ಸ್ವಚ್ಛತೆ, ಸೌಲಭ್ಯಕ್ಕೆ ಕ್ರಮ ತೆಗೆದುಕೊಳ್ಳಲು ತಹಶೀಲ್ದಾರ್ ಸೂಚನೆ
ಹರಿಹರ, ಮಾ. 18 – ನಗರದಲ್ಲಿ ಇದೇ ದಿನಾಂಕ 22 ರಿಂದ 26 ರವರೆಗೆ ನಡೆಯುವ ಗ್ರಾಮದೇವತೆ ಊರಮ್ಮ ದೇವಿಯ ಹಬ್ಬದ ಸಿದ್ದತೆ ಬಗ್ಗೆ ತಾಲ್ಲೂಕು ಆಡಳಿತದ ಅಧಿಕಾರಿಗಳು ನಿರ್ಲಕ್ಷ್ಯ ತೋರಿದ್ದಾರೆ ಎಂಬ ವರದಿಗಳ ನಂತರ ತಹಶೀಲ್ದಾರ್ ಕೆ.ಬಿ.ರಾಮಚಂದ್ರಪ್ಪ ಅವರು ಸಭೆಯೊಂದನ್ನು ನಡೆಸಿ, ಮುಂಜಾಗ್ರತಾ ಕ್ರಮಗಳ ಬಗ್ಗೆ ಸೂಚನೆ ನೀಡಿದ್ದಾರೆ.
ವಿವಿಧ ಇಲಾಖೆಯ ಅಧಿಕಾರಿಗಳ ಮತ್ತು ಉತ್ಸವ ಸಮಿತಿಯ ಸದಸ್ಯರನ್ನು ಆಹ್ವಾನಿಸಿ ಸಭೆ ನಡೆಸಿರುವ ಅವರು, ಈ ಸೂಚನೆಗಳನ್ನು ನೀಡಿದ್ದಾರೆ.
ತಹಶೀಲ್ದಾರ್ ರಾಮಚಂದ್ರಪ್ಪ ಅವರು ತಮ್ಮ ಕಚೇರಿ ಸಭಾಂಗಣದಲ್ಲಿ ಉತ್ಸವ ಸಮಿತಿಯ ಸದಸ್ಯರು, ಪೊಲೀಸ್ ಇಲಾಖೆ, ನಗರಸಭೆ, ಬೆಸ್ಕಾಂ ಇಲಾಖೆ, ಆರೋಗ್ಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳ ಸಭೆಯನ್ನು ಏರ್ಪಡಿಸಿದ್ದರು.
ಹಬ್ಬದ ಸಮಯದಲ್ಲಿ ನಗರಕ್ಕೆ ನಾಡಿನಾದ್ಯಂತ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ಇದರಿಂದಾಗಿ ಹಬ್ಬದ ಸಮಯದಲ್ಲಿ ಸಾರ್ವಜನಿಕರಿಗೆ ಆರೋಗ್ಯ ರಕ್ಷಣೆ, ಸ್ವಚ್ಛತೆ, ಕಾನೂನು ಸುವ್ಯವಸ್ಥೆ ಸೇರಿದಂತೆ ಯಾವುದೇ ರೀತಿಯ ತೊಂದರೆಗಳು ಬರದಂತೆ ಮತ್ತು ಚೌಕಿ ಮನೆಯಲ್ಲಿ ಹಬ್ಬಕ್ಕೆ ಬೇಕಾಗುವ ಮೂಲಭೂತ ಸೌಕರ್ಯಗಳ ಕೊರತೆ ಬರದಂತೆ ನೋಡಿಕೊಳ್ಳಲು ಅವರು ಸೂಚನೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಸಿಪಿಐ ಸತೀಶ್ ಕುಮಾರ್, ಪಿಎಸ್ಐ ಸುನೀಲ್ ಬಸವರಾಜ್ ತೇಲಿ, ಪೌರಾಯುಕ್ತರಾದ ಎಸ್.ಲಕ್ಷ್ಮಿ, ಆರೋಗ್ಯ ಇಲಾಖೆ ಡಾ. ಚಂದ್ರಮೋಹನ್, ಬೆಸ್ಕಾಂ ಲಕ್ಷ್ಮಪ್ಪ, ನಗರಸಭೆ ಎಇಇ ಬಿರಾದಾರ್, ಉತ್ಸವ ಸಮಿತಿಯ ಕಸಬಾ ಗೌಡ್ರು ಲಿಂಗರಾಜ್ ಪಾಟೀಲ್, ಮಾಜೇನಹಳ್ಳಿ ಗೌಡ್ರು, ಚೆನ್ನಬಸಪ್ಪ ಗೌಡ್ರು, ಉತ್ಸವ ಸಮಿತಿಯ ಅಧ್ಯಕ್ಷ ಕೆ.ಅಣ್ಣಪ್ಪ, ಕಾರ್ಯದರ್ಶಿ ಬೆಣ್ಣೆ ರೇವಣಸಿದ್ದಪ್ಪ, ಸಹ ಕಾರ್ಯದರ್ಶಿ ಪಾಲಕ್ಷಪ್ಪ, ಬಣಕಾರ ಸಿದ್ದಪ್ಪ, ಮಾಜೇನಹಳ್ಳಿ ಬಣಕಾರ ಆಂಜನೇಯ, ಕಾಂತರಾಜ್, ಸಿದ್ದಪ್ಪ, ಗೌಡ್ರು ಗಿರೀಶ್, ಇತರರು ಹಾಜರಿದ್ದರು.