ದಾವಣಗೆರೆ ಅಧಿದೇವತೆ ಶ್ರೀ ದುರ್ಗಾಂಬಿಕಾ ದೇವಿ `ಮಹಾಪೂಜೆ’ಗೆ ಕ್ಷಣಗಣನೆ
ದೇವಾಲಯಗಳ ನಗರವೆಂದೇ ಖ್ಯಾತಿವೆತ್ತ ಮಧ್ಯ ಕರ್ನಾಟಕದ ವಾಣಿಜ್ಯ ನಗರಿ ದಾವಣಗೆರೆಯ ಅಧಿದೇವತೆ ಶ್ರೀ ದುರ್ಗಾಂಬಿಕಾ ದೇವಿಯ ಸಡಗರ, ಸಂಭ್ರಮದ ಜಾತ್ರೆಗೆ ಕ್ಷಣಗಣನೆ ಆರಂಭವಾಗಿದೆ.
ದುಗ್ಗಮ್ಮನ ಜಾತ್ರೆಯೆಂದರೆ ಅದೊಂದು ಬಹುದೊಡ್ಡ ಹಬ್ಬ. ಅಮ್ಮನ ದರ್ಶನ ಪಡೆದು, ಹರಕೆ ತೀರಿಸಲು ಜನಸಾಗರವೇ ಹರಿದುಬರುತ್ತದೆ. ಕಳೆದ ಎರಡು ವರ್ಷಗಳ ಹಿಂದೆ ಬೃಹತ್ತಾದ ನವದುರ್ಗಿಯರ ಭವ್ಯ ಮಹಾಮಂಟಪದಲ್ಲಿ ಕಂಗೊಳಿಸಿದ್ದ ಅಮ್ಮನ ಹಬ್ಬದ ಪೂಜಾ ಕಾರ್ಯಕ್ರಮಗಳು ಸುಗಮವಾಗಿ ಜರುಗಿ, ಇನ್ನೇನು ಜಾತ್ರೆ ಮತ್ತು ವೇದಿಕೆ ಕಾರ್ಯಕ್ರಮದ ನಿರೀಕ್ಷೆಯಲ್ಲಿದ್ದ ಜನರಿಗೆ ಮಹಾಮಾರಿ ಕೊರೊನಾ ವೈರಸ್ ಬರಸಿಡಿಲಿನಂತೆ ಬಂದೆರಗಿತ್ತು. ಹೀಗಾಗಿ ಜಾತ್ರಾ ಕಾರ್ಯಕ್ರಮದ ಸಂಭ್ರಮ ಅರ್ಧಕ್ಕೇ ಮೊಟಕುಗೊಂಡು, ಭಕ್ತಾದಿಗಳು ನಿರಾಸೆಗೊಂಡಿದ್ದರು
ಅದೇ ಕೊರೊನಾ ಕಾರಣದಿಂದಲೇ ಈ ವರ್ಷವೂ ಹಬ್ಬ ನಡೆಯುವುದಿಲ್ಲ ಎಂದೇ ಭಾವಿಸಲಾಗಿತ್ತು. ಆದರೆ ರಾಜ್ಯದಾದ್ಯಂತ ಸೋಂಕು ತುಸು ಇಳಿಮುಖವಾಗತೊಡಗಿದಾಗ ದುಗ್ಗಮ್ಮನ ಜಾತ್ರೆಯ ಕನಸು ನನಸಾಗುವ ಪ್ರೇರಣೆ ಆಯಿತು.
ಅಲ್ಲದೆ ರಾಜ್ಯದ ಅನೇಕ ಪ್ರಸಿದ್ಧ ಜಾತ್ರೆಗಳನ್ನು ಕೋವಿಡ್ ನೀತಿ ಸಂಹಿತೆ ಅಡಿ ರದ್ದು ಮಾಡಿದ್ದರೂ ಸಹ ಭಕ್ತರ ಹರವಿಗೆ ತಡೆಹಾಕಲು ಯಾರಿಂದಲೂ ಸಾಧ್ಯವಾಗಲಿಲ್ಲ. ಎಲ್ಲಾ ಜಾತ್ರೆಗಳು, ರಥೋತ್ಸವಗಳು ಸಂಭ್ರಮದಿಂದಲೇ ಜರುಗಿರುವುದನ್ನು ನಾವು ಕಾಣಬಹುದು.
ಹೀಗಾಗಿ ದುರ್ಗಾಂಬಿಕ ದೇವಸ್ಥಾನ ಧರ್ಮದರ್ಶಿಗಳ ಸಮಿತಿ ಸಭೆಯು ಟ್ರಸ್ಟ್‌ನ ಅಧ್ಯಕ್ಷರೂ ಆದ ಶಾಸಕ ಡಾ. ಶಾಮನೂರು ಶಿವಶಂಕರಪ್ಪನವರ ಅಧ್ಯಕ್ಷತೆಯಲ್ಲಿ ಸಭೆ ಸೇರಿ ಚರ್ಚೆ ನಡೆಸಿ ಹಬ್ಬವನ್ನು ಆಚರಿಸುವ ತೀರ್ಮಾನ ತೆಗೆದುಕೊಂಡು ದಿನಾಂಕವನ್ನು ನಿಗದಿಪಡಿಸಿತು. ಮುಂಜಾಗ್ರತಾ ಕ್ರಮಗಳ ಪಾಲನೆ ಜೊತೆಗೆ ಈ ಬಾರಿ ಸರಳವಾಗಿ, ಸಂಭ್ರಮದಿಂದ ಹಬ್ಬ ಆಚರಿಸಲು ನಿರ್ಧರಿಸಲಾಯಿತು.
ರಾರಾಜಿಸುತ್ತಿರುವ ಫ್ಲೆಕ್ಸ್‌ಗಳು: ಹಬ್ಬದ ದಿನಾಂಕ ನಿಗದಿಯಾಗುತ್ತಲೇ, ದುಗ್ಗಮ್ಮನ ಜಾತ್ರೆ ಅಂಗವಾಗಿ ದಾವಣಗೆರೆಗೆ ಆಗಮಿಸುವ ಎಲ್ಲಾ ಭಕ್ತಾದಿಗಳಿಗೆ ಸ್ವಾಗತ ಕೋರುವ ಪ್ಲೆಕ್ಸ್‌ಗಳು ಎಲ್ಲೆಲ್ಲೂ ರಾರಾಜಿಸತೊಡಗಿವೆ.
ವಿವಿಧ ಪಕ್ಷಗಳ ಮುಖಂಡರು, ಕಾರ್ಯಕರ್ತರು, ವರ್ತಕರು, ತಮ್ಮ ತಮ್ಮ ಭಾವಚಿತ್ರಗಳನ್ನು ಹಾಕಿಕೊಂಡು ಸ್ವಾಗತ ಕೋರುವ ದೊಡ್ಡ ದೊಡ್ಡ ಪ್ಲೆಕ್ಸ್‌ಗಳು ನಗರದ ಎಲ್ಲ ಕಡೆಯೂ ಆಯಕಟ್ಟಿನ ಸ್ಥಳಗಳಲ್ಲಿ ಕಂಡುಬರುತ್ತಿವೆ.
ಊರಿನ ಜನತೆ, ಅದರಲ್ಲೂ ಹಳೆ ಭಾಗದ ಜನ ಭಯ-ಭಕ್ತಿಯಿಂದ ಹಬ್ಬದ ತಯಾರಿ ನಡೆಸಿದ್ದಾರೆ. ಹಬ್ಬದ ಸಿದ್ಧತೆಗಳು ಅಂತಿಮ ಘಟ್ಟ ತಲುಪಿದ್ದು, ಅಮ್ಮನ ವಿಶೇಷ ಪೂಜೆ ಮತ್ತು ಮಹಾಪೂಜೆಯನ್ನು ಕಣ್ತುಂಬಿಕೊಳ್ಳಲು ಅಪಾರ ಭಕ್ತಗಣ, ಕಾತುರದಿಂದ ಕಾಯುತ್ತಿದೆ. ಮುಖ್ಯವಾಗಿ ಹಬ್ಬದ ಸಂಭ್ರಮವನ್ನು ಹಳೇ ಊರಿನಲ್ಲಿಯೇ ಕಾಣಬೇಕು.
ದುಗ್ಗಮ್ಮನ ದೇಗುಲವಿರುವ ಶಿವಾಜಿನಗರದ ಹಳೇಪೇಟೆ ಎಂದರೆ ಅದು ದೇವಾಲಯಗಳ ಸಂಗಮ ಕೇಂದ್ರ. ಅನೇಕ ಪುರಾತನ ದೇವಾಲಯಗಳು ಇಲ್ಲಿ ನೆಲೆಗೊಂಡಿವೆ. ನಿತ್ಯವೂ ಪೂಜಾ ಕಾರ್ಯಗಳು ಶ್ರದ್ದಾ ಭಕ್ತಿಯಿಂದ ನಡೆಯುತ್ತವೆ. ದೇವಾಲಯಗಳ ನಗರವೆಂಬ ಹೆಗ್ಗಳಿಕೆಗೆ ದಾವಣಗೆರೆ ಪಾತ್ರವಾಗುವಲ್ಲಿ ಈ ಭಾಗದ ಜನರ ಕೊಡುಗೆಯೂ ಅಪಾರ.
ಎರಡು ವರ್ಷ ತುಂಬಿ ಮೂರಕ್ಕೆ ಬೀಳುತ್ತಲೇ ಆಚರಿಸಲಾ ಗುವ ಹಬ್ಬಕ್ಕೆ ರಾಜ್ಯದ ಬಹುತೇಕ ಎಲ್ಲ ಜಿಲ್ಲೆಗಳಿಂದಲೂ, ಅಲ್ಲದೆ ಪಕ್ಕದ ರಾಜ್ಯಗಳಿಂದಲೂ ಸಹ ಭಕ್ತಾದಿಗಳು ಆಗಮಿಸಿ ಅಮ್ಮನ ದರ್ಶನ ಪಡೆದು ಹರಕೆಗಳನ್ನು ಪೂರೈಸಿ ಕೃತಾರ್ಥರಾಗುತ್ತಾರೆ. ಅದರಲ್ಲೂ ಆಂಧ್ರ ಪ್ರದೇಶ ಮತ್ತು ಮಹಾರಾಷ್ಟ್ರದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಾರೆ.
ಪದ್ಧತಿ ಪ್ರಕಾರ ಎಲ್ಲಾ ಸಿದ್ಧತೆಗಳು ಪೂರ್ಣಗೊಂಡಿವೆ ದೇವಸ್ಥಾನದ ಮುಂಭಾಗದಲ್ಲಿ ಆಕರ್ಷಕವಾಗಿ ಪೆಂಡಾಲು ಮತ್ತು ವಿದ್ಯುತ್ ದೀಪಾಲಂಕಾರ ಮತ್ತು ಅಮ್ಮನ ದರ್ಶನ ಪಡೆಯಲು ಅನುವಾಗುವಂತೆ ಮೆಟ್ಟಿಲುಗಳನ್ನು ನಿರ್ಮಿಸಲಾಗಿದೆ. ದೇವಸ್ಥಾನದ ಸುತ್ತ ಉರುಳು ಸೇವೆ, ದೀಡು ನಮಸ್ಕಾರ ಹಾಕುವ ಭಕ್ತಾದಿಗಳಿಗೆ ಅಗತ್ಯವಾದ ಎಲ್ಲ ಅನುಕೂಲಗಳನ್ನು ಶ್ರೀ ದುರ್ಗಾಂಬಿಕಾ ದೇವಿ ದೇವಸ್ಥಾನದ ಸಮಿತಿ ಮಾಡಿದೆ.
ಭಾನುವಾರ ‘ಸಾರು’ ಹಾಕುವ ಕಾರ್ಯಕ್ರಮ : ಇದೇ 13ರ ಭಾನುವಾರ ‘ಸಾರು’ ಹಾಕುವುದರೊಂದಿಗೆ ಹಬ್ಬದ ಪೂಜಾ ಕೈಂಕರ್ಯಗಳು ವಿಧ್ಯುಕ್ತವಾಗಿ ಆರಂಭವಾಗುತ್ತವೆ. ಹರಕೆಯ ಕೋಣವನ್ನು ಗೌಡ್ರುಮನೆ, ಬಣಕಾರ ಮನೆ, ಪುರುವಂತರ ಮನೆ, ತಳವಾರರ ಮನೆ, ಹಟ್ಟೇರ ಮನೆ, ಕಳಸಪ್ಪನವರ ಮನೆ ಸೇರಿದಂತೆ ನೇಮ ಇರುವ ಮನೆಗಳಿಗೆ ಕರೆದೊಯ್ಯಲಾಗುತ್ತದೆ. ಈ `ಸಾರು’ಹಾಕುವ ಕಾರ್ಯ, ಪದ್ಧತಿ ಪ್ರಕಾರವೇ ನಡೆಯಬೇಕು ಮಾರ್ಗ ಬದಲಿಸುವಂತಿಲ್ಲ ಎಂಬುದು ಬಹು ಹಿಂದಿನಿಂದಲೂ ನಡೆದುಬಂದ ಪದ್ದತಿ.
`ಸಾರು’ ಹಾಕಿದ ನಂತರ ಊರಿನ ಗಡಿಯೊಳಗೆ ಪರಸ್ಥಳ ದಿಂದ ಯಾರೂ ಬರುವಂತಿಲ್ಲ ಮತ್ತು ಇಲ್ಲಿಂದ ಗಡಿ ದಾಟಿ ಹೋಗುವಂತಿಲ್ಲ ಎಂಬ ಕಟ್ಟುಪಾಡು ಇದೆ. ಈ ಕಾರಣಕ್ಕೆ ಭಾನುವಾರದ ಒಳಗಾಗಿಯೇ ಪರ ಊರಿನ ಭಕ್ತಾದಿಗಳು ನಗರಕ್ಕೆ ಆಗಮಿಸಿ ಬಂಧುಗಳು ಮತ್ತು ನೆಂಟರಿಷ್ಟರ ಮನೆಯಲ್ಲಿ ಅಥವಾ ವಸತಿ ಗೃಹಗಳಲ್ಲಿ, ದೇವಸ್ಥಾನ ಸಮಿತಿ ವ್ಯವಸ್ಥೆ ಮಾಡಿರುವ ಸ್ಥಳಗಳಲ್ಲಿ ತಂಗುತ್ತಾರೆ.
ಬದಲಾದ ಕಾಲಕ್ಕೆ ತಕ್ಕಂತೆ ಈಗಿನ ಯುವ ಪೀಳಿಗೆಯಲ್ಲಿನ ಧಾರ್ಮಿಕ ಮನೋಭಾವ ಬದಲಾದಂತೆ ಪುರಾತನ ಪದ್ಧತಿ, ಆಚರಣೆಗಳೂ ಸಹ ಬಹಳಷ್ಟು ಬದಲಾವಣೆ ಕಾಣುತ್ತಾ ಸಾಗಿವೆ. ಆದರೆ ಅಮ್ಮನ ಮೇಲಿನ ಭಯ-ಭಕ್ತಿ, ನಂಬಿಕೆ ಕೊಂಚವೂ ಕಡಿಮೆಯಾಗಿಲ್ಲ. ಬದಲಾಗಿ ಭಕ್ತರ ಸಂಖ್ಯೆ ಮತ್ತು ವ್ಯಾಪ್ತಿ ಇನ್ನೂ ವಿಸ್ತರಿಸುತ್ತಲೇ ಸಾಗಿದೆ. ಜಗದಂಬೆ ಜಾತ್ರೆ ಜೊತೆಗೆ ಅಮ್ಮನ ದೇವಸ್ಥಾನಗಳಿರುವ ನಗರದ ಅನೇಕ ಕಡೆ ಇರುವ ವಿವಿಧ ದೇವತೆಗಳ ದೇವಸ್ಥಾನಗಳಲ್ಲಿ ವಿಶೇಷ ಪೂಜೆಗಳು ನೆರವೇರುತ್ತವೆ. ವಿನೋಬನಗರ, ಗಾಂಧಿನಗರ, ಮ್ಯಾಸಬೇಡರ ಕೇರಿ, ದೇವರಾಜ ನಗರ, ಚೌಡೇಶ್ವರಿ ನಗರ, ಮತ್ತಿತರೆಡೆ ಮೂಲ ದೇವಸ್ಥಾನದ ಪದ್ಧತಿ ಪ್ರಕಾರವೇ ಮಹಾಪೂಜೆ ಕಾರ್ಯಕ್ರಮಗಳು ಜರುಗುತ್ತವೆ.
ಹೋಳಿಗೆ ಪ್ರಿಯಳಾದ ಅಮ್ಮ : ಮಂಗಳವಾರ ದುಗ್ಗಮ್ಮನ `ಎಡೆ ಜಾತ್ರೆ’. ಹೋಳಿಗೆ, ಅನ್ನ-ಮೊಸರು ಪ್ರಿಯಳಾದ ಅಮ್ಮನಿಗೆ ಎಡೆ ಸಲ್ಲಿಸುತ್ತಾರೆ. ವಿಶೇಷವೆಂದರೆ ಮಂಗಳವಾರದ ಅಮ್ಮನ ದರ್ಶನಕ್ಕೆ ಸೋಮವಾರ ಮಧ್ಯರಾತ್ರಿಯಿಂದಲೇ ಸರತಿಯ ಸಾಲಲ್ಲಿ ನಿಂತು ಎಡೆ, ಉಡಕ್ಕಿ, ಬಳೆ, ಕಣ, ಹೂವು ಅರಿಶಿಣ-ಕುಂಕುಮ ಇತ್ಯಾದಿ ಅರ್ಪಿಸಿ, ಕಟ್ಟಿಕೊಂಡ ಹರಕೆ ಸಲ್ಲಿಸಿ ಧನ್ಯತಾಭಾವ ಹೊಂದುತ್ತಾರೆ. ಈ ಸಾಲು, ದೇವಸ್ಥಾನದ ಬಳಿಯಿಂದ ಶ್ರೀ ಕನ್ಯಕಾಪರಮೇಶ್ವರಿ ದೇವಸ್ಥಾನ ರಸ್ತೆಯನ್ನು ದಾಟಿ, ದೊಡ್ಡಪೇಟೆಯ ವಿರಕ್ತಮಠ ಸನಿಹ ಇರುತ್ತದೆ.
ಸಂಜೆ ಶ್ರೀ ಮಹಿಷಾಸುರ ಮರ್ದಿನಿ ಮೂರ್ತಿಯ ಅಲಂಕೃತ ಉತ್ಸವ ಸಕಲ ವಾದ್ಯ ಮೇಳಗಳೊಂದಿಗೆ ನಗರದ ಮುಖ್ಯ ಬೀದಿಗಳಲ್ಲಿ ಸಂಚರಿಸುತ್ತದೆ. ರಾತ್ರಿಯಾಗುತ್ತಲೇ ಗುಡಿಯ ಮುಂಭಾಗ ಯುವಕರ ಆರ್ಭಟ, ಕೂಗಾಟ, ಚೀರಾಟ ಮತ್ತು ಕೇಕೆ ಹಾಕುವ ಭಯಂಕರ ಶಬ್ದ ತಡರಾತ್ರಿಯವರೆಗೂ ಕಂಡುಬರುತ್ತದೆ. ಈ ಕೂಗಾಟ ಚೀರಾಟ ನಗರದ ಇತರೆಡೆಗಳಲ್ಲಿ ಇರುವ ಅಮ್ಮನ ದೇವಸ್ಥಾನಗಳ ಬಳಿಯೂ ಇರುತ್ತದೆ.
ಬಿಸಿ ರಕ್ತದ ಯುವಕರು ತೆಂಗಿನ ಕಾಯಿಗಳನ್ನು ಗುಡಿಯ ಬಲಭಾಗದಲ್ಲಿರುವ ಕಲ್ಲಿನ ಗೋಡೆಗೆ ಬೀಸಿ-ಬೀಸಿ ಹೊಡೆದು, ಕೇಕೆ ಹಾಕುತ್ತಾ, ದುಗ್ಗಮ್ಮನಿಗೆ ಜೈಕಾರ ಹಾಕುತ್ತಾರೆ. ಇದು ನಸುಕಿನವರೆಗೂ ನಡೆಯುತ್ತಲೇ ಇರುತ್ತದೆ. ಕತ್ತಲು-ಬೆಳಕಿನಾಟದಲ್ಲಿ `ಮಹಾಬಲಿ’ಯದೇ ಗುಸು-ಗುಸು. `ಅಲ್ಲಂತೆ-ಇಲ್ಲಂತೆ’. ದೇವಸ್ಥಾನದ ಸುತ್ತ-ಮುತ್ತಲೂ ಪೋಲೀಸರ ಸರ್ಪಗಾವಲು ಇದ್ದರೂ, ಎಲ್ಲೋ ಒಂದು ಕಡೆ `ಘಟಿಸಿ’ಯೇ ತೀರುತ್ತದೆ ಎಂಬುದು ಭಕ್ತರ ಗಾಢ ನಂಬಿಕೆ.
ಹೀಗೆ ರಾತ್ರಿಯಿಡೀ ಒಡೆದ ತೆಂಗಿನ ಕಾಯಿಗಳ ಕೊಬ್ಬರಿ ತುಂಡುಗಳನ್ನು ಬೆಳಿಗ್ಗೆ ಬೇಯಿಸಿದ ಜೋಳದ ರಾಶಿಗೆ, ಬಲಿ ಕೋಣದ ರಕ್ತದ ಜೊತೆಗೆ ಮಿಶ್ರಣ ಮಾಡಲಾಗುತ್ತದೆ. ಅಲ್ಲದೆ ಭಕ್ತರು ತಂದಂತಹ ಅನ್ನ ಮತ್ತು ಹೋಳಿಗೆ ಎಡೆಯನ್ನು ಸಹ ಚರುಗದ ರಾಶಿಯ ಮೇಲೆ ಹರಡಲಾಗುತ್ತದೆ.
ಚರುಗದ ಆರ್ಭಟ: ಸೂರ್ಯೋದಯಕ್ಕೂ ಮುನ್ನವೇ `ಮಹಾಪೂಜೆ’ ಆಗುತ್ತಲೇ ಚರಗ ಚೆಲ್ಲುವ ಕಾರ್ಯ ಆರಂಭವಾಗುತ್ತದೆ. ತಲೆಗೆ ವಸ್ತ್ರ ಸುತ್ತಿಕೊಂಡ ಯುವಕರು ಹಣೆ ಮುಖಕ್ಕೆಲ್ಲ ರಕ್ತದ ಕಲೆಯಂತೆ ಕುಂಕುಮ ಹಚ್ಚಿಕೊಂಡು ತಲೆಯ ಮೇಲೆ ಬುಟ್ಟಿ ಹೊತ್ತುಕೊಂಡು, ಹುಲಿಗ್ಯೋ, ಹುಲಿಗ್ಯೋ ಎಂದು ಕೇಕೆ ಹಾಕುತ್ತಾ, ಊರ ಗಡಿವರೆಗೂ ಚರಗ ಚೆಲ್ಲುತ್ತಾರೆ. ಹೀಗೆ ಚರಗ ಚೆಲ್ಲುವುದರಿಂದ ಊರಲ್ಲಿ ಶಾಂತಿ, ನೆಮ್ಮದಿ ಉಂಟಾಗುತ್ತದೆ. ದುಷ್ಟಶಕ್ತಿಗಳು ದೂರವಾಗುತ್ತವೆ ಎಂಬ ನಂಬಿಕೆ ಅನೂಚಾನವಾಗಿ ನಡೆದುಕೊಂಡುಬಂದಿದೆ.
ಜಾತ್ರೆಯಲ್ಲಿ ಒಬ್ಬೊಬ್ಬರದು ಒಂದೊಂದು ಜವಾಬ್ದಾರಿ. ರೈತರು ಧಾನ್ಯ ನೀಡಿದರೆ, ಕುಂಬಾರರು ಮಡಿಕೆಗಳನ್ನು, ಮೇದಾರರು ಬುಟ್ಟಿಗಳನ್ನು ಹೊಸದಾಗಿ ತಯಾರಿಸಿ ನೀಡುತ್ತಾರೆ. ಅವರವರ ಪಾಲಿಗೆ ಬಂದ ಕೆಲಸಗಳನ್ನು ಚಾಚೂ ತಪ್ಪದಂತೆ, ಲೋಪವಾಗದಂತೆ ಜಾಗೃತಿ ವಹಿಸುತ್ತಾರೆ.
ಕಡಿದ ಬಲಿ ಕೋಣದ ತಲೆಗೆ ‘ಘಟ’ ಎನ್ನಲಾಗುತ್ತದೆ. ಅದನ್ನು ಗಾಂಧಿನಗರದಿಂದ ದುಗ್ಗಮ್ಮನ ದೇವಸ್ಥಾನದ ಬಳಿ ತಂದು ಪೂಜಿಸಿದ ನಂತರ, ಚರಗ ಆರಂಭಿಸಲಾಗುತ್ತಿತ್ತು. `ಘಟ’ವನ್ನು ಬೇವಿನ ಸೊಪ್ಪಿರುವ ಬುಟ್ಟಿಯಲ್ಲಿ ಇಟ್ಟು ತಲೆಯ ಮೇಲೆ ಹೊತ್ತುಕೊಂಡು, ಕೈಯ್ಯಲ್ಲಿ ಆಯುಧಗಳನ್ನು ಹಿಡಿದುಕೊಂಡು ಭಯಂಕರವಾಗಿ ಕಾಣುತ್ತಾ, ಚರಗ ಚೆಲ್ಲಲಾಗುತ್ತಿತ್ತು. ಆದರೆ ಈಗ ಅದಕ್ಕೆ ಅವಕಾಶ ಇಲ್ಲದೇ ಇರುವ ಕಾರಣ ಬರೀ ಬುಟ್ಟಿಯಲ್ಲಿ ಕಾಳುಗಳನ್ನು ತುಂಬಿಕೊಂಡು ಊರ ಗಡಿ ತನಕ ಚೆಲ್ಲಲಾಗುತ್ತದೆ . ಇದು ಜಾತ್ರೆಯ ಬಹುದೊಡ್ಡ ವಿಶೇಷ.
ಬೇವಿನ ಉಡುಗೆ ಸೇವೆ : ಹಗೇದಿಬ್ಬ ವೃತ್ತದ ಬಳಿಯಿರುವ ನಗರದೇವತೆ ದುರ್ಗಾಂಬಿಕಾ ದೇವಿ ಮಹಾದ್ವಾರದ ಕೆಳಗಿನಿಂದ ಚರುಗ ಸಾಗುತ್ತಲೇ ಇತ್ತ, ನಗರದ ಎಲ್ಲ ಕಡೆಗಳಿಂದಲೂ ಸಾಗರದಂತೆ ಭಕ್ತರ ಹರಿವು ದೇವಸ್ಥಾನದ ಕಡೆ ಸಾಗುತ್ತದೆ. ಊರಲ್ಲೆಲ್ಲಾ, ಉಧೋ, ಉಧೋ, ದುಗ್ಗಮ್ಮ ನಿನ್ನಾಲ್ಕುದೋ ಉಧೋ ಎನ್ನುವ ಉದ್ಘಾರ ಮಾರ್ಧನಿಸುತ್ತದೆ ಮಹಿಳೆಯರು, ಪುರುಷರು, ಅಬಾಲ ವೃದ್ಧರಾದಿಯಾಗಿ ಉರುಳು ಸೇವೆ, ದೀಡು ನಮಸ್ಕಾರ, ಬೇವಿನ ಉಡುಗೆ ಸೇವೆಯ ಹರಕೆ ಸಲ್ಲಿಸುತ್ತಾರೆ. ಗುಡಿಯತ್ತಾ ತೆರಳಿ ಪ್ರದಕ್ಷಿಣೆ ಹಾಕಿ, ಅಲ್ಲಿಯೇ ಸ್ನಾನ ಮಾಡಿ ಹೊಸ ಬಟ್ಟೆ ಧರಿಸಿ ಧನ್ಯತಾಭಾವ ಹೊಂದುತ್ತಾರೆ
ಚರಗ ಪೂರ್ಣಗೊಳ್ಳುತ್ತಲೇ ಗುಡಿಯ ಬಾಗಿಲು ತೆರೆದು ಶುದ್ಧಗೊಳಿಸಿ, ವಿಶೇಷ ಪೂಜಾ ಕಾರ್ಯಗಳನ್ನು ಅರ್ಚಕರು ಆರಂಭಿಸುತ್ತಾರೆ. ನಂತರ ಭಕ್ತರಿಗೆ ದರ್ಶನ ಅವಕಾಶ ಕಲ್ಪಿಸಲಾಗುತ್ತದೆ. ಕುರಿ-ಕೋಳಿಗಳನ್ನು ಬಲಿಕೊಡುವ ಭಕ್ತರು ಅಮ್ಮನ ದರ್ಶನ ಪಡೆದು ಅಲ್ಲಿಂದ ಅರಿಶಿನ-ಕುಂಕುಮ ಮತ್ತು ತೀರ್ಥವನ್ನು ಮನೆಗೆ ತೆಗೆದುಕೊಂಡು ಹೋಗಿ ಕುರಿ-ಕೋಳಿಗಳ ಹಣೆಗೆ ಹಚ್ಚಿ, ಬಾಯಲ್ಲಿ ತೀರ್ಥ ಹಾಕಿ ನಂತರ ಬಲಿಕೊಟ್ಟು ಹರಕೆ ತೀರಿಸಿ, ಕೃತಾರ್ಥರಾಗುತ್ತಾರೆ.
ದುಬಾರಿಯಾದ ಕುರಿ-ಕೋಳಿಗಳು : ಈ ಬಾರಿ ಹಬ್ಬ ನಡೆಯುವುದಿಲ್ಲ ಎಂಬ ಅನುಮಾನದಿಂದಾಗಿ ಕುರಿಗಳ ಬಗ್ಗೆ ಕಾಳಜಿ ಕಡಿಮೆಯಾಗಿತ್ತು ಹಾಗಾಗಿ ಆರಂಭದಲ್ಲಿ ಕುರಿಗಳ ಬೆಲೆ ಕಡಿಮೆಯಾಗಿದ್ದರೂ ಹಬ್ಬದ ದಿನಾಂಕ ನಿಗದಿಯಾದ ನಂತರ ಕುರಿಗಳ ಬೆಲೆ ಹೆಚ್ಚಾಗಿದೆ ಎಂಬ ಮಾತು ಕೇಳಿಬರುತ್ತಿದೆ. ಇನ್ನು ಕೋಳಿಗಳು ಸಹ ತಮ್ಮ ಬೆಲೆಯನ್ನು ಹೆಚ್ಚಿಸಿಕೊಂಡಿವೆ.
ಬುಧವಾರ ಮಧ್ಯಾಹ್ನದ ನಂತರ ನಗರದ ಎಲ್ಲೆಡೆ ಮಸಾಲೆಯದೇ ಘಮ ಘಮ. ಹರಿತವಾದ ಕತ್ತಿಯಿಂದ ಕುತ್ತಿಗೆ ಸೀಳಿಸಿಕೊಂಡು, ಕಣ್ಣು ಪಿಳಿಪಿಳಿ ಬಿಡುತ್ತಾ, ಬಾಲ ಅಲ್ಲಾಡಿಸುತ್ತಾ, ಹಾಗೆಯೇ ಕಣ್ಣು ಮುಚ್ಚುವ ಕುರಿಗಳ ಮಾರಣ ಹೋಮವೇ ನಡೆದುಹೋಗುತ್ತದೆ. ಲಕ್ಷಾಂತರ ಸಂಖ್ಯೆಯಲ್ಲಿ ಕುರಿ-ಕೋಳಿಗಳು ಬಲಿಯಾಗುವ ಅಂದಾಜಿದೆ.
ಇಡಿಯಾಗಿ ಕುರಿ ಕೋಳಿಗಳನ್ನು ತರಲಾಗದ ಬಡವರು ಮತ್ತು ತಾರದವರು ಮಾಂಸದಂಗಡಿಯಲ್ಲಿ ತಮಗೆ ಬೇಕಾದಷ್ಟು ಕೆ.ಜಿ. ಖರೀದಿಸುತ್ತಾರೆ. ಮಾಂಸದ ಅಂಗಡಿಗಳು ಜನರಿಂದ ತುಂಬಿ ತುಳುಕುತ್ತಿರುತ್ತವೆ. ಮಾಂಸದಂಗಡಿಗಳ ಮುಂದೆ ಕಡಿದ ಕುರಿಗಳ ತಲೆಗಳ ರಾಶಿಯನ್ನು ನೋಡಲು ಭಯವೆನಿಸುತ್ತದೆ. ಹಲಾಲ್ ಮಾಡುವ, ಕುರಿ ತಲೆ ಸುಡುವ ಮತ್ತು ಕುರಿ ಚರ್ಮ ಕೊಳ್ಳುವ ವ್ಯಾಪಾರಸ್ಥರಿಗೆ ಬಿಡುವಿಲ್ಲದ ಕೆಲಸ.
ಜಾತ್ರೆಯೆಂದರೆ ಅದು ಬರೀ ಅಮ್ಮನ ಪೂಜೆ ಮಾತ್ರವಲ್ಲ, ಅಲ್ಲಿ ಭಕ್ತರಿಗೆ ಬೇಕಾದಂತಹ ಎಲ್ಲವೂ ಲಭ್ಯ. ಮುಖ್ಯವಾಗಿ ಅರಿಶಿಣ-ಕುಂಕುಮ, ಬಳೆ, ಮಕ್ಕಳಿಗೆ ಮುದ ನೀಡುವ ಆಟಿಕೆಗಳು, ತಿಂಡಿ ತಿನಿಸುಗಳು, ಮನರಂಜಿಸಲು ನಾಡಿನ ಹೆಸರಾಂತ ಕಲಾವಿದರ ಸಾಂಸ್ಕೃತಿಕ ಕಾರ್ಯಕ್ರಮಗಳು, ಕುಸ್ತಿ ಪ್ರಿಯರಿಗೆ ಮಲ್ಲಯುದ್ಧ, ಕುರಿ ಕಾಳಗ, ರುಚಿ-ರುಚಿಯಾದ ಮಾಂಸದೂಟದ ಸವಿ. ಸಾಧಕರಿಗೆ ಸನ್ಮಾನದ ಗೌರವ.
ಉತ್ತಂಗಿ ಕೊಟ್ರೇಶ್