ಹರಿಹರ : ಹಬ್ಬದ ಪೂರ್ವಭಾವಿ ಸಿದ್ಧತೆಯಲ್ಲಿ ವೈಫಲ್ಯ

ನೀರು, ನೈರ್ಮಲ್ಯದ ವಿಷಯದಲ್ಲಿ ನಿರ್ಲಕ್ಷ್ಯದ ಆರೋಪ

ಹರಿಹರ, ಮಾ. 17 – ನಗರದಲ್ಲಿ ಮಾ.22ರಿಂದ ಮಾ.26ರವರೆಗೆ ಗ್ರಾಮದೇವತೆ ಉತ್ಸವ ಆಯೋಜಿಸಲಾಗಿದೆ. ಲಕ್ಷಾಂತರ ಹೊರಗಿನ ಜನರು ನಗರಕ್ಕೆ ಆಗಮಿಸುವ ಈ ಹಬ್ಬಕ್ಕೆ ಪೂರ್ವಭಾವಿಯಾಗಿ ಸಿದ್ಧತೆ ಮಾಡಿಕೊಳ್ಳಲು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಸಂಪೂರ್ಣ ವಿಫಲರಾಗಿರುವ ದೂರುಗಳು ಕೇಳಿ ಬರುತ್ತಿವೆ.

ಕೋವಿಡ್‍ನಿಂದಾಗಿ ಪರಿತಪಿಸಿದ ಜನತೆಗೆ ನೈರ್ಮಲ್ಯ, ಆರೋಗ್ಯದ ಬಗ್ಗೆ ಎಷ್ಟು ಎಚ್ಚರಿಕೆ ವಹಿಸಬೇಕೆಂಬ ಅರಿವು ಮೂಡಿದೆ. ಆದರೆ, ಆ ಎಚ್ಚರಿಕೆಯನ್ನು ತಾಲ್ಲೂಕು ಆಡಳಿತ, ನಗರಸಭೆ ಅಥವಾ ಜನಪ್ರತಿನಿಧಿಗಳು ಕೈಗೊಂಡಿಲ್ಲ ಎಂಬ ಆರೋಪ ಜನರಿಂದ ಕೇಳಿ ಬರುತ್ತಿದೆ.

ಹಬ್ಬದ ಹಿನ್ನೆಲೆಯಲ್ಲಿ ನೀರು ಸರಬರಾಜು, ಚರಂಡಿಗಳ ಸ್ವಚ್ಚತೆ, ನೈರ್ಮಲ್ಯದ ಸುಧಾರಣೆಯಾಗಬೇಕಿತ್ತು. ಆದರೆ, ನೀರು ಸರಬರಾಜು ಮುಂಚೆಗೆ ಹೋಲಿಸಿದರೆ ಸರಬರಾಜು ಪ್ರಮಾಣ ಕಡಿಮೆಯಾಗಿದೆ.

ಜಲಸಿರಿ ಯೋಜನೆ ಜಾರಿಯಾಗಿರುವ ನಗರದಲ್ಲಿ ಹಬ್ಬಕ್ಕೆ ನೀರಿನ ಕೊರತೆ ಎದುರಾಗಿದೆ. ಬೀಗರು, ಬಿಜ್ಜರು, ಬಂಧುಗಳು ಹೊರಗಿನಿಂದ ಆಗಮಿಸುತ್ತಾರೆಂದು ಸ್ಥಳೀ ಯರು ಮನೆಗಳನ್ನು ಸ್ವಚ್ಛ ಮಾಡುವ, ಸುಣ್ಣ, ಬಣ್ಣ ಬಳಿ ಸುವುದು, ಬಟ್ಟೆ, ಬರೆಗಳನ್ನು ತೊಳೆಯುವುದು ಮಾಡುತ್ತಾರೆ.

ಈ ಸಂದರ್ಭದಲ್ಲಿ ಹೆಚ್ಚಿನ ನೀರಿನ ಅಗತ್ಯ ಇರುತ್ತದೆ. 24 ಗಂಟೆ ನೀರು ಸರಬರಾಜು ಮಾಡುತ್ತೇವೆ ಎಂದು ಹೇಳುವ ನಗರಸಭೆಯ ಅಧಿಕಾರಿಗಳು ಸರಿಯಾಗಿ 1 ಗಂಟೆ ನೀರು ಸರಬರಾಜು ಮಾಡಲಾಗುತ್ತಿಲ್ಲ. ಅದರಲ್ಲೂ ಹಲವು ಬಡಾವಣೆಗಳಲ್ಲಿ  ಅರ್ಧ ಗಂಟೆ ಮಾತ್ರ ನೀರು ಬಂದು ಬಂದ್ ಆಗುತ್ತಿದೆ.

ಕಸ ಸಂಗ್ರಹ ಮಾಡುವ ಆಟೋ ಟಿಪ್ಪರ್‌ಗಳು ಹಲವು ಬಡಾವಣೆಗಳಲ್ಲಿ 3-4 ದಿನಕ್ಕೊಮ್ಮೆ ಬರುತ್ತಿವೆ. ಕಸದ ಬಕೆಟ್‍ಗಳು ತುಂಬಿ, ತುಳುಕುತ್ತಿವೆ. ಹಲವು ಮನೆಯವರು ದುರ್ವಾಸನೆ ಬೀರುತ್ತಿವೆ ಎಂದು ಕಸವನ್ನು ಪ್ಲಾಸ್ಟಿಕ್ ಚೀಲಗಳಲ್ಲಿ ತುಂಬಿ ರಸ್ತೆಗಳಿಗೆ ತಂದು ಹಾಕುತ್ತಿದ್ದಾರೆ. ಒಂದು ಮಾಹಿತಿ ಪ್ರಕಾರ ಹಲವು ಆಟೋಗಳು ದುರಸ್ತಿಗೆ ಬಂದಿವೆ, ಹಾಗೂ ಕೆಲವು ಆಟೋಗಳಿಗೆ ಡೀಸೆಲ್ ಹಾಕಿಸಲು ನಗರಸಭೆಗೆ ಹಣದ ಕೊರತೆ ಇದೆ ಎಂದು ತಿಳಿದು ಬಂದಿದೆ.

ಫ್ಲೆಕ್ಸ್ ಹಾವಳಿಯನ್ನು ತಡೆಯಲು ನಗರಸಭೆ ಮತ್ತೆ ವಿಫಲವಾಗಿದೆ. ಫ್ಲೆಕ್ಸ್‌ಗಳು ಪ್ಲಾಸ್ಟಿಕ್ ಹಾಳೆಯಿಂದ ಮಾಡಿದ್ದವಾಗಿದ್ದು ಹಬ್ಬದ ನಂತರ ಸಾವಿರಾರು ಫ್ಲೆಕ್ಸ್‍ಗಳಿಂದ ಟನ್‍ಗಟ್ಟಲೆ ಪ್ಲಾಸ್ಟಿಕ್ ತ್ಯಾಜ್ಯ ಸೃಷ್ಟಿಯಾಗುತ್ತದೆ. ಅಂಗಡಿ, ಮನೆ, ವಾಣಿಜ್ಯ ಸಂಕೀರ್ಣ, ಸರ್ಕಲ್‍ಗಳು, ವಿದ್ಯುತ್ ಕಂಬ ಹೀಗೆ ಎಲ್ಲೆಂದರಲ್ಲಿ ರಾತ್ರೋ ರಾತ್ರಿ ನೂರಾರು ಫ್ಲೆಕ್ಸ್ ಅಳವಡಿಸಲಾಗಿದೆ. ಇದರಲ್ಲಿ ಎಷ್ಟು ಜನರಿಂದ ಶುಲ್ಕ ಸಂಗ್ರಹಿಸಲಾಗಿದೆ ಎಂಬುದು ಕ್ಷೇತ್ರಪಾಲಕ ಹರಿಹರೇಶ್ವರನಿಗೆ ಮಾಹಿತಿ ಇರಬಹುದು.

ಚರಂಡಿಗಳು ಯಥಾ ಪ್ರಕಾರ ಕಸದ ತೊಟ್ಟಿಯಾಗಿಯೇ ಇವೆ. ದೊಡ್ಡ ಚರಂಡಿಗಳು ವಿಶೇಷವಾಗಿ ಸ್ವಚ್ಚಗೊಂಡಿಲ್ಲ. ಹಬ್ಬದಂದು ಯಾವ ಚರಂಡಿ ಎಲ್ಲಿ ಕಟ್ಟಿಕೊಂಡು ತ್ಯಾಜ್ಯ ನೀರು ರಸ್ತೆಗಳಿಗೆ ಹರಿಯುತ್ತದೆಯೋ ಗೊತ್ತಿಲ್ಲ. ಹಬ್ಬದ ಕಸವೂ ಸೇರಿ ಚರಂಡಿಗಳೆಲ್ಲಾ ದುರ್ವಾಸನೆ ಬೀರುತ್ತಾ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಆತಂಕವಿದೆ.

ಹಬ್ಬದ ಮೂರ್ನಾಲ್ಕು ದಿನಗಳಂದು ಸುತ್ತಲಿನ ನಗರ, ಗ್ರಾಮಗಳ ಲಕ್ಷಾಂತರ ಜನ ಹರಿಹರಕ್ಕೆ ಬರುತ್ತಾರೆ. ಆ ಸಂದರ್ಭದಲ್ಲಿ ಜನಸಂದಣಿ ತಪ್ಪಿಸಲು ಬದಲಿ ರಸ್ತೆಗಳಲ್ಲಿ ಸಂಚಾರಕ್ಕೆ ಅನುವು ಮಾಡಿಕೊಡಬೇಕಾಗುತ್ತದೆ. ಈ ಕುರಿತು ಪೊಲೀಸ್ ಇಲಾಖೆಯಿಂದಲೂ ಯಾವ ಮುನ್ಸೂಚನೆಯನ್ನೂ ಜನರಿಗೆ ಈವರೆಗೆ ನೀಡಿಲ್ಲ.

ಹಬ್ಬ ಘೋಷಣೆ ಮಾಡುವಲ್ಲಿ ಅತ್ಯಂತ ಆಸಕ್ತಿ ವಹಿಸಿದ ಶಾಸಕ ಎಸ್.ರಾಮಪ್ಪನವರ ಉತ್ಸಾಹ ಸಿದ್ಧತೆಯಲ್ಲಿ, ಮುಂಜಾಗ್ರತೆಯಲ್ಲಿ ಕಾಣದಂತಾಗಿದೆ. ಒಂದು ಬಾರಿ ನಗರಸಭೆಯಲ್ಲಿ ಪೂರ್ವ ಸಿದ್ಧತೆ ಸಭೆಯಲ್ಲಿ ಭಾಗವಹಿಸಿ ನಂತರ ಶಾಸಕರು ಕಾಣದಂತೆ ಮಾಯವಾಗಿದ್ದಾರೆಂಬ ಆರೋಪ ಕೇಳಿ ಬರುತ್ತಿದೆ.

error: Content is protected !!