ಅಂಗನವಾಡಿ ಕೇಂದ್ರಗಳಲ್ಲಿ ‘ಪೌಷ್ಟಿಕ ಕೈತೋಟ’ ಗಳನ್ನು ನಿರ್ಮಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು. ಪ್ರತಿ ತಾಲ್ಲೂಕಿನಲ್ಲಿ 5 ರಿಂದ 10 ಉತ್ತಮವಾದ ಪೌಷ್ಟಿಕ ಕೈತೋಟಗಳನ್ನು ನಿರ್ಮಿಸುವ ಮೂಲಕ ರಾಜ್ಯಕ್ಕೆ ಮಾದರಿಯಾಗಬೇಕು.
– ಮಹಾಂತೇಶ ಬೀಳಗಿ, ಜಿಲ್ಲಾಧಿಕಾರಿ
ದಾವಣಗೆರೆ, ಜ.4- ಜಿಲ್ಲೆಯಲ್ಲಿ ಅಪೌಷ್ಟಿಕತೆ ಯಿಂದ ಬಳಲುವ ಮಕ್ಕಳನ್ನು ಎನ್ಆರ್ಸಿ ಕೇಂದ್ರಗಳಿಗೆ ದಾಖಲು ಮಾಡಬೇಕು. ತಪ್ಪಿದಲ್ಲಿ ಸಂಬಂಧಿಸಿದ ಸಿಡಿಪಿಓ, ಅಧೀಕ್ಷಕರು ಮತ್ತು ವಿಷಯ ನಿರ್ವಾಹಕರ ಮೇಲೆ ಶಿಸ್ತಿನ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಎಚ್ಚರಿಕೆ ನೀಡಿದರು.
ಸೋಮವಾರ ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ವಿವಿಧ ಯೋಜನೆಗಳಾದ ಪೋಷಣ್ ಅಭಿಯಾನ ಯೋಜನೆ, ಕಿರುಸಾಲ ಯೋಜನೆ, ಕೌಟುಂಬಿಕ ಹಿಂಸೆಯಿಂದ ಮಹಿಳೆಯರ ಸಂರಕ್ಷಣೆ ಕಾಯ್ದೆಯಡಿ ಜಿಲ್ಲಾ ಮಟ್ಟದ ಸಮನ್ವಯ ಸಭೆ, ಬಾಲ್ಯ ವಿವಾಹ ನಿಷೇಧ ಯೋಜನೆ, ಸ್ವಾಧಾರ ಯೋಜನೆಯ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿನ ತೀವ್ರ ಮತ್ತು ಸಾಧಾರಣ ಸೇರಿದಂತೆ ಒಟ್ಟು 225 ಅಪೌಷ್ಟಿಕ ಮಕ್ಕಳನ್ನು ಗುರುತಿಸಲಾಗಿದೆ. ಯಾವುದೇ ಮಕ್ಕಳು ಅಪೌಷ್ಟಿಕತೆಯಿಂದ ಬಳಲಬಾರದೆಂದು ಸರ್ಕಾರ ಜಿಲ್ಲಾಸ್ಪತ್ರೆಯಲ್ಲಿ ಎನ್ಆರ್ಸಿ (ನ್ಯೂಟ್ರಿಷನ್ ರಿಹ್ಯಾಬಿಲಿಟೇಷನ್ ಸೆಂಟರ್) ತೆರೆದಿದೆ. ಅಪೌಷ್ಟಿ ಕತೆಯಿಂದ ಬಳಲುವ ಮಕ್ಕಳಿಗೆ ಇದೊಂದು ವರದಾನವಾಗಿದ್ದು, ಮಕ್ಕಳನ್ನು ಎನ್ಆರ್ಸಿಗೆ ದಾಖಲಿಸಬೇಕು. ತಾಲ್ಲೂಕುಗಳಲ್ಲಿ ಸಿಡಿಪಿಓ ಗಳು, ಅಧೀಕ್ಷಕರು, ವಿಷಯ ನಿರ್ವಾಹಕರು ಈ ಬಗ್ಗೆ ಗಮನ ಹರಿಸಿ, ಪೋಷಕರ ಮನವೊಲಿಸಿ ಈ ಮಕ್ಕಳನ್ನು ಕೇಂದ್ರಕ್ಕೆ ಸೇರಿಸಬೇಕು ಎಂದರು.
ತಾಲ್ಲೂಕುಗಳ ಸಿಡಿಪಿಓ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಪನಿರ್ದೇಶಕರು ಪ್ರತಿಕ್ರಿಯಿಸಿ ಪೋಷಕರು ತಮ್ಮ ಮಕ್ಕಳನ್ನು ಕೇಂದ್ರಕ್ಕೆ ಸೇರಿಸಲು ಒಪ್ಪುತ್ತಿಲ್ಲ. ಏನಾದರೊಂದು ಕಾರಣ ಹೇಳುತ್ತಾರೆಂದರು.
ಸರ್ಕಾರ ಎಷ್ಟೆಲ್ಲಾ ಹಣ ಖರ್ಚು ಮಾಡಿ ಸಿಆರ್ಸಿ ತೆರೆದಿದೆ. ಇದೊಂದು ಮುಖ್ಯವಾದ ಯೋಜನೆಯಾಗಿದ್ದು, ಹೇಗಾದರೂ ಪೋಷಕರ ಮನವೊಲಿಸಿ ಮಕ್ಕಳನ್ನು ಎನ್ಆರ್ಸಿಗೆ ದಾಖ ಲಿಸಿ, ಮಕ್ಕಳನ್ನು ಅಪೌಷ್ಟಿಕತೆಯಿಂದ ಹೊರತರ ಬೇಕು ಎಂದು ಜಿಲ್ಲಾಧಿಕಾರಿಗಳು ಸೂಚಿಸಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಪ ನಿರ್ದೇಶಕ ವಿಜಯಕುಮಾರ್ ಮಾತನಾಡಿ, 2020-21 ನೇ ಸಾಲಿನಲ್ಲಿ ಜಿಲ್ಲೆಯಲ್ಲಿ ಒಟ್ಟು 62 ಬಾಲ್ಯ ವಿವಾಹ ಪ್ರಕರಣ ದಾಖಲಾಗಿದ್ದು, ಈ ಪೈಕಿ 61 ಬಾಲ್ಯ ವಿವಾಹಗಳನ್ನು ತಡೆಯಲಾಗಿದೆ. ಒಂದು ಬಾಲ್ಯ ವಿವಾಹ ನಡೆದಿದ್ದು ಎಫ್ಐಆರ್ ದಾಖಲಿಸಲಾಗಿದೆ ಎಂದರು.
ಜಿಲ್ಲಾಧಿಕಾರಿಗಳು ಮಾತನಾಡಿ, ಕೋವಿಡ್ ಹಿನ್ನೆಲೆಯಲ್ಲಿ ಶಾಲಾ-ಕಾಲೇಜು ಆರಂಭವಾಗಿಲ್ಲವೆಂದು ಎಷ್ಟೋ ಪೋಷಕರು ತಮ್ಮ ಮಕ್ಕಳನ್ನು ಮದುವೆ ಮಾಡುತ್ತಿದ್ದಾರೆ. ಆದ ಕಾರಣ ಬಾಲ್ಯ ವಿವಾಹ ತಡೆ ತಂಡ ಆದಷ್ಟು ಸಕ್ರಿಯವಾಗಿ ಕೆಲಸ ಮಾಡಬೇಕು ಎಂದರು.
ಬಾಡಿಗೆ ಕಟ್ಟಡ ಬೇಡ : ಜಿಲ್ಲೆಯಲ್ಲಿ ಒಟ್ಟು 1721 ಅಂಗನವಾಡಿ ಕಟ್ಟಡಗಳಿದ್ದು ನಗರದಲ್ಲೇ 375 ಅಂಗನವಾಡಿಗಳು ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿವೆ. ಖಾಸಗಿ ಕಟ್ಟಡದಲ್ಲಿ ಅಂಗನವಾಡಿ ನಡೆಸುವುದು ಬೇಡ. ಸರ್ಕಾರಿ ಜಮೀನು ನೀಡಲಾಗುವುದು. ಎಸ್ಸಿಪಿ/ಟಿಎಸ್ಪಿ ಮತ್ತು ಇತರೆ ಯೋಜನೆಗಳಡಿ ಕಟ್ಟಡಗಳನ್ನು ನಿರ್ಮಿಸಬೇಕು. ಹಾಗೂ ಶಾಲೆಗಳ ಹೆಚ್ಚುವರಿ ಕಟ್ಟಡವನ್ನು ಅಂಗನವಾಡಿ ಕಟ್ಟಡವಾಗಿ ಬಳಕೆ ಮಾಡಿಕೊಳ್ಳಲು ಅನುಮತಿ ನೀಡಲಾಗಿದೆ. ಇನ್ನು ಮುಂದೆ ಬಾಡಿಗೆ ಕಟ್ಟಡದಲ್ಲಿ ಅಂಗನವಾಡಿ ನಡೆಸಬಾರದು. ಆದಷ್ಟು ಶೀಘ್ರದಲ್ಲೇ ಜಾಗ ಗುರುತಿಸಿ ಸ್ವಂತ ಕಟ್ಟಡಗಳನ್ನು ಹೊಂದಬೇಕೆಂದು ಸೂಚನೆ ನೀಡಿದ ಅವರು ತಾವು, ಸಿಇಓ ಅಂಗನವಾಡಿ ಕೇಂದ್ರಗಳಿಗೆ ದಿಢೀರ್ ಭೇಟಿ ನೀಡುವುದಾಗಿ ಡಿಸಿ ತಿಳಿಸಿದರು.
ಇದೇ ವೇಳೆ ಬಾಲ್ಯ ವಿವಾಹ ತಡೆಗೆ ಸಂಬಂಧಿಸಿದ ಕೈಪಿಡಿಯನ್ನು ಜಿಲ್ಲಾಧಿಕಾರಿ, ಜಿ.ಪಂ ಸಿಇಓ ಪದ್ಮಾ ಬಸವಂತಪ್ಪ ಸೇರಿದಂತೆ ಅಧಿಕಾರಿಗಳು ಬಿಡುಗಡೆ ಮಾಡಿದರು.
ಸಭೆಯಲ್ಲಿ ಡಿವೈಎಸ್ಪಿ ಬಿ.ಎಸ್.ಬಸವರಾಜ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಕೆ.ಸಿ.ಬಸವರಾಜಯ್ಯ, ಜಿ.ಪಂ. ಮುಖ್ಯ ಯೋಜನಾಧಿಕಾರಿ ಲೋಕೇಶ್, ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ.ಗಂಗಾಧರ್, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ ಕೌಸರ್ ರೇಷ್ಮಾ, ಲೀಡ್ ಬ್ಯಾಂಕ್ ಮ್ಯಾನೇಜರ್ ಸುಶ್ರುತ ಡಿ.ಶಾಸ್ತ್ರಿ ಇತರರು ಉಪಸ್ಥಿತರಿದ್ದರು.