ಪದ್ಧತಿ ಪ್ರಕಾರವೇ ನೆರವೇರಿದ ಮಹಾಪೂಜೆೆ

ದುಗ್ಗಮ್ಮನ ಜಾತ್ರೆಗೆ ಹರಿದು ಬಂದ ಜನಸಾಗರ, ಹರಕೆ ತೀರಿಸಿದ ಭಕ್ತರು 

ದಾವಣಗೆರೆ, ಮಾ. 16- ನಗರದ ಅಧಿದೇವತೆ ಶ್ರೀ ದುರ್ಗಾಂಬಿಕಾ ದೇವಿಗೆ  ಬುಧವಾರ ಬೆಳಿಗ್ಗೆ ಪದ್ಧತಿಯಂತೆಯೇ `ಮಹಾಪೂಜೆೆ’ ಶಾಂತಿಯುತವಾಗಿ ನೆರವೇರಿತು. 

ಬೆಳಿಗ್ಗೆ ಬಲಿ ಪೂಜೆ ನಂತರ ಬೇಯಿಸಿದ ಜೋಳದ ರಾಶಿಗೆ  ರಕ್ತವನ್ನು ಬೆರೆಸಿ, ಪೂಜೆ ನೆರವೇರಿಸಿ ಚರುಗಕ್ಕೆ ಚಾಲನೆ ನೀಡಲಾಯಿತು. ಗುಡಿಯ ಆವರಣದಿಂದ ಹೊರಟ ಸಾಂಪ್ರದಾಯಿಕ ಮುಖಂಡರ ನೇತೃತ್ವದ ಚರುಗದ ಮೆರವಣಿಗೆ  ಊರ ಗಡಿವರೆಗೂ ತೆರಳಿ ಚರುಗ ಚೆಲ್ಲಿತು.

ಚರುಗ ಮುಂದೆ ಸಾಗಿದಂತೆ, ಉತ್ಸಾಹಿ ಯುವಕರ ದಂಡು ಹುಲಿಗ್ಯೋ ಹುಲಿಗ್ಯೋ ಎಂದು ಕೇಕೆ ಹಾಕುತ್ತಾ, ಆರ್ಭಟಿಸುತ್ತಾ ಬೇಯಿಸಿದ ಜೋಳದ ಕಾಳನ್ನು  ಪುಟ್ಟ-ಪುಟ್ಟ ಬುಟ್ಟಿಗಳಲ್ಲಿ  ತುಂಬಿಕೊಂಡು ದೇವಸ್ಥಾನ ಆವರಣದಿಂದ  ಚರುಗದವರೆಗೂ ಓಡುತ್ತ ಹೋಗಿ  ದೊಡ್ಡ ಬುಟ್ಟಿಗೆ   ಸುರುವುತ್ತಾರೆ.  ಜಾತ್ರೆಯ  ಮುಖ್ಯ ಆಕರ್ಷಣೆ ಯಾಗಿರುವ ಈ ಚರುಗವನ್ನು ಕಣ್ತುಂಬಿಕೊಳ್ಳಲು ಜನತೆ ಕಾತರದಿಂದ ಕಾಯುತ್ತಿರುತ್ತದೆ.

ಹೀಗೆ ಚರುಗ ಚೆಲ್ಲುವ ಮೂಲಕ ಊರಿನಲ್ಲಿ ದುಷ್ಟಶಕ್ತಿಗಳನ್ನು ದೂರ ಮಾಡಿ, ಮಳೆ-ಬೆಳೆ ಸಮೃದ್ಧಿಯಾಗಿ ಕೊಡು ಶಾಂತಿ, ನೆಮ್ಮದಿ ಕರುಣಿಸು ಎಂದು ಶ್ರೀ ದುರ್ಗಾ ಮಾತೆಯನ್ನು ಪ್ರಾರ್ಥಿಸಲಾಯಿತು. 

ಅತ್ತ ಚರುಗ ಸಾಗುತ್ತಲೇ ನಗರದ ನಾಲ್ಕೂ ದಿಕ್ಕುಗಳಿಂದಲೂ ಜನರು  ದಂಡು-ದಂಡಾಗಿ  ಭಕ್ತಿಪರವಶರಾಗಿ, ಅಮ್ಮನ ನಾಮಸ್ಮರಣೆ ಮಾಡುತ್ತಾ   ಹರಕೆಯಂತೆ, ತಲೆಯ ಮೇಲೆ ದೀಪ ಹೊತ್ತವರು, ತುಂಬಿದ ಕೊಡವನ್ನು ತಲೆ ಮೇಲೆ ಹೊತ್ತವರು, ಬೇವಿನ ಉಡುಗೆ ಧರಿಸಿದವರು, ಉರುಳು ಸೇವೆ ಮತ್ತು ದೀಡು ನಮಸ್ಕಾರ ಹಾಕುವವರು ಸಾಗರೋಪಾದಿಯಲ್ಲಿ ದೇವಸ್ಥಾನಕ್ಕೆ ತೆರಳುತ್ತಿದ್ದ  ದೃಶ್ಯ ನೋಡಿದರೆ,  ಭಕ್ತರು ಅಮ್ಮನ ಮೇಲಿಟ್ಟಿರುವ ಅಪಾರ ನಂಬಿಕೆಗೆ ಸಾಕ್ಷಿ  ಎನ್ನುವಂತಿತ್ತು.    

ದೇವಸ್ಥಾನದ ಸುತ್ತ-ಮುತ್ತ ಎಲ್ಲಿ ನೋಡಿದರೂ ಭಕ್ತಾದಿಗಳೇ ತುಂಬಿದ್ದರು.  ಬೇವಿನ ಸೊಪ್ಪಿನ ರಾಶಿ  ಮತ್ತು  ಬೇವಿನುಡಿಗೆ, ದೀಡು ನಮಸ್ಕಾರ  ಹಾಕುವ ಭಕ್ತರು ಬಿಟ್ಟ ಬಟ್ಟೆಗಳ ರಾಶಿಯೇ  ಅಲ್ಲಿ ಕಂಡು ಬರುತ್ತಿತ್ತು.  

ನಿನ್ನೆಯಂತೆ ಇಂದೂ  ಸಹ ಅಮ್ಮನ ದರ್ಶನಕ್ಕೆ ಜನ ಸಾಗರವೇ ಹರಿದುಬಂದಿತ್ತು.  ಬಿಸಿಲು ಹೆಚ್ಚಾಗುವ ಕಾರಣದಿಂದ ಬಹುತೇಕ ಜನರು ನಸುಕಿನಿಂದಲೇ ದೇವಸ್ಥಾನಕ್ಕೆ ಬಂದು ಹರಕೆ ಸೇವೆ ಸಲ್ಲಿಸಲು  ಮುಂದಾಗಿದ್ದುದನ್ನು ಕಾಣಬಹುದಾಗಿತ್ತು. ಆದರೆ ಬಿಸಿಲು ಏರುತ್ತಾ ಬಂದರೂ ಭಕ್ತರ ಹರವು ಕಡಿಮೆಯಾಗಿರಲಿಲ್ಲ. 

ನಗರ,  ಅದರಲ್ಲಿಯೂ ಹಳೇ ಭಾಗದ ಜನ ಹಬ್ಬವನ್ನು ಆಚರಿಸುವ ಜೊತೆಗೆ ಅಮ್ಮನಿಗೆ ಕುರಿ, ಕೋಳಿಗಳ ಬಲಿ ನೀಡಿ ಮನೆಗೆ ಬಂದಂತಹ ನೆಂಟರು ಮತ್ತು ಬಂಧು ಮಿತ್ರರಿಗೆ ಊಟದ ವ್ಯವಸ್ಥೆ ಮಾಡಿದ್ದರು.  ಇದಕ್ಕಾಗಿ ಬಹಳಷ್ಟು ಕಡೆ ಶಾಮಿಯಾನ ಹಾಕಲಾಗಿತ್ತು. ಹಳೇ ಊರ ತುಂಬಾ ಮಸಾಲೆಯದೇ ಘಮಘಮ. 

ಮಸಾಲೆ ರುಬ್ಬುವ ಮಳಿಗೆಗಳಲ್ಲಿ ಸರತಿ ಸಾಲು ದೆೊಡ್ಡದಿತ್ತು. ಮಾಂಸದ ಅಂಗಡಿಗಳಂತೂ ಜನರಿಂದ ತುಂಬಿ ತುಳುಕುತ್ತಿದ್ದವು. ಕುರಿ ಹಲಾಲ್ ಮಾಡುವವರು, ಚರ್ಮ ಖರೀದಿಸುವವರು, ಕುರಿ ತಲೆ ಸುಟ್ಟು ಕೊಡುವ  ಜನರ ವಹಿವಾಟು ಜೋರಾಗಿಯೇ ನಡೆದಿತ್ತು.  ಮದ್ಯದಂಗಡಿಗಳೂ ಭರ್ತಿಯಾಗಿದ್ದವಲ್ಲದೇ ಹೊರಗಡೆ ಶಾಮಿಯಾನದ ವ್ಯವಸ್ಥೆಯನ್ನೂ ಸಹ ಬಾರ್‌ನವರು ಮಾಡಿದ್ದರು. 

ದೇವಸ್ಥಾನ ಸಮಿತಿಯವರು ಸಾಕಷ್ಟು ಅಗತ್ಯ ಸೌಲಭ್ಯ ಕಲ್ಪಿಸಿದ್ದರು. ಅಲ್ಲದೇ ಪೊಲೀಸ್‌ ಇಲಾಖೆ  ಸೂಕ್ತ ಭದ್ರತೆ ಮತ್ತು ವಾಹನಗಳ ಪಾರ್ಕಿಂಗ್ ವ್ಯವಸ್ಥೆಯಿಂದಾಗಿ  ಭಕ್ತಾಧಿಗಳಿಗೆ ನೂಕು ನುಗ್ಗಲಿನ ಪ್ರಮೇಯ  ಈ ಬಾರಿ ಬರಲಿಲ್ಲ ಎಂಬ ಮಾತುಗಳು ಕೇಳಿ ಬಂದವು.

error: Content is protected !!