ಕೂಡಲಸಂಗಮ, ಮಾ.13- ದಿನದಿಂದ ದಿನಕ್ಕೆ ಬೆಳಕಿನೆಡೆಗೆ ಸಾಗಬೇಕಾಗಿದ್ದ ಮಾನವನ ಬದುಕು ಕತ್ತಲೆಯ ಕಡೆಗೆ ಸಾಗುತ್ತಲಿದೆ ಎಂದು ಸಾಣೇಹಳ್ಳಿಯ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಇಲ್ಲಿನ ಬಸವ ಧರ್ಮ ಪೀಠದಲ್ಲಿ ನಡೆದ `ಲಿಂಗಾಯತ ಧರ್ಮ ಸಂಕಲ್ಪ ದಿವಸ ಹಾಗೂ ಮಾತೆ ಮಹಾದೇವಿಯವರ ಸ್ಮರಣೋತ್ಸವ’ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಹಲವು ದುರ್ಗುಣಗಳು ಸೇರಿಕೊಂಡು ಮನುಷ್ಯ ರಾಕ್ಷಸನಾಗುತ್ತಿದ್ದಾನೆ. ಮನುಷ್ಯನಲ್ಲಿ ಮಾನವೀಯ ಗುಣಗಳಿರುವಂತೆ ರಾಕ್ಷಸ ಗುಣಗಳೂ ಇರುತ್ತವೆ. ಅವುಗಳಲ್ಲಿ ಯಾವುದನ್ನು ಸ್ವೀಕರಿಸಬೇಕು ಎನ್ನುವ ಅರಿವಿರಬೇಕು ಎಂದರು.
ಬಸವಣ್ಣನವರು ಜನರ ತಪ್ಪುಗಳನ್ನು ನಯವಾಗಿ ಹೇಳುವುದರ ಮೂಲಕ ಜನರ ಮನಸ್ಸುಗಳನ್ನು ವಿಕಾಸಗೊಳಿಸುತ್ತಿದ್ದರು. ಬಸವಣ್ಣನವರ ಪ್ರಭಾವಕ್ಕೆ ಒಳಗಾಗಿ ದೇಶ-ವಿದೇಶಗಳಿಂದ ಬಂದು ತಮ್ಮ ಬದುಕನ್ನು ಕಲ್ಯಾಣದಲ್ಲಿ ಕಟ್ಟಿಕೊಂಡರು. ಅಲ್ಲಿ ಕಾಯಕ, ಲಿಂಗ ನಿಷ್ಠೆ, ದಾಸೋಹ ಪ್ರಜ್ಞೆ ಬೆಳೆಸಿಕೊಂಡವರಿಗೆ ಹೆಚ್ಚು ಗೌರವವಿತ್ತು ಎಂದರು.
ಬಸವಣ್ಣನವರ ತತ್ವಗಳನ್ನು ಹೇಳುವವರು ಒಂದು ಕಡೆಯಾದರೆ, ಆ ತತ್ವಗಳಿಗೆ ಮಸಿ ಬಳಿಯುವ ಕೆಲಸ ಮತ್ತೊಂದು ಕಡೆ ನಡೆಯುತ್ತಿದೆ. 12 ನೇಯ ಶತಮಾನದ ಎಲ್ಲ ಶರಣರು ಲಿಂಗ ಮುಟ್ಟಿ ಲಿಂಗವಾದವರು. ಶರಣರ ವಚನಾಂಕಿತವನ್ನು ಬದಲಾವಣೆ ಮಾಡುವ ಹಕ್ಕು ಆಯಾ ವಚನಕಾರರಿಗೆ ಇರುತ್ತದೆಯೇ ಹೊರತು ಅನ್ಯರಿಗಿರುವುದಿಲ್ಲ. ವಚನಾಂಕಿತವನ್ನು ಬದಲಾವಣೆ ಮಾಡುವ ಬದಲು ಶರಣರ ತತ್ವಗಳನ್ನು ಪ್ರಚಾರ ಮಾಡಿದರೆ ಅದು ಶರಣರಿಗೆ ಗೌರವ ಕೊಟ್ಟಂತೆ ಎಂದರು.
ವೇದಿಕೆಯಲ್ಲಿ ಮಾತೆ ಗಂಗಾಮಾತೆ, ವಿನಯ ಗುರೂಜಿ, ಮಹದೇಶ್ವರ ಸ್ವಾಮೀಜಿ, ಹುನಗುಂದ ಶಾಸಕ ದೊಡ್ಡನಗೌಡ ಪಾಟೀಲ್, ಬಸವರಾಜ್ ಧನ್ನೂರು ಮತ್ತಿತರರು ಇದ್ದರು.