ಕಾಂಗ್ರೆಸ್‌ನಿಂದ 60 ಸಾವಿರ ಬೂತ್‍ಗಳಲ್ಲಿ ನಡೆಯುತ್ತಿರುವ ಅಭಿಯಾನ: ಸಲೀಂ ಅಹ್ಮದ್
ದಾವಣಗೆರೆ, ಮಾ.13- ಕಾಂಗ್ರೆಸ್ ಪಕ್ಷವನ್ನು ಬೂತ್‍ಮಟ್ಟದಲ್ಲಿ ಸಂಘಟಿಸುವ ಉದ್ದೇಶದಿಂದ ಡಿಜಿಟಲ್ ಸದಸ್ಯತ್ವ ಕಾರ್ಯಕ್ರಮ ಹಮ್ಮಿಕೊಂಡಿದ್ದು, 60 ಸಾವಿರ ಬೂತ್‍ಗಳಲ್ಲಿ ಈ ಅಭಿಯಾನ ನಡೆಯುತ್ತಿದೆ. ಮಾರ್ಚ್ 31ರೊಳಗೆ ಮುಕ್ತಾಯವಾಗಲಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಡಿಜಿಟಲ್ ಸದಸ್ಯತ್ವ ಅಭಿಯಾನದಲ್ಲಿ 1.20 ಲಕ್ಷ ಉಪ ನೋಂದಣಿಕಾರರು, 20 ಸಾವಿರ ಹಿರಿಯ ನೋಂದಣಿಕಾರರು ಕೆಲಸ ಮಾಡುತ್ತಿದ್ದು, ಪ್ರತಿ ಬೂತ್‍ಮಟ್ಟದಲ್ಲಿ 200 ಜನರು ಸೇರಿದಂತೆ ರಾಜ್ಯದಲ್ಲಿ 50 ಲಕ್ಷ ಸದಸ್ಯತ್ವ ಗುರಿ ಹೊಂದಲಾಗಿದೆ ಎಂದರು.
ಸಂಘಟನೆ ಮತ್ತು ಹೋರಾಟಕ್ಕೆ ಕಾಂಗ್ರೆಸ್ ಮುಂದಾಗಿದೆ. ಮೊದಲಿಗೆ ಸಂಘಟನೆ ಮೂಲಕ ತಮ್ಮ ಶಕ್ತಿಯನ್ನು ವೃದ್ಧಿಸಿಕೊಳ್ಳಲಿದ್ದೇವೆ. ಮುಂದೆ ಬೂತ್‍ಮಟ್ಟದಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಜನವಿರೋಧಿ ನೀತಿಗಳ ವಿರುದ್ಧ ಹೋರಾಟ ನಡೆಸಲಿದ್ದೇವೆ ಎಂದು ಹೇಳಿದರು.
ಪಂಚರಾಜ್ಯಗಳ ಚುನಾವಣೆಯಲ್ಲಿ ಪಂಜಾಬ್‍ನಲ್ಲಿ ನಮ್ಮಗಳ ಸ್ವಯಂಕೃತ ತಪ್ಪಿನಿಂದ ಅಧಿಕಾರ ಕಳೆದುಕೊಂಡಿದ್ದೇವೆ. ಉತ್ತರ ಪ್ರದೇಶದಲ್ಲಿ ಕಳೆದ ಚುನಾವಣೆಗಿಂತ ಈ ಬಾರಿ ಬಿಜೆಪಿ 47 ಸ್ಥಾನಗಳನ್ನು ಕಳೆದುಕೊಂಡಿದೆ. ಇದನ್ನು ನೋಡಿದರೆ, ಬಿಜೆಪಿ ವರ್ಚಸ್ಸು ಕಡಿಮೆ ಆಗಿಲ್ಲವೇ? ಎಂದು ಪ್ರಶ್ನಿಸಿದ ಸಲೀಂ, ಕಾಂಗ್ರೆಸ್‍ಗೆ ಸೋಲನ್ನು ಜೀರ್ಣಿಸಿ ಕೊಳ್ಳುವ ಶಕ್ತಿ ಇದೆ. ಮುಂದೆ ಕರ್ನಾಟಕ ದಲ್ಲಿ ನಡೆಯುವ ಚುನಾವಣೆಯಲ್ಲಿ ಪಕ್ಷಕ್ಕೆ ಬಹುಮತ ಬಂದು ಅಧಿಕಾರ ಹಿಡಿಯಲಿದ್ದೇವೆ ಎಂದರು.
ಮೇಕೆದಾಟು ವಿಚಾರದಲ್ಲೂ ಕಾಂಗ್ರೆಸ್ ಹೋರಾಟ ನಡೆಸಿ ಯಶಸ್ವಿಯಾಗಿದೆ. ನಮ್ಮ ವಿರುದ್ಧ ನೂರಾರು ಪ್ರಕರಣಗಳನ್ನು ದಾಖಲಿಸಿದರೂ ನಾವುಗಳು ಹೆದರಿಲ್ಲ. ಈಗ ಈ ಸರ್ಕಾರ ಮೇಕೆದಾಟು ಯೋಜನೆಗೆ ಬಜೆಟ್‍ನಲ್ಲಿ ಒಂದು ಸಾವಿರ ಕೋಟಿ ರೂ. ಹಣ ಮೀಸಲಿಟ್ಟಿದೆ. ರಾಜ್ಯದ 25 ಜನ ಸಂಸದರು, ಐದು ಜನ ಕೇಂದ್ರ ಮಂತ್ರಿಗಳಿದ್ದರೂ ಪರಿಸರ ಇಲಾಖೆಯಿಂದ ನಿರಾಪೇಕ್ಷಣಾ ಪ್ರಮಾಣ ಪತ್ರ ತರುವಲ್ಲಿ ವಿಫಲರಾಗಿದ್ದಾರೆ ಎಂದು ಟೀಕಿಸಿದರು.
ರಾಜ್ಯದ ಬಿಜೆಪಿ ಸರ್ಕಾರ ಶೇ.40ರಷ್ಟು ಪರ್ಸೆಂಟೇಜ್ ಪಡೆಯುತ್ತಿದೆ ಎಂದು ಗುತ್ತಿಗೆದಾರರು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದರು. ಚುನಾವಣೆಗಳ ಸಂದರ್ಭದಲ್ಲಿ ಪ್ರಧಾನ ಮಂತ್ರಿ ನಾನು ಹಣ ತಿನ್ನಲ್ಲ, ತಿನ್ನಲು ಬಿಡುವುದಿಲ್ಲ ಎಂದು ಹೇಳಿದ್ದರು. ಆದರೆ ಗುತ್ತಿಗೆದಾರರ ಪತ್ರಕ್ಕೆ ಮೌನ ವಹಿಸಿದ್ದಾರೆ ಎಂದರು.
ಕೇಂದ್ರ ಸರ್ಕಾರ ಜನಸಾಮಾನ್ಯರನ್ನು ಸುಲಿಗೆ ಮಾಡುತ್ತಿದೆ.ಪೆಟ್ರೋಲ್, ಅಡುಗೆ ಅನಿಲ ದರ ಗಗನಕ್ಕೇರಿದೆ. ಪ್ರಧಾನಿ ಮೋದಿ ಅವರು ಅಧಿಕಾರ ಸಿಕ್ಕಾಗಿನಿಂದ ಹೇಳುತ್ತಿದ್ದ ಸುಳ್ಳನ್ನು ಮತ್ತೆ ಮುಂದುವರೆಸಿದ್ದಾರೆ. ಸ್ವರ್ಗ ತೋರಿಸುತ್ತೇನೆ ಎಂದು ನರಕದ ದರ್ಶನ ಮಾಡಿದ್ದಾರೆ ಎಂದು ಸಲೀಂ ಅಹಮ್ಮದ್ ಕಿಡಿಕಾರಿದರು. ರಾಜ್ಯದಲ್ಲಿ ಚುನಾವಣೆ ನಡೆದರೆ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಎಐಸಿಸಿ ವೀಕ್ಷಕ ಸುದರ್ಶನ್ ನಚಿವನ್, ಕಾಂಗ್ರೆಸ್ ನಾಯಕ ವಿ.ಎಸ್. ಉಗ್ರಪ್ಪ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹೆಚ್.ಬಿ. ಮಂಜಪ್ಪ, ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ. ಶೆಟ್ಟಿ, ಮಾಜಿ ಶಾಸಕ ರಾಜೇಶ್, ಕೆಪಿಸಿಸಿ ವಕ್ತಾರ ಡಿ. ಬಸವರಾಜ್, ಪಾಲಿಕೆ ವಿಪ ನಾಯಕ ಗಡಿಗುಡಾಳ್ ಮಂಜುನಾಥ, ಸದಸ್ಯ ಎ. ನಾಗರಾಜ್, ಉದಯ ಕುಮಾರ್, ಎ.ಬಿ. ರಹೀಂ, ಕೆ.ಎಸ್. ಬಸವಂತಪ್ಪ, ಅಯೂಬ್ ಪೈಲ್ವಾನ್, ಕೆ.ಜಿ. ಶಿವಕುಮಾರ್, ಜಿಲ್ಲಾ ಕಾಂಗ್ರೆಸ್ ಮಹಿಳಾ ಅಧ್ಯಕ್ಷೆ ಅನಿತಾ ಬಾಯಿ ಮತ್ತಿತರರು ಉಪಸ್ಥಿತರಿದ್ದರು.