ಬಾಡ : ಮಹಿಳಾ ಸಮಾವೇಶದಲ್ಲಿ ಸಾಹಿತಿ ಎಂ.ಬಿ.ನಾಗರಾಜ್ ಕಾಕನೂರು ಅಭಿಮತ
ಸಭೆ, ಸಮಾರಂಭದ ಹಿಂದೆ ದೇಶ ಕಟ್ಟುವ ಮಹತ್ಕಾರ್ಯ ಇದೆ.
– ಮಹಾಂತೇಶ್ ಬೀಳಗಿ, ಜಿಲ್ಲಾಧಿಕಾರಿ
ದಾವಣಗೆರೆ, ಮಾ.17 – ಸಮಾಜದಲ್ಲಿ ಇಂತಹ ಸಭೆ ಸಮಾರಂಭಗಳು ನಡೆಯುತ್ತಲೇ ಇರುತ್ತವೆ. ಸಭೆ, ಸಮಾರಂಭ ನಡೆಯುವುದರ ಹಿಂದೆ ದೇಶ ಒಗ್ಗೂಡಿಸುವ, ಸಮಾಜ ಕಟ್ಟುವ, ಕಟ್ಟಕಡೆಯ ವ್ಯಕ್ತಿಯನ್ನು ಮುನ್ನೆಲೆಗೆ ತರುವ ಪ್ರಯತ್ನ ಇರುತ್ತದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಹೇಳಿದರು.
ದಾವಣಗೆರೆ ತಾಲ್ಲೂಕು ಬಾಡ ಗ್ರಾಮದಲ್ಲಿ ಬಿ. ಎಂ. ವಾಗೀಶ್ ಸ್ವಾಮಿ ಅಭಿಮಾನಿ ಬಳಗದಿಂದ ಇಂದು ಸಂಜೆ ಹಮ್ಮಿಕೊಳ್ಳಲಾಗಿದ್ದ ಮಹಿಳಾ ಸಮಾವೇಶ ಮತ್ತು ನಗೆಹಬ್ಬ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಯಾವುದೇ ಒಬ್ಬ ವ್ಯಕ್ತಿಗೆ ಉತ್ತಮ ಕಾರ್ಯ ಮಾಡುವ ಮನಸ್ಸಿರಬೇಕು. ಮಾಡಿರುವ ಕಾರ್ಯವನ್ನು ಮಾಡಿಲ್ಲವೆಂಬಂತೆ ಇರಬೇಕು. ಮಾಡಿದ್ದನ್ನು, ನೀಡಿದ್ದನ್ನು ಮರೆತು ಬಿಡಬೇಕು. ಅಂತಹ ಮನಸ್ಥಿತಿ ವಾಗೀಶ್ ಸ್ವಾಮಿ ಅವರದು ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಇನ್ನು ನೆರೆದಿದ್ದ ಜನರನ್ನು ಉದ್ದೇಶಿಸಿ ಹಾಸ್ಯ ಚಟಾಕಿ ಹಾರಿಸಿದ ಜಿಲ್ಲಾಧಿಕಾರಿಗಳು ಜೀವನದಲ್ಲಿ ಮನುಷ್ಯ ನಗಬೇಕು. ನಕ್ಕಷ್ಟು ಆರೋಗ್ಯದಿಂದ ನೆಮ್ಮದಿಯಿಂದ ಇರುತ್ತೇವೆ ಎಂದರು.
ಪುರುಷನ ಪ್ರತಿಯೊಂದು ಕೆಲಸದಲ್ಲಿ ಮಹಿಳೆ ಬೆನ್ನೆಲುಬಾಗಿ ನಿಂತಿರುತ್ತಾಳೆ. ಜೀವ, ಭಾವ, ಭಾವನೆ, ಧೈರ್ಯ ತುಂಬಿ ಬದುಕು ಕಟ್ಟಿಕೊಡುವವಳು ಹೆಣ್ಣು. ನಾವು ಹೆಣ್ಣನ್ನು ಕಡೆಗಣಿಸಿದರೆ ನಿಂತ ನೀರಾಗುತ್ತೇವೆ. ಮಹಿಳೆ ಮಗನ ಜನನಕ್ಕಾಗಿ ತನ್ನ ಸೌಂದರ್ಯವನ್ನೇ ಕಳೆದುಕೊಳ್ಳುತ್ತಾಳೆ, ಆದರೆ ಮಗ ಒಂದು ಹೆಣ್ಣಿಗಾಗಿ ತಾಯಿಯನ್ನೇ ದೂರ ತಳ್ಳುತ್ತಾನೆ. ಕುಟುಂಬದ ಜ್ಯೋತಿ ಹೆಣ್ಣು. ಇಂತಹ ಹೆಣ್ಣನ್ನು ಗೌರವಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಬೇಕು ಎಂದು ಹೇಳಿದರು.
ಹಾಗೆಯೇ ನೂರು ಮೆದುಳಿಗೆ ಅರಿಯದ ಕೆಲಸ ಒಂದು ತಾಯಿಯ ಮೆದುಳಿಗೆ ಅರಿವಾಗುತ್ತೆ. ಇಂತಹ ತ್ಯಾಗ ಜೀವಿ ತಾಯಿಯನ್ನು ಜೀವ ಇರುವ ತನಕ ಸ್ಮರಿಸಬೇಕು ಎಂದರು.
ಪುರುಷ ಗರ್ಭದಿಂದ ಗೋರಿಯವರೆಗೆ ಹೋಗುವವರೆಗೆ ಆತ ಮಾಡುವ ಪ್ರತಿಯೊಂದು ಕೆಲಸದಲ್ಲಿ ಮಹಿಳೆಯ ಪಾತ್ರ ಅನನ್ಯವಾದದ್ದು. ಇಂತಹ ಮಹಿಳೆಯರನ್ನು ಗೌರವಿಸುವ ಕೆಲಸ ಪುರುಷರಿಂದ ಆಗಬೇಕು ಎಂದು ಸಾಹಿತಿ ಎಂ. ಬಿ. ನಾಗರಾಜ್ ಕಾಕನೂರು ಹೇಳಿದರು.
ಈ ಸಂದರ್ಭದಲ್ಲಿ ಡಿ. ಹೆಚ್. ಪ್ರಕಾಶ್, ರವಿ, ಶಾಂತಕುಮಾರ್, ಕುಬೇರಪ್ಪ, ಗಿರಿಸಿದ್ದಪ್ಪ, ಸಣ್ಣಗೌಡ್ರು, ಮಂಜಪ್ಪ, ಶ್ರೀನಿವಾಸ್, ನಾಗರಾಜಪ್ಪ, ಪೂಜಾರ್ ಮಹೇಶಪ್ಪ, ಸೋಮಶೇಖರಪ್ಪ, ಕಾಕನೂರ್ ನಾಗರಾಜಪ್ಪ, ಮಹಾರುದ್ರಪ್ಪ, ಶೈಲಜಾ ಬಸವರಾಜಪ್ಪ, ಟಿ. ಮಂಜುಳಾ ರಾಜು ಇದ್ದರು.