`ಅಂತರರಾಷ್ಟ್ರೀಯ ಹಣ್ಣು ಮತ್ತು ತರಕಾರಿಗಳ ವರ್ಷಾಚರಣೆ’ ಕಾರ್ಯಕ್ರಮದಲ್ಲಿ ರೇಷ್ಮಾ ಪರ್ವೀನ್
ದಾವಣಗೆರೆ, ಮಾ.13- ಜನತೆ ಫಾಸ್ಟ್‍ಫುಡ್‍ಗೆ ಮಾರುಹೋಗುತ್ತಿರುವ ಈ ಸಂದರ್ಭದಲ್ಲಿ ಮನುಷ್ಯನ ಮೇಲಾಗುತ್ತಿರುವ ದುಷ್ಪರಿಣಾಮಗಳನ್ನು ತಪ್ಪಿಸಲು ಹಣ್ಣು, ತರಕಾರಿಗಳ ಉಪಯೋಗ ಹೆಚ್ಚಾಗಬೇಕು ಎಂದು ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕಿ ರೇಷ್ಮಾ ಪರ್ವೀನ್ ಕರೆ ನೀಡಿದರು.
ನಗರದ ಸಿದ್ದಗಂಗಾ ಶಾಲೆಯಲ್ಲಿ ತೋಟಗಾರಿಕೆ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ಜಿಲ್ಲಾ ಸಮಿತಿ ವತಿಯಿಂದ ಆಯೋಜಿಸಿದ್ದ `ಅಂತರರಾಷ್ಟ್ರೀಯ ಹಣ್ಣು ಮತ್ತು ತರಕಾರಿಗಳ ವರ್ಷಾಚರಣೆ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಒತ್ತಡದ ಬದುಕಿಗೆ ಪೌಷ್ಟಿಕಾಂಶವುಳ್ಳ ಆಹಾರದ ಅಗತ್ಯವಿದೆ. ಅದು ಪ್ರಕೃತಿಯಲ್ಲಿ ದೊರಕುವ ಹಣ್ಣು, ತರಕಾರಿಗಳಲ್ಲಿ ಹೆಚ್ಚಾಗಿರುತ್ತದೆ. ಹೀಗಾಗಿ ಋತುಮಾನದಲ್ಲಿ ದೊರಕುವ ಎಲ್ಲಾ ಹಣ್ಣು, ತರಕಾರಿಗಳನ್ನು ಬಳಕೆ ಮಾಡಿಬೇಕು. ಇದೊಂದೇ ಉತ್ತಮ ಜೀವನಕ್ಕೆ ಅಡಿಪಾಯ ಆಗಿದೆ ಎಂದರು.
ಪ್ರಸ್ತುತ ದಿನಗಳಲ್ಲಿ ಉತ್ತಮ ಆಹಾರದ ಅವಶ್ಯ ಕತೆ ಇದೆ. ಆಹಾರವೇ ಔಷಧಿಯಾಗಿದೆ. ಅದರಲ್ಲೂ ತರಕಾರಿ, ಸೊಪ್ಪಿನ ಬಳಕೆ ಹೆಚ್ಚಾಗಬೇಕು. ಇದನ್ನು ಉಪಯೋಗಿಸದಿದ್ದಲ್ಲಿ ಔಷಧಿಯೇ ಆಹಾರವನ್ನಾಗಿ ಮಾಡಿಕೊಳ್ಳುವ ಪರಿಸ್ಥಿತಿ ಬರುತ್ತದೆ ಎಂದು ಕಿವಿಮಾತು ಹೇಳಿದರು.
ಆಯುರ್ವೇದಿಕ್ ಮೆಡಿಕಲ್ ಕಾಲೇಜ್ ಮತ್ತು ಪಿ.ಜಿ. ಸೆಂಟರ್‍ನ ದ್ರವ್ಯಗುಣ ವಿಭಾಗದ ಪ್ರಾಧ್ಯಾಪಕಿ ಡಾ. ಕೆ.ಆರ್. ಅಶ್ವಿನಿ ಮಾತನಾಡಿ, ಆಯುರ್ವೇದ ಪದ್ಧತಿಯಲ್ಲಿ ದಿನಕ್ಕೆ ಎರಡು ಬಾರಿ ಆಹಾರ ಸೇವಿಸಬೇಕು. ನಾವುಗಳೂ ಪಾಶ್ಚಿಮಾತ್ಯ ಸಂಸ್ಕೃತಿಗೆ ಒಳಗಾಗಿ ಐದಾರು ಬಾರಿ ಆಹಾರ ಪಡೆಯುತ್ತಿದ್ದೇವೆ. ಇದು ದೇಹ ಮತ್ತು ಆರೋಗ್ಯಕ್ಕೆ ಉತ್ತಮವಲ್ಲ ಎಂದರು.
ಸ್ಥಳೀಯ ಮಾರುಕಟ್ಟೆಯಲ್ಲಿ ದೊರಕುವ ತರಕಾರಿ, ಹಣ್ಣುಗಳ ಖರೀದಿ ಮಾಡಬೇಕಿದೆ. ದೊಡ್ಡ ದೊಡ್ಡ ಮಾಲ್‍ಗಳಿಂದ ಉತ್ತಮ ತರಕಾರಿ, ಹಣ್ಣುಗಳು ದೊರಕುತ್ತವೆ ಅನ್ನುವುದು ಸುಳ್ಳು. ಪ್ರತಿನಿತ್ಯ ಮಾರುಕಟ್ಟೆಯಲ್ಲಿ ಬರುವ ಪದಾರ್ಥಗಳತ್ತ ನಮ್ಮಗಳ ಚಿತ್ತ ಹರಿಸಬೇಕಿದೆ. ಆರೋಗ್ಯ ಸುಧಾರಣೆಗೆ ರಸಗಳನ್ನು (ನೇರಳೆ ರಸ, ಮಧುರಸ, ಅಮ್ಲರಸ) ಸೇವನೆ ಮಾಡುವುದು ಉತ್ತಮ ಎಂದು ಸಲಹೆ ನೀಡಿದರು.
ಪರಿಷತ್ ಜಿಲ್ಲಾ ಸಮಿತಿ ಅಧ್ಯಕ್ಷ ಡಾ.ಬಿ.ಇ. ರಂಗಸ್ವಾಮಿ, ಕಾರ್ಯದರ್ಶಿ ಎಂ. ಗುರುಸಿದ್ದಸ್ವಾಮಿ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ಗೌರವಾಧ್ಯಕ್ಷ ಡಾ.ಜೆ.ಬಿ. ರಾಜ್, ಜಿಲ್ಲಾ ಸಮಿತಿ ಉಪಾಧ್ಯಕ್ಷ ಎನ್.ಎಂ. ಲೋಕೇಶ್, ಜಿಲ್ಲಾ ಸಮಿತಿ ಸದಸ್ಯರಾದ ಸಿದ್ದೇಶ್, ಪುಷ್ಪಕುಮಾರ್ ಉಪಸ್ಥಿತರಿದ್ದರು.