ಲಸಿಕೆಯ ಅಪಪ್ರಚಾರಕ್ಕೆ ಕಿವಿಗೊಡಬೇಡಿ

ಎಲ್ಲರೂ ಲಸಿಕೆ ಪಡೆಯಲು ಸಂಸದ ಜಿ.ಎಂ. ಸಿದ್ದೇಶ್ವರ ಕಿವಿಮಾತು

ದಾವಣಗೆರೆ, ಜ.5 – ಕೊರೊನಾ ಲಸಿಕೆಯ ಬಗ್ಗೆ ಮಾಡಲಾಗುತ್ತಿರುವ ಅಪಪ್ರಚಾರಕ್ಕೆ ಜನರು ಕಿವಿಗೊಡಬಾರದು ಎಂದು ಸಂಸದ ಜಿ.ಎಂ. ಸಿದ್ದೇಶ್ವರ ಕರೆ ನೀಡಿದ್ದಾರೆ.

ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯ ತುಂಗಭದ್ರಾ ಸಭಾಂಗಣದಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ಪ್ರೇರಣಾ ಸಾಂಸ್ಕೃತಿಕ ಸಂಸ್ಥೆ, ಜಿಲ್ಲಾ ಯೋಗ ಒಕ್ಕೂಟ ಹಾಗೂ ಹಿಮಾಲಯನ್ ಅಡ್ವೆಂಚರ್ ಅಕಾಡೆಮಿ ಸಂಯುಕ್ತಾಶ್ರಯದಲ್ಲಿ ಕೊರೊನಾ ವಾರಿಯರ್‌ಗಳಿಗೆ ಏರ್ಪಡಿಸಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.

ಸರ್ಕಾರ ಈಗ ಸರಬರಾಜು ಮಾಡಲು ಮುಂದಾಗಿರುವ ಕೊರೊನಾ ವ್ಯಾಕ್ಸಿನ್ ಬಗ್ಗೆ ಕೆಲವರು ಅಪಪ್ರಚಾರ ಮಾಡುತ್ತಿದ್ದು, ಇದಕ್ಕೆ ಯಾರೂ ಕಿವಿಗೊಡದೇ ಎಲ್ಲರೂ ಲಸಿಕೆ ಪಡೆಯಬೇಕು. ಅಪಪ್ರಚಾರಕ್ಕೆ ಮಣಿದು ಲಸಿಕೆ ಪಡೆಯದಿದ್ದರೆ ಜೀವಕ್ಕೆ ತೊಂದರೆಯಾಗಲಿದೆ ಎಂದು ಕಿವಿಮಾತು ಹೇಳಿದ್ದಾರೆ.

ಅಧಿಕಾರಿಗಳ ತಂಡದ ಪ್ರಯತ್ನ ದಿಂದಾಗಿ ಜಿಲ್ಲೆಯಲ್ಲಿ ಕೊರೊನಾ ನಿಯಂತ್ರ ಣಕ್ಕೆ ಬಂದಿದೆ. ಈಗಿರುವ ಸಕ್ರಿಯ 88 ಪ್ರಕರಣಗಳು ಇನ್ನು ಹತ್ತು ದಿನದಲ್ಲಿ ಶಮನ ವಾಗಿ ಶೂನ್ಯಕ್ಕೆ ಬರುವ ದಿನ ದೂರ ವಿಲ್ಲ ಎಂದೂ ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಕೊರೊನಾ ನಿಯಂತ್ರಿಸಲು ಜಿಲ್ಲಾಡಳಿತ, ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆ ಹಾಗೂ ಜಿಲ್ಲಾ ಪಂಚಾಯತ್, ಆಶಾ ಕಾರ್ಯಕರ್ತೆಯರು ಉತ್ತಮವಾಗಿ ಕೆಲಸ ಮಾಡಿವೆ. ಡಿಸಿ, ಎಸ್ಪಿ, ಸಿಇಒ ಈ ಮೂವರ ಸಮನ್ವತೆಯಿಂದ ಕೆಲಸ ಮಾಡಿ, ಕೊರೊನಾ ನಿಯಂತ್ರಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಶ್ಲಾಘಿಸಿದರು.

ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಮಾತನಾಡಿ, ಕೊರೊನಾದಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಕೆಲಸ ಮಾಡಲು ಅವಕಾಶ ಸಿಕ್ಕಿರುವುದು ನಮ್ಮ ಪುಣ್ಯ. ಕೊರೊನಾ ಅವಧಿಯಲ್ಲಿ ಅದ್ಭುತವಾದ ಬೆಳವಣಿಗೆಗಳು ನಡೆದಿದ್ದು, ಇದನ್ನು ದಾಖಲಿಸುವ ಕೆಲಸ ಆಗಬೇಕಿದೆ ಎಂದರು.

ಕೊರೊನಾ ನಿಯಂತ್ರಿಸಲು ಆರೋಗ್ಯ, ಪೊಲೀಸ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗಳು, ಆಶಾ ಕಾರ್ಯಕರ್ತೆಯರು ಜಿಲ್ಲಾಡಳಿತದೊಂದಿಗೆ ಉತ್ತಮ ರೀತಿಯಲ್ಲಿ ಸಂಪರ್ಕ ಸಾಧಿಸಿ ಶ್ರಮ ವಹಿಸಿ ಕೆಲಸ ಮಾಡಿದ್ದಾರೆ. ಅದರಂತೆ, ಜಿಲ್ಲೆಯ ಜನಪ್ರತಿನಿಧಿಗಳು ಸಹ ಕೆಲಸ ಮಾಡಲು ನಮಗೆ ಹುರುಪು ತುಂಬಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಮಾತನಾಡಿ, ಜಿಲ್ಲೆಯಲ್ಲಿ ಕೊರೊನಾದಿಂದ 250ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಇಂತಹ ಸಂದರ್ಭದಲ್ಲಿ ಜನರು ತಮ್ಮ ಜೀವನ ಶೈಲಿಯಲ್ಲಿ ಮಾಡಿಕೊಂಡಿರುವ ಬದಲಾವಣೆಗಳನ್ನು ಮುಂದುವರೆಸುವ ಮೂಲಕ ತಮ್ಮನ್ನು ರಕ್ಷಿಸಿಕೊಳ್ಳಬೇಕು. ಎಲ್ಲ ಬದಲಾವಣೆ ಪೊಲೀಸರಿಂದ ಸಾಧ್ಯವಿಲ್ಲ ಎಂದು ಹೇಳಿದರು.

ಮೇಯರ್ ಬಿ.ಜಿ.ಅಜಯ ಕುಮಾರ್ ಮಾತನಾಡಿ, ಕೊರೊನಾ ವಾರಿಯರ್‌ಗಳು ದೇವರ ರೂಪದಲ್ಲಿ ಬಂದು ಜನರನ್ನು ಕಾಪಾಡಿದ್ದಾರೆ. ಕೊರೊನಾ ಸಂದರ್ಭದಲ್ಲಿ ದಾನಿಗಳು ಅನ್ನದಾತರ ರೂಪದಲ್ಲಿ ಜನರ ಮನೆಗಳಿಗೆ ದವಸ ಧಾನ್ಯ ಕಳಿಸಿದ್ದಾರೆ ಎಂದು ತಿಳಿಸಿದರು.

ಜಿ.ಪಂ. ಸಿಇಒ ಪದ್ಮ ಬಸವಂತಪ್ಪ ಮಾತನಾಡಿ, ಕೊರೊನಾ ಮುಗಿಯಿತು ಎನ್ನುವ ಹಾಗಿಲ್ಲ. ವೈರಸ್‌ಗಳು ರೂಪಾಂತರ ಆಗುತ್ತಿರುತ್ತವೆ. ಹೀಗಾಗಿ ಜೀವನ ಶೈಲಿ ಬದಲಾಯಿಸಿಕೊಳ್ಳುವುದೇ ಕೊರೊನಾ ಸಮಸ್ಯೆ ನಿವಾರಣೆಯ ಮಾರ್ಗ ಎಂದರು.

ಹಿರಿಯ ಪತ್ರಕರ್ತ ಹೆಚ್.ಬಿ.ಮಂಜುನಾಥ್  ಮಾತನಾಡಿದರು. ಜಿಲ್ಲಾ ಯೋಗ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ವಾಸುದೇವ ರಾಯ್ಕರ್ ಪ್ರಾಸ್ತಾವಿಕ ನುಡಿಗಳನ್ನಾಡಿದರು.

ಪ್ರೇರಣಾ ಸಂಸ್ಥೆ ಅಧ್ಯಕ್ಷೆ ಚೇತನಾ ಶಿವಕುಮಾರ್ ಅಧ್ಯಕ್ಷತೆ ವಹಿಸಿದ್ದರು.  ವೇದಿಕೆಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಕೆ.ಹೆಚ್.ವಿಜಯಕುಮಾರ್, ಜಿಲ್ಲಾ ಆರೋಗ್ಯಾಧಿಕಾರಿ ಡಾ.ನಾಗರಾಜ್, ಡಾ.ಯು.ಸಿದ್ದೇಶ್, ಜಿಲ್ಲಾ ವರದಿಗಾರರ ಕೂಟದ ಅಧ್ಯಕ್ಷ ಜಿ.ಎಂ.ಆರ್. ಆರಾಧ್ಯ, ಡಿ.ವೆಂಕಟೇಶ್ ಕಾಟೆ, ಮರಿಯೋಜಿರಾವ್, ಶಾರದಾ ರಾಯ್ಕರ್ ಮತ್ತಿತರರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಸುಮಾರು ಇನ್ನೂರು ಕೊರೊನಾ ವಾರಿಯರ್‌ಗಳಾದ ವೈದ್ಯರು, ಶುಶ್ರೂಷಕಿಯರು, ಪೊಲೀಸರು, ಪತ್ರಕರ್ತರು ಮತ್ತಿತರರನ್ನು ಸನ್ಮಾನಿಸಲಾಯಿತು.

ಹಿಮಾಲಯನ್ ಅಡ್ವೆಂಚರ್ ಅಕಾಡೆಮಿಯ ಎನ್.ಕೆ.ಕೊಟ್ರೇಶ್ ಸ್ವಾಗತಿಸಿದರು. ಶೃತಿ ನಿರೂಪಿಸಿ, ಪ್ರಾರ್ಥಿಸಿದರು.

error: Content is protected !!