲವು ಕಾಮಗಾರಿಗಳ ಭೌತಿಕ ಪ್ರಗತಿ ಆಗಿದ್ದು ಆರ್ಥಿಕ ಪ್ರಗತಿ ಆಗಬೇಕಿದೆ ಎಂದರು.
ಸಚಿವರು ಪ್ರತಿಕ್ರಿಯಿಸಿ, ಇತರೆ ಇಲಾಖೆಗಳಲ್ಲಿ ಅನುದಾನದ ಕೊರತೆ ಇದೆ. ನಮ್ಮ ಇಲಾಖೆಯಲ್ಲಿ ಅನುದಾನದ ಕೊರತೆ ಇಲ್ಲ. ಭೌತಿಕವಾಗಿ ಕೆಲಸವಾಗಿಯೂ ಕಂಟ್ರಾಕ್ಟರ್ ಬಿಲ್ ನೀಡಿಲ್ಲವೆ?. ಹೀಗೆ ಕೆಲಸ ಮಾಡಿಯೂ ಬಿಲ್ ಕೇಳದ ಕಂಟ್ರಾಕ್ಟರ್ ಇರಲು ಸಾಧ್ಯವಿಲ್ಲ. ಅಂತಹ ದಾನ ಶೂರ ಕರ್ಣರು ದಾವಣಗೆರೆಯಲ್ಲಿ ಮಾತ್ರವೇ ಇದ್ದಾರೆಯೇ?. ಹೀಗೆ ಸುಳ್ಳು ಉತ್ತರ ನೀಡಬೇಡಿ. ನಾವು ವರ್ಷಕ್ಕೋ, ಆರು ತಿಂಗಳಿಗೋ, ತಿಂಗಳಿಗೋ ಬಂದು ಹೋಗುತ್ತೇವೆ. ಇಲ್ಲೇ ಇರುವ ನೀವು ಜನರ ಋಣ ತೀರಿಸುವ ಕೆಲಸ ಮಾಡಿ ಎಂದು ಅಧಿಕಾರಿಗಳಿಗೆ ಸೂಚಿಸಿದರಲ್ಲದೇ, ಕಂಟ್ರಾಕ್ಟರ್ ಕರೆಯಿಸಿ ವಿಚಾರಣೆ ಮಾಡುವಂತೆ ಹಾಗೂ ಮಾರ್ಚ್ ಒಳಗೆ ನಿಗದಿತ ಗುರಿ ಸಾಧಿಸುವಂತೆ ಜಿಲ್ಲಾ ಪಂಚಾಯತ್ ಸಿಇಓ ಪದ್ಮ ಬಸವಂತಪ್ಪ ಅವರಿಗೂ ತಾಕೀತು ಮಾಡಿದರು.
370 ಗ್ರಾಮಗಳ ಮನೆಗಳಿಗೆ ಕುಡಿಯುವ ನೀರು
ಸರ್ಕಾರದ ಪ್ರಧಾನ ಕಾರ್ಯದರ್ಶಿ ಎಲ್.ಕೆ. ಅತೀಕ್ ಮಾತನಾಡಿ, ಜಲಜೀವನ ಮಿಷನ್ ಅಡಿಯಲ್ಲಿ ಜಿಲ್ಲೆಯಲ್ಲಿ ಒಟ್ಟು 714 ಗ್ರಾಮಗಳ ಪೈಕಿ 370 ಗ್ರಾಮಗಳ ಮನೆಗಳಿಗೆ ಕುಡಿಯುವ ನೀರನ್ನು ನೀಡುವ ಯೋಜನೆ ಹಾಕಿಕೊಂಡಿದ್ದು, 220 ಗ್ರಾಮಗಳಿಗೆ ಡಿಪಿಆರ್ ತಯಾರಿಸಲಾಗಿದೆ.
181 ಕಾಮಗಾರಿಗಳಿಗೆ ಟೆಂಡರ್ ಕರೆಯಲಾಗಿದೆ. ಕೆಲವೆಡೆ ಟೆಂಡರ್ದಾರರು ಮುಂದೆ ಬರದ ಕಾರಣ, ಮರು ಟೆಂಡರ್ ಕರೆಯಲಾಗಿದ್ದು, 6 ಕಡೆ ಕೆಲಸ ಆರಂಭಿಸಲಾಗಿದೆ ಎಂದರು.
ಇದಕ್ಕೆ ಸಚಿವರು ಪ್ರತಿಕ್ರಿಯಿಸಿ, ಸಿಇಓ ಅವರು ಜಿಲ್ಲೆಯಲ್ಲಿನ ಉತ್ತಮ ಕಂಟ್ರಾಕ್ಟರ್ ದಾರರ ಕರೆಯಿಸಿ ಯೋಜನೆ ಬಗ್ಗೆ ವಿವರಿಸಿ ತಿಳಿಸಿ ಹೇಳಬೇಕೆಂದರು.
ಜಿಲ್ಲೆಯಲ್ಲಿ 793 ಶುದ್ದ ಕುಡಿಯುವ ನೀರಿನ ಘಟಕಗಳ ಪೈಕಿ 774 ಸುಸ್ಥಿತಿಯಲ್ಲಿದ್ದು ಕೆಲಸ ನಿರ್ವಹಿಸುತ್ತಿವೆ. 17 ಕೆಲಸ ಮಾಡುತ್ತಿಲ್ಲವೆಂದು ವರದಿ ನೀಡಿದ್ದೀರಿ. ಆದರೆ ಸದನಗಳಲ್ಲಿ ಈ ಘಟಕಗಳ ಬಗ್ಗೆಯೇ ಹೆಚ್ಚಿನ ದೂರು ಇದೆ. ಆದ್ದರಿಂದಲೇ ಇವುಗಳನ್ನು ಪರಿವೀಕ್ಷಿಸಿ ಕ್ರಮ ಕೈಗೊಳ್ಳಲು ಜಂಟಿ ಸದನ ಸಮಿತಿ ರಚನೆಯಾಗಿದ್ದು, ಗ್ರಾಮೀಣ ಕುಡಿಯುವ ನೀರು, ಶುದ್ದ ಕುಡಿಯುವ ನೀರಿನ ಘಟಕಗಳಿಗೆ ಸಂಬಂಧಿಸಿದಂತೆ ಪರಿವೀಕ್ಷಣೆಗೆ ಈ ಸಮಿತಿ ಬರಲಿದ್ದು, ಈ ರೀತಿ ಲೋಪದೋಷಗಳು ಆಗ ಕಂಡು ಬಂದರೆ ಅವರು ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಿದ್ದಾರೆ. ಆದ್ದರಿಂದ ಗ್ರಾಮೀಣ ಭಾಗದ ಬಡವರ ಕುಡಿಯುವ ನೀರಿಗೆ ಅನ್ಯಾಯವಾಗದಂತೆ ಕಾಮಗಾರಿಗಳನ್ನು ನಿಗದಿತ ಸಮಯದೊಳಗೆ ಪೂರ್ಣಗೊಳಿಸಬೇಕು ಹಾಗೂ ಕಾಮಗಾರಿ ಪ್ರಗತಿ ಕುರಿತು ಸಮರ್ಪಕವಾದ, ವಾಸ್ತವಿಕ ವರದಿಯನ್ನು ಅಧಿಕಾರಿಗಳು ನೀಡಬೇಕು. ಇನ್ನೊಮ್ಮೆ ಇವುಗಳನ್ನು ಪರೀಕ್ಷಿಸಿ ನೈಜ ವರದಿ ನೀಡಬೇಕೆಂದು ಜಿಲ್ಲಾ ಪಂಚಾಯತ್ ಸಿಇಓಗೆ ಸೂಚಿಸಿದರು.
ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆಯ ಕಾರ್ಯಪಾಲಕ ಅಭಿಯಂತರ ನಾಗಪ್ಪ ಮಾತನಾಡಿ, ಜಿಲ್ಲೆಯಲ್ಲಿ ಬಹುಗ್ರಾಮ ಯೋಜನೆಯಡಿ ಒಟ್ಟು 28 ಕಾಮಗಾರಿಗಳು ಪೂರ್ಣಗೊಂಡಿದ್ದು, 3 ಪ್ರಗತಿಯಲ್ಲಿವೆ. 1 ಹೊಸದಾಗಿ ಪ್ರಸ್ತಾಪಿಸಲಾಗಿದೆ. ಈ ಪೈಕಿ ಕೊಂಡಜ್ಜಿ ಬಿಟ್ಟು ಉಳಿದೆಲ್ಲೆಡೆ ಕಾರ್ಯ ನಿರ್ವಹಿಸುತ್ತಿವೆ.
ಪ್ರಗತಿಯಲ್ಲಿರುವ ಆನಗೋಡು ಮತ್ತು ಇತರೆ 18 ಗ್ರಾಮ ಹಿರೇಕೋಗಲೂರು ಮತ್ತು ಇತರೆ 22 ಗ್ರಾಮ, ಹೊಟ್ಯಾಪುರ ಮತ್ತು ಇತರೆ 11 ಗ್ರಾಮಗಳಲ್ಲಿ ಮಾರ್ಚ್ ಅಂತ್ಯಕ್ಕೆ ಕಾಮಗಾರಿ ಪೂರ್ಣಕ್ಕೆ ಗುರಿ ಇದೆ ಎಂದರು.
ಸಂಸದ ಜಿ.ಎಂ. ಸಿದ್ದೇಶ್ವರ ಮಾತನಾಡಿ, ಕಳೆದ 10 ವರ್ಷಗಳಿಂದ ಸಂತೆಮುದ್ದಾಪುರ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ನೆನೆಗುದಿಗೆ ಬಿದ್ದಿದ್ದು, ಇದೀಗ 175 ಹಳ್ಳಿಗಳನ್ನು ಒಳಗೊಳ್ಳುವ ಯೋಜನೆ ತಯಾರಾಗಿದೆ. ಆದಷ್ಟು ಬೇಗ ಈ ಯೋಜನೆಗೆ ಅನುಮೋದನೆ ನೀಡುವಂತೆ ಕೋರಿದರು.
ಶಾಸಕ ಎಸ್.ವಿ. ರಾಮಚಂದ್ರ ಮಾತನಾಡಿ, ಜಗಳೂರು ತಾಲ್ಲೂಕಿನಲ್ಲಿಯೂ ಅನೇಕ ಕಡೆ ಶುದ್ದ ಕುಡಿಯುವ ನೀರಿನ ಘಟಕಗಳು ಕೆಲಸ ಮಾಡುತ್ತಿಲ್ಲ. ಈ ಬಗ್ಗೆ ಸಂಬಂಧಿಸಿದ ಅಭಿಯಂತರರು ಕ್ರಮ ಕೈಗೊಳ್ಳಬೇಕೆಂದರು.
ಸರ್ಕಾರದ ಪ್ರಧಾನ ಕಾರ್ಯದರ್ಶಿ ಎಲ್.ಕೆ. ಅತೀಕ್ ಮಾತನಾಡಿ, ಸಂತೆಮುದ್ದಾಪುರ ಯೋಜನೆಯು 2-3 ಬಾರಿ ಪರಿಷ್ಕೃತವಾಗಿ ಇದೀಗ 275 ಕೋಟಿ ವೆಚ್ಚದಲ್ಲಿ 175 ಹಳ್ಳಿಗಳಿಗೆ ನೀರು ಒದಗಿಸುವ ಯೋಜನೆ ಸಿದ್ದವಾಗಿದ್ದು, ಈ ಬಗ್ಗೆ ಮುಖ್ಯ ಅಭಿಯಂತರರ ಬಳಿ ಚರ್ಚೆ
ನಡೆಸಲಾಗುವುದು ಎಂದರು.
ಸಭೆಯಲ್ಲಿ ಶಾಸಕ ಎಸ್.ಎ.ರವೀಂದ್ರನಾಥ್, ಜಿ.ಪಂ.ಅಧ್ಯಕ್ಷೆ ಕೆ.ವಿ. ಶಾಂತಕುಮಾರಿ, ಉಪಾಧ್ಯಕ್ಷೆ ಸಾಕಮ್ಮ ಗಂಗಾಧರನಾಯ್ಕ, ಜಿಲ್ಲಾ ಪಂಚಾಯತ್ ಸದಸ್ಯ ಮಹೇಶ್, ಸಿಇಓ ಪದ್ಮಾ ಬಸವಂತಪ್ಪ, ಉಪ ಕಾರ್ಯದರ್ಶಿ ಆನಂದ್ ಮತ್ತಿತರರು ಉಪಸ್ಥಿತರಿದ್ದರು.