ದಾವಣಗೆರೆ ದುಗ್ಗಮ್ಮನ ಜಾತ್ರೆಗೆ ವಿಧ್ಯುಕ್ತ ಚಾಲನೆ

ದಾವಣಗೆರೆ, ಮಾ.13- ನಗರ ದೇವತೆ ದುಗ್ಗಮ್ಮನ ಜಾತ್ರೆಗೆ ವಿಧ್ಯುಕ್ತವಾಗಿ ಚಾಲನೆ ದೊರೆತಿದೆ. ಭಾನುವಾರ ಬೆಳಿಗ್ಗೆ ದೇವಿಗೆ ಪಂಚಾಮೃತ ಅಭಿಷೇಕ, ಕಂಕಣಧಾರಣೆ, ಪೂಜೆ ಸಲ್ಲಿಸುವ ಮೂಲಕ ಜಾತ್ರೆಗೆ ಚಾಲನೆ ನೀಡಲಾಯಿತು.‌

ಚಿನ್ನದ ಕಿರೀಟ, ಚಿನ್ನದ ಕಂಠಿಹಾರ, ವಜ್ರದ ಹರಳಿನ ಸರ… ಹೀಗೆ ಚಿನ್ನಾಭರಣಗಳಿಂದ ದೇವಿಯನ್ನು ಅಲಂಕರಿಸಲಾಗಿತ್ತು. ಬೆಳಿಗ್ಗೆಯಿಂದಲೇ ನೂರಾರು ಭಕ್ತರು ದೇವಿಗೆ ವಿಶೇಷ ಪೂಜೆ ಸಲ್ಲಿಸಿ, ದರ್ಶನ ಪಡೆದರು.

ಧರ್ಮದರ್ಶಿ ಗೌಡ್ರ ಚನ್ನಬಸಪ್ಪ, ದೇವಸ್ಥಾನದ ಟ್ರಸ್ಟಿಗಳು, ಗೌಡ್ರು, ಶಾನುಭೋಗರು, ರೈತರು, ಬಣಕಾರರು, ಬಾಬುದಾರರು, ಕಾರ್ಯಕರ್ತರ ಉಪಸ್ಥಿತಿಯಲ್ಲಿ ಅರ್ಚಕ ನಾಗರಾಜ ಜೋಯಿಸರು ಧಾರ್ಮಿಕ ಕಾರ್ಯಕ್ರಮ ನೆರವೇರಿಸಿದರು.

ರಾತ್ರಿ 9ಕ್ಕೆ ಪಟ್ಟದ ಕೋಣ ಸಾರುವ ಕಾರ್ಯಕ್ರಮ ಆರಂಭಗೊಂಡಿತು. ಗಾಂಧಿನಗರದಿಂದ ಮೆರವಣಿಗೆಯಲ್ಲಿ ಕೋಣವನ್ನು ತರಲಾಯಿತು. ಶಾಮನೂರು ಮನೆ, ಗೌಡ್ರ ಕಳಸಪ್ಪನವರ
ಮನೆ, ಗೌಡ್ರ ಅಜ್ಜಪ್ಪನವರ ಮನೆ, ರಾಮಜ್ಜರ ವೆಂಕಟೇಶಪ್ಪರ ಮನೆ, ದೇವರಹಟ್ಟಿ ಗೌಡರ ಮನೆ ಹೀಗೆ ಐದು ಮನೆಗಳಿಗೆ ಹೋಗಿ ಪೂಜೆ ಮಾಡಿಸಿಕೊಂಡು, ಆರತಿ ಎತ್ತಿಸಿಕೊಂಡು ದೇವಸ್ಥಾನಕ್ಕೆ ಬರಲಾಯಿತು. ಕೋಣವನ್ನು ಕೂಡಿ ಹಾಕಿ ಬೀಗ ಹಾಕಲಾಯಿತು.

ಸೋಮವಾರ ಐದು ಮನೆಗಳ ಮುತ್ತೈದೆಯರಿಗೆ ಒಂದೊತ್ತು ಇಡುವ ಕಾರ್ಯ ನಡೆಯಲಿದೆ. ಅವರು ಉಪವಾಸ ಇದ್ದು ಮಂಗಳವಾರ ರಾತ್ರಿ ಅಡುಗೆ ಮಾಡಿ ತರಲಿದ್ದಾರೆ. ದೇವಿಗೆ ಚರಗ ಅರ್ಪಿಸಿದ ಬಳಿಕ ಅವರು ಉಪವಾಸ ಕೈ ಬಿಡಲಿದ್ದಾರೆ. 

ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ, ತಹಶೀಲ್ದಾರ್‌, ಪಾಲಿಕೆ ಆಯುಕ್ತರ ಸಹಿತ ಅಧಿಕಾರಿಗಳ ಸಮಕ್ಷಮದಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ಕೋಣದ ರಕ್ತವನ್ನು ಸಿರಿಂಜ್‌ ಮೂಲಕ ತೆಗೆದು ಚರಗಕ್ಕೆ ಹಾಕಿದ ಬಳಿಕ ಕೋಣವನ್ನು ಬಿಟ್ಟು ಬಿಡಲಾಗುತ್ತದೆ ಎಂದು ಗೌಡ್ರ ಚನ್ನಬಸಪ್ಪ ತಿಳಿಸಿದ್ದಾರೆ.

error: Content is protected !!